ಕರ್ನಾಟಕ

ಶಿಕ್ಷಣ ಸಚಿವ ಮಹೇಶ್ ತನ್ನ ಸ್ಥಾನಕ್ಕೆ ರಾಜೀನಾಮೆಗೆ ಕೊಟ್ಟ ಕಾರಣವೇನು ಗೊತ್ತಾ?

Pinterest LinkedIn Tumblr


ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌. ಮಹೇಶ್‌ ತಮ್ಮ ಸ್ಥಾನಕ್ಕೆ ಗುರುವಾರ ದಿಢೀರ್‌ ರಾಜೀನಾಮೆ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ. ಇದರೊಂದಿಗೆ, ಅಸ್ಥಿರತೆಯ ನೆರಳಲ್ಲಿ ಸಾಗುತ್ತಿರುವ ಜೆಡಿಎಸ್‌-ಕಾಂಗ್ರೆಸ್‌ ದೋಸ್ತಿ ಸರಕಾರದ ಮೊದಲ ‘ವಿಕೆಟ್‌’ ಪತನವಾದಂತಾಗಿದೆ. ಜತೆಗೆ ಮೈತ್ರಿ ಸರಕಾರಕ್ಕೆ ಭಾರಿ ಆಘಾತವಾಗಿದೆ. ಇದಿಷ್ಟೇ ಅಲ್ಲ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರುದ್ಧದ ಮಹಾಮೈತ್ರಿ ಕನಸಿಗೂ ಈ ಬೆಳವಣಿಗೆ ಘಾಸಿ ಉಂಟುಮಾಡಲಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಚುನಾವಣೆಪೂರ್ವ ಮೈತ್ರಿ ಮಾಡಿಕೊಂಡಿದ್ದ ಬಿಎಸ್ಪಿಯಿಂದ ಏಕೈಕ ಶಾಸಕರಾಗಿ ಕೊಳ್ಳೇಗಾಲ ಮೀಸಲು ಕ್ಷೇತ್ರದಿಂದ ಎನ್‌. ಮಹೇಶ್‌ ಆಯ್ಕೆಯಾಗಿದ್ದರು. ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರದಲ್ಲಿ ಬಿಎಸ್ಪಿ ಪ್ರತಿನಿಧಿಯಾಗಿ ಜೆಡಿಎಸ್‌ ಕೋಟಾದಲ್ಲಿ ಮಹೇಶ್‌ ಸಚಿವರಾಗಿದ್ದರು. ಮಂತ್ರಿ ಪದವಿಯಲ್ಲಿ ನಾಲ್ಕು ತಿಂಗಳು ಪೂರ್ಣಗೊಳಿಸುವ ಮುನ್ನವೇ ಮಹೇಶ್‌ ರಾಜೀನಾಮೆ ನೀಡಿರುವುದು ದೋಸ್ತಿ ಸರಕಾರದೊಳಗಿನ ಗೊಂದಲವನ್ನು ಇನ್ನಷ್ಟು ಜಗಜ್ಜಾಹೀರು ಮಾಡಿದೆ.

ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಸೆಣಸುವ ಕಾಂಗ್ರೆಸ್‌ ನೇತೃತ್ವದ ‘ಮಹಾಘಟಬಂಧನ್‌’ ಕೊಂಡಿಗಳು ಕಳಚುತ್ತಿರುವ ಬೆನ್ನಲ್ಲೇ, ರಾಜ್ಯದಲ್ಲೂ ಕಾಂಗ್ರೆಸ್‌ನೊಂದಿಗೆ ಅಧಿಕಾರ ಹಂಚಿಕೊಳ್ಳಲು ಬಯಸದ ಬಿಎಸ್ಪಿ ಧುರೀಣೆ ಮಾಯಾವತಿ ಸೂಚನೆಯಂತೆ ಎನ್‌.ಮಹೇಶ್‌ ಸಂಪುಟದಿಂದ ಹೊರಬಂದಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್‌ಗೆ ಮುಜುಗರದ ಜತೆಗೆ, ಅಧಿಕಾರ ಉಳಿಸಿಕೊಳ್ಳುವ ಜೆಡಿಎಸ್‌ಗೆ ಇಕ್ಕಟ್ಟಿನ ಸನ್ನಿವೇಶವನ್ನು ಇಮ್ಮಡಿಗೊಳಿಸಿದೆ.

