ಕರ್ನಾಟಕ

ನಿಲ್ಲದ ಮಳೆ…ಮುಚ್ಚಿದ ರಸ್ತೆ, ರೈಲು ಮಾರ್ಗಗಳು; ದಕ್ಷಿಣ ಕರ್ನಾಟಕ-ಕರಾವಳಿ ಪ್ರಯಾಣಿಕರ ಪರದಾಟ

Pinterest LinkedIn Tumblr


ಬೆಂಗಳೂರು: ವರುಣನ ರುದ್ರನರ್ತನಕ್ಕೆ ದಕ್ಷಿಣ ಕರ್ನಾಟಕ ಮತ್ತು ಕರಾವಳಿ ನಡುವಿನ “ಸಂಪರ್ಕ ಸೇತುವೆ’ಯೇ ಈಗ ಕಡಿತಗೊಂಡಿದೆ.

ಘಟ್ಟಪ್ರದೇಶಗಳಲ್ಲಿ ಉಂಟಾದ ಮಣ್ಣುಕುಸಿತ ಹಾಗೂ ಅಲ್ಲಲ್ಲಿ ಮುಳುಗಿದ ಸೇತುವೆಗಳಿಂದ ರಸ್ತೆ ಮತ್ತು ರೈಲು ಮಾರ್ಗಗಳು ಬಹುತೇಕ ಮುಚ್ಚಿವೆ. ವಿಮಾನಗಳ ಹಾರಾಟ “ಹವಾಮಾನ ಬದಲಾವಣೆ’ಯನ್ನು ಅವಲಂಬಿಸಿದೆ. ಇನ್ನೂ ಒಂದೆರಡು ದಿನಗಳು ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಇದರಿಂದ ದಕ್ಷಿಣ ಕರ್ನಾಟಕ-ಕರಾವಳಿ ನಡುವೆ ಸಂಚರಿಸುವ ಸಾವಿರಾರು ಜನ ಪರದಾಡುವಂತಾಗಿದೆ.

ಶಿರಾಡಿ ಘಾಟಿಯಲ್ಲಿ ಎರಡು ಮೂರು ಕಡೆ ಭೂ ಕುಸಿತವಾಗಿದ್ದು, ತೆರವು ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಅಪಘಾತಗಳೂ ಸಂಭವಿಸಿದ್ದು, ಭೀತಿ ಹೆಚ್ಚಿಸಿದೆ. ಈ ಕಾರಣದಿಂದ ಶಿರಾಡಿಯಲ್ಲಿ 4 ದಿನಗಳ ಕಾಲ ಲಘು ವಾಹನಗಳು ಹಾಗೂ 15 ದಿನಗಳ ಕಾಲ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಬೆಂಗಳೂರು – ಮಂಗಳೂರು ರೈಲು ಮಾರ್ಗದಲ್ಲಿ ಎಡಕುಮೇರಿಯಲ್ಲಿ ಬುಧವಾರವೂ 100 ಮೀಟರ್‌ ವ್ಯಾಪ್ತಿಯಲ್ಲಿ ರೈಲು ಹಳಿಯ ಮೇಲೆ ಕಲ್ಲು, ಮಣ್ಣು ಕುಸಿದಿದೆ.

ಸಂಪಾಜೆ ಘಾಟ್‌ನ ಮದೆನಾಡು ಬಳಿ ಮತ್ತೆ ಮತ್ತೆ ಗುಡ್ಡ ಕುಸಿಯುತ್ತಿದೆ. ಇದೇ ಹೆದ್ದಾರಿಯಲ್ಲಿ ನಿಶಾನಿ ಮೊಟ್ಟೆಯಲ್ಲಿ ಬುಧವಾರ ಗುಡ್ಡ ಕುಸಿದಿದೆ. ಇನ್ನೊಂದೆಡೆ ಸಕಲೇಶಪುರ- ಸೋಮವಾರಪೇಟೆ ರಸ್ತೆಯಲ್ಲಿ ಭಾರೀ ಬಿರುಕು ಬಿಟ್ಟಿದೆ. ಹಾಗೂ ಕಾವೇರಿ ನದಿ ಪ್ರವಾಹದಿಂದಾಗಿ ಮಡಿಕೇರಿ- ವಿರಾಜಪೇಟೆ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಪ್ರವಾಸಿಗರು ಸದ್ಯಕ್ಕೆ ಕೊಡಗಿಗೆ ಬಾರದಿರುವುದೇ ಸೂಕ್ತ ಎಂದು ಕೊಡಗು ಜಿಲ್ಲಾಡಳಿತ ಸೂಚಿಸಿದೆ.

