ರಾಷ್ಟ್ರೀಯ

#MeToo ಅಭಿಯಾನಕ್ಕೆ ನ್ಯಾಯಮೂರ್ತಿಗಳಿರುವ ಸಮಿತಿಯಿಂದ ಪ್ರಕರಣಗಳ ವಿಚಾರಣೆ?

Pinterest LinkedIn Tumblr


ನವದೆಹಲಿ: ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ವಿರುದ್ಧ ದೇಶದೆಲ್ಲೆಡೆ ತೀವ್ರಗೊಂಡಿರುವ ಮೀಟೂ(#MeToo) ಅಭಿಯಾನಕ್ಕೆ ಕಾನೂನು ಬೆಂಬಲ ಸಿಗುವ ನಿರೀಕ್ಷೆ ಮೂಡಿದೆ. ಲೈಂಗಿಕ ಕಿರುಕುಳ ದೂರುಗಳ ವಿಚಾರಣೆಗೆ ಸಮಿತಿಯೊಂದನ್ನು ರಚಿಸಲು ಕೇಂದ್ರ ಸರಕಾರ ಮುಂದಾಗಿದೆ. ಸಂತ್ರಸ್ತ ಮಹಿಳೆಯರ ಹೋರಾಟಕ್ಕೆ ಕೇಂದ್ರ ಸಚಿವೆ ಮನೇಕಾ ಗಾಂಧಿ ಒಂದು ತಾರ್ಕಿಕ ತಿರುವು ಕೊಡಲು ನಿರ್ಧರಿಸಿದ್ದಾರೆ. ಹಿರಿಯ ನ್ಯಾಯಮೂರ್ತಿಗಳು ಹಾಗೂ ಕಾನೂನು ತಜ್ಞರನ್ನೊಳಗೊಂಡ ಸಮಿತಿ ರಚನೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ ಇದೆ.

“ಅವರ ಮಾತುಗಳನ್ನ ನಂಬುತ್ತೇನೆ. ಪ್ರತಿಯೊಂದು ದೂರಿನ ಹಿಂದಿರುವ ನೋವು ಮತ್ತು ಯಾತನೆಯನ್ನು ನಾನು ಅರಿಯಬಲ್ಲೆ. #MeToo ಅಭಿಯಾನದಲ್ಲಿ ಹೊರಬರುವ ಎಲ್ಲಾ ದೂರುಗಳನ್ನ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲು ನಾನು ಪ್ರಸ್ತಾವನೆ ಮುಂದಿಡುತ್ತಿದ್ದೇನೆ,” ಎಂದು ಪಿಟಿಐ ಸುದ್ದಿ ಸಂಸ್ಥೆಗೆ ಮನೇಕಾ ಗಾಂಧಿ ತಿಳಿಸಿದ್ದಾರೆ.

ಲೈಂಗಿಕ ಕಿರುಕಳದ ದೂರುಗಳನ್ನ ಪರಿಶೀಲಿಸಲು ಈಗಾಗಲೇ ಇರುವ ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟನ್ನು ಈ ಸಮಿತಿ ಅವಲೋಕಿಸುತ್ತದೆ. ಅಗತ್ಯ ಬಿದ್ದರೆ ಈ ಕಾನೂನುಗಳನ್ನ ಬಲಪಡಿಸುವ ಮಾರ್ಗೋಪಾಯವನ್ನೂ ಈ ಸಮಿತಿ ಸೂಚಿಸಲಿದೆ ಎಂದು ಮನೇಕಾ ಗಾಂಧಿ ಹೇಳಿದ್ದಾರೆ.