ಕಳೆದ ವಾರವಷ್ಟೇ ಮಹೇಶ್‌ ಕಾಂಗ್ರೆಸ್‌ನಿಂದಾಗಿಯೇ ದೇಶದಲ್ಲಿ ಜಾತಿ ವ್ಯವಸ್ಥೆ ನಾಶಮಾಡಲು ಸಾಧ್ಯವಾಗಿಲ್ಲ ಎಂದು ಗುಡುಗಿದ್ದರು. ಇದಕ್ಕೆ ಪುಟ್ಟರಂಗಶೆಟ್ಟಿ ಸೇರಿದಂತೆ ಸಂಪುಟ ಸಹೋದ್ಯೋಗಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಈ ಬೆಳವಣಿಗೆ ಮಧ್ಯೆಯೇ ಬಿಜೆಪಿ ನಾಯಕ ಹಾಗೂ ಮಾಜಿ ಡಿಸಿಎಂ ಆರ್‌.ಅಶೋಕ್‌ ಇನ್ನು ಎರಡು ತಿಂಗಳಲ್ಲಿ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಅಧಿಕಾರ ಗದ್ದುಗೆಯಲ್ಲಿ ಇರಲಿದೆ ಎನ್ನುವ ಮೂಲಕ ಮತ್ತೆ ‘ಆಪರೇಷನ್‌ ಕಮಲ’ದ ಸುಳಿವು ಬಿಟ್ಟುಕೊಟ್ಟಿರುವುದು ಮಹತ್ವ ಪಡೆದುಕೊಂಡಿದೆ.

ಸುಳಿವಿತ್ತೇ?: ಮಹೇಶ್‌ ರಾಜೀನಾಮೆ ಪ್ರಕಟ ಮಾಡುವ ಕೆಲವು ತಾಸು ಮೊದಲು ಸಮಾರಂಭವೊಂದರಲ್ಲಿ ಮಾತನಾಡಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆಯಾದಾಗ ಪರ್ಯಾಯ ರಾಜಕೀಯ ಶಕ್ತಿಯನ್ನು ರೂಪಿಸಲು ಹಲವು ಪಕ್ಷ ಗಳನ್ನು ಒಂದೇ ವೇದಿಕೆಯಲ್ಲಿ ತರಲಾಗಿತ್ತು. ಆದರೆ, ಇದಕ್ಕೆ ಯಶಸ್ಸು ಸಿಗುವ ಬಗ್ಗೆ ಅನುಮಾನವಿದೆ. ಹುಟ್ಟುಹಾಕಿದ ಪರ್ಯಾಯ ರಾಜಕೀಯ ಶಕ್ತಿಯೊಳಗಿನ ಅವ್ಯವಸ್ಥೆ ಸರಿಪಡಿಸುವುದು ಮತ್ತು ಅದನ್ನು ಬೆಳೆಯುವ ಬಗ್ಗೆ ನನಗೇ ಅನುಮಾನ ಕಾಡುತ್ತಿದೆ ಎಂದು ಒಗಟಾಗಿ ಹೇಳಿದ್ದರು.

ಛತ್ತೀಸ್‌ಗಢ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ ಅವರು ಕಾಂಗ್ರೆಸ್‌ ಜತೆಗಿನ ಮೈತ್ರಿ ಕಡಿದುಕೊಂಡಿರುವುದು ಹಾಗೂ ಇತರ ಕೆಲವು ಪ್ರಾದೇಶಿಕ ಪಕ್ಷಗಳೂ ಅದೇ ಹಾದಿ ತುಳಿಯುವ ಚಿಂತನೆಯಲ್ಲಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ದೇವೇಗೌಡರು ಈ ಹೇಳಿಕೆ ನೀಡಿದ್ದರು.