ಕೆಎಸ್‌ಆರ್‌ಟಿಸಿ ಬಸ್‌ ರದ್ದು
ಬೆಂಗಳೂರು, ಮೈಸೂರು, ಕೋಲಾರ, ತುಮಕೂರು, ಮಡಿಕೇರಿ ಸುತ್ತಮುತ್ತಲಿನಿಂದ ಕೇರಳದ ಕ್ಯಾಲಿಕಟ್‌, ಕಣ್ಣನೂರು ಸೇರಿ ಕರಾವಳಿಯ ವಿವಿಧ ಭಾಗಗಳಿಗೆ ತೆರಳುವ ನೂರಕ್ಕೂ ಅಧಿಕ ಬಸ್‌ಗಳು ಏಕಾಏಕಿ ಸ್ಥಗಿತಗೊಂಡಿವೆ. ಈಗಾಗಲೇ ಬುಕ್‌ ಮಾಡಿರುವವರಿಗೆ ಪೂರ್ಣ ಹಣವನ್ನು ಮರುಪಾವತಿಸಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ 63 ಬಸ್‌ಗಳು ಹಾಗೂ ಮಂಗಳೂರಿನಿಂದ ಹೊರಡುವ 52 ಟ್ರಿಪ್‌ಗ್ಳು ಸೇರಿ ಕೆಎಸ್‌ಆರ್‌ಟಿಸಿಯ 115 ಬಸ್‌ಗಳ ಸಂಚಾರ ರದ್ದುಗೊಳಿಸಲಾಗಿದೆ. ಮೂಲಗಳ ಪ್ರಕಾರ ನಿತ್ಯ ಬೆಂಗಳೂರು, ಮೈಸೂರಿನಿಂದ ಮಂಗಳೂರು ನಡುವೆ ಅಂದಾಜು 3,500 ಜನ ಸಂಚರಿಸುತ್ತಾರೆ. ವಾರಾಂತ್ಯದಲ್ಲಿ ಇದು 5ರಿಂದ 5,500ಕ್ಕೆ ಏರಿಕೆ ಆಗುತ್ತದೆ.

ಸದ್ಯಕ್ಕೆ ಕರಾವಳಿ ತಲುಪಲು ಈಗಿರುವ ಏಕೈಕ ರಸ್ತೆ ಮಾರ್ಗ ಚಾರ್ಮಾಡಿ ಘಾಟ್‌. ಆದರೆ, ಪ್ರೀಮಿಯಂ ಬಸ್‌ಗಳ ಉದ್ದ 13.5 ಮೀಟರ್‌ ಇದ್ದು, ಕಿರಿದಾದ ರಸ್ತೆ ಮತ್ತು ತಿರುವುಗಳಲ್ಲಿ ಸಂಚಾರ ಅಸಾಧ್ಯ. ಈ ಕಾರಣಕ್ಕೆ ಸಾಮಾನ್ಯ ಬಸ್‌ಗಳು ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಕ ಎಂ. ದೀಪಕ್‌ಕುಮಾರ್‌ ಸ್ಪಷ್ಟಪಡಿಸಿದರು.