ಕಳೆದ ವರ್ಷ ಶುರುವಾದ #MeToo ಅಭಿಯಾನ ಈಗ ವಿಶ್ವಮಟ್ಟದಲ್ಲಿ ದೊಡ್ಡ ಚಳವಳಿ ರೂಪವೇ ಪಡೆಯುತ್ತಿದೆ. ಭಾರತದಲ್ಲೂ ಇತ್ತೀಚೆಗೆ ಇದು ದೊಡ್ಡಮಟ್ಟದಲ್ಲಿ ಪ್ರಚಾರ ಆಗುತ್ತಿದೆ. ಮನೇಕಾ ಗಾಂಧಿ ಹೊರತುಪಡಿಸಿ ಕೇಂದ್ರ ಸಂಪುಟದಲ್ಲಿರುವ ಮಹಿಳಾ ಸಚಿವರ್ಯಾರೂ ಅಷ್ಟು ಪೂರಕವಾಗಿ ಸ್ಪಂದಿಸಿಲ್ಲ. ಕೇಂದ್ರ ಸಚಿವ ಎಂ.ಜೆ. ಅಕ್ಬರ್ ವಿರುದ್ಧವೂ ಆರೋಪ ಸುರುಳಿ ಸುತ್ತಿದ್ದರೂ ಯಾರೂ ಕೂಡ ಅವರನ್ನು ಟೀಕಿಸುವ ಗೋಜಿಗೆ ಹೋಗಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಮನೇಕಾ ಗಾಂಧಿ ಏಕಾಂಗಿಯಾಗಿ ಹೋರಾಟ ಮಾಡುತ್ತಿರುವಂತೆ ಭಾಸವಾಗುತ್ತಿದೆ.

ಆರೆಸ್ಸೆಸ್ ಹಾಗೂ ಅನೇಕ ಬಿಜೆಪಿ ಮುಖಂಡರು ಮೀಟೂ ಅಭಿಯಾನವನ್ನು ಸ್ವಾಗತಿಸಿರುವುದು ಗಮನಾರ್ಹ. ಆದರೆ, ಕೇಂದ್ರ ಸರಕಾರದಿಂದ ಮಾತ್ರ ಪೂರಕ ಸ್ಪಂದನೆ ಸಿಗುತ್ತಿಲ್ಲವೆಂದು ವಿಪಕ್ಷಗಳು ಟೀಕಿಸಿವೆ.

ಯಾವುದಾದರೂ ಕಾಲಘಟ್ಟದಲ್ಲಾದರೂ ಸರಿ ಮಹಿಳೆಯರು ತಮ್ಮ ಜೀವನದಲ್ಲಿ ನಡೆದ ಲೈಂಗಿಕ ಕಿರುಕುಳದ ಘಟನೆಯನ್ನು ಮೀಟೂ ಹ್ಯಾಷ್ ಟ್ಯಾಗ್ ಮೂಲಕ ಬಹಿರಂಗಪಡಿಸುವ ಟ್ರೆಂಡ್ ಇದಾಗಿದೆ. ನಟರು, ನಿರ್ದೇಶಕರು, ಗಾಯಕರು ಹೀಗೆ ಅನೇಕ ಪುರುಷ ಸೆಲಬ್ರಿಟಿಗಳ ಕರಾಳ ಮುಖವನ್ನು ಮಾನಿನಿಯರು ಸಾರ್ವಜನಿಕವಾಗಿ ಅನಾವರಣಗೊಳಿಸುತ್ತಿದ್ದಾರೆ. ಆರೋಪಕ್ಕೊಳಗಾದ ಕೆಲ ಪುರುಷರು ತಮ್ಮ ತಪ್ಪಿಗೆ ಕ್ಷಮಾಪಣೆ ಕೋರಿ ದೊಡ್ಡತನ ತೋರಿದ್ದಾರೆ. ಕೆಲವರು ಇದು ತಮ್ಮ ತೇಜೋವಧೆಗೆ ಮಾಡಿರುವ ಪಿತೂರಿ ಎಂದು ಆರೋಪ ತಳ್ಳಿಹಾಕಿದ್ದಾರೆ. ಒಟ್ಟಾರೆಯಾಗಿ ಮೀಟೂ ಅಭಿಯಾನವು ಹೊಸ ಚರ್ಚೆ ಹುಟ್ಟುಹಾಕಿರುವುದಂತೂ ಹೌದು. ಇದರ ಬಿಸಿ ಆರದ ರೀತಿಯಲ್ಲಿ ಕಾಪಾಡುವ ಹೊಣೆ ಕಾನೂನಿನ ಹೆಗಲಿಗಿದೆ.

Comments are closed.