ಕಳೆದ ಗುರುವಾರ ಸಚಿವ ಸಂಪುಟ ಸಭೆಗೆ ಮುನ್ನ ಎನ್‌.ಮಹೇಶ್‌ ಅವರು ತಮ್ಮ ರಾಜೀನಾಮೆಯ ಸುಳಿವು ಬಿಟ್ಟುಕೊಟ್ಟಿದ್ದರು. ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲೂ ಸ್ವತಂತ್ರ ಸ್ಪರ್ಧೆಗೆ ಬಿಎಸ್ಪಿ ಸಿದ್ಧತೆ ಆರಂಭಿಸಿದೆ. ರಾಜ್ಯದಲ್ಲಿ ಜೆಡಿಎಸ್‌ ಪಕ್ಷದೊಂದಿಗೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದ ಕಾರಣಕ್ಕೆ ನಾನು ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿ ಸಂಪುಟದಲ್ಲಿ ಸಚಿವನಾಗಿದ್ದೇನೆ. ಮಾಯಾವತಿ ಅವರಿಂದ ಸೂಚನೆ ಬರುವ ವರೆಗೆ ಮಾತ್ರ ನಾನು ಸಚಿವನಾಗಿ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ರಿಜೆಕ್ಟೆಡ್‌ ಗೂಡ್ಸ್‌ ಎಂಬುದು ಮಹೇಶ್‌ ರಾಜೀನಾಮೆಯಿಂದ ಸಾಬೀತಾಗಿದೆ. ಕಾಂಗ್ರೆಸ್‌ಮುಕ್ತ ಭಾರತ ತನ್ನಷ್ಟಕ್ಕೆ ತಾನೇ ಅನುಷ್ಠಾನವಾಗುತ್ತಿದೆ. ನಾವು ಜ್ಯೋತಿಷಿಗಳಲ್ಲ. ಆದರೆ, ರಾಜಕೀಯ ಬೆಳವಣಿಗೆ ತಿಳಿದುಕೊಂಡವರು. ಸಮ್ಮಿಶ್ರ ಸರ್ಕಾರ ತಾನಾಗಿಯೇ ಬೀಳುತ್ತೆ ಎಂಬ ನಮ್ಮ ಮಾತು ನಿಜವಾಗುತ್ತಿದೆ.
ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ಇನ್ನು ಎರಡು ತಿಂಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ. ಲೋಕಸಭೆ ಚುನಾವಣೆ ವೇಳೆಗೆ ನಾವು ಅಧಿಕಾರ ಗದ್ದುಗೆಯಲ್ಲಿ ಇರುತ್ತೇವೆ.
ಆರ್‌.ಅಶೋಕ್‌, ಬಿಜೆಪಿ ನಾಯಕ

ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆಯಾದಾಗ ಪರ್ಯಾಯ ರಾಜಕೀಯ ಶಕ್ತಿಯನ್ನು ರೂಪಿಸಲು ಹಲವು ಪಕ್ಷ ಗಳನ್ನು ಒಂದೇ ವೇದಿಕೆಯಲ್ಲಿ ತರಲಾಗಿತ್ತು. ಆದರೆ, ಇದಕ್ಕೆ ಯಶಸ್ಸು ಸಿಗುವ ಬಗ್ಗೆ ಅನುಮಾನವಿದೆ.
ಎಚ್‌ ಡಿ ದೇವೇಗೌಡ, ಜೆಡಿಎಸ್‌ ನಾಯಕ

ಮೈತ್ರಿ ಸರಕಾರಕ್ಕೆ ಬಿಕ್ಕಟ್ಟುಗಳ ಸರಣಿ
ಸಚಿವ ಸ್ಥಾನ ಹಂಚಿಕೊಳ್ಳಲು ಜೆಡಿಎಸ್‌ -ಕಾಂಗ್ರೆಸ್‌ ಹಗ್ಗಜಗ್ಗಾಟ, ಖಾತೆ ಹಂಚಿಕೆಯಲ್ಲೂ ಬಿಕ್ಕಟ್ಟು.
2018 -19ನೇ ಸಾಲಿಗೆ ಹೊಸ ಬಜೆಟ್‌ ಮಂಡನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಗಾದೆ.
ರೈತರ ಸಾಲ ಮನ್ನಾ ತೀರ್ಮಾನಕ್ಕೂ ಕಾಂಗ್ರೆಸ್‌ ಅಪಸ್ವರ.
ಬೆಳಗಾವಿ ಜಾರಕಿಹೊಳಿ ಸಹೋದರರ ಬಂಡಾಯದ ಬೇಗುದಿ.
ಅಧಿಕಾರಿಗಳ ವರ್ಗಾವಣೆಯಲ್ಲಿ ಏಕಪಕ್ಷೀಯ ತೀರ್ಮಾನಗಳಿಗೆ ಕಾಂಗ್ರೆಸ್‌ ಪಾಳೆಯ ಅತೃಪ್ತಿ.

ಮಹೇಶ್‌ ಕೊಟ್ಟ ಕಾರಣ
ಕ್ಷೇತ್ರದ ಜನರ ಕೆಲಸ ಮಾಡಲು ಆಗುತ್ತಿಲ್ಲ.
ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆ ಮಾಡಬೇಕು.

Comments are closed.