ಹಾಸನ-ಮೂಡಿಗೆರೆ-ಕೊಟ್ಟಿಗೇಹಾರ-ಕಳಸ-ಕುದುರೆಮುಖ-ಬಜಗೋಳಿ-ಕಾರ್ಕಳ ಮಾರ್ಗವೂ ಒಂದಿದೆ. ಆದರೆ, ಕುದುರೆಮುಖದ ಹತ್ತಿರ ಮಣ್ಣುಕುಸಿತದಿಂದ ಸೇತುವೆ ಜಖಂಗೊಂಡಿದೆ. ಹಾಗಾಗಿ, ಆ ಮಾರ್ಗದ ಸಂಚಾರ ಸಾವಿನ ಮೇಲಿನ ನಡಿಗೆಯಾಗಿದೆ. ಶಿವಮೊಗ್ಗದ ಮೂಲಕ ಬರುವುದಾದರೂ, ಆಗುಂಬೆ ಘಾಟ್‌ನಲ್ಲಿ ಸಾಮಾನ್ಯ ಬಸ್‌ಗಳ ಕಾರ್ಯಾಚರಣೆಯೂ ಕಷ್ಟ ಇದೆ. ಉಳಿದದ್ದು ಚಾರ್ಮಾಡಿ ಮೂಲಕ ಹೋಗುವ ಮಾರ್ಗ ಮಾತ್ರ ಎಂದು ಅವರು ವಿವರಿಸಿದರು.

ಕಾವೇರಿ ಕಣಿವೆಯಲ್ಲಿ ಪ್ರವಾಹ:
ಕಾವೇರಿ ನದಿ ಕಣಿವೆಯಲ್ಲಿ ಪ್ರವಾಹ ಸ್ಥಿತಿ ಮುಂದುವರೆದಿದೆ. ನದಿ ತೀರ ಪ್ರದೇಶದ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಕಾವೇರಿ ನದಿಯ ಪಕ್ಕದಲ್ಲೇ ಇರುವ ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಬ ದೇವಾಲಯದ ಪ್ರವೇಶ ದ್ವಾರದವರೆಗೆ ಕಾವೇರಿ ನೀರು ಹರಿದುಬಂದಿದೆ. ರಂಗನತಿಟ್ಟು ಪಕ್ಷಿಧಾಮ, ಮುತ್ತತ್ತಿಯಂತಹ ಪ್ರೇಕ್ಷಣೀಯ ಸ್ಥಳಗಳಿಗೆ ಜನಸಂಚಾರವನ್ನು ನಿಷೇಧಿಸಲಾಗಿದೆ. ಮೈಸೂರಿನ ತಿ.ನರಸೀಪುರದಿಂದ ಮಾದಾಪುರ ಮಾರ್ಗವಾಗಿ ತಲಕಾಡಿಗೆ ಹೋಗುವ ಮಾರ್ಗದಲ್ಲಿರುವ ಹೆಮ್ಮಿಗೆ ಸೇತುವೆ ನೀರಿನಲ್ಲಿ ಮುಳುಗಡೆಯಾಗಿದ್ದು ಸಂಚಾರವನ್ನು ನಿಷೇಧಿಸಲಾಗಿದೆ.

ಮಲೆನಾಡು ನಿರಾಳ:
ಮಲೆನಾಡಿನ ಶೃಂಗೇರಿ, ಮೂಡಿಗೆರೆ, ನರಸಿಂಹರಾಜಪುರ, ಚಿಕ್ಕಮಗಳೂರು ತಾಲೂಕುಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಪ್ರಮಾಣ ತಗ್ಗಿದ್ದು, ನದಿ ನೀರಿನಲ್ಲಿ ಮುಳುಗಿದ್ದ ಸೇತುವೆಗಳು ತೆರವಾಗಿದ್ದು, ರಸ್ತೆ ಸಂಚಾರ ಪುನಃ ಆರಂಭಗೊಂಡಿವೆ.

ಹಿನ್ನೀರಿನಿಂದ ನಡುಗಡ್ಡೆ
ಬಾಗಲಕೋಟೆ ಜಿಲ್ಲೆಯಲ್ಲಿ ಮಳೆಯ ತೀವ್ರ ಕೊರತೆ ಎದುರಾದರೂ ಹಿನ್ನೀರಿನಿಂದ ಮಾತ್ರ ಕಂಗೊಳಿಸುತ್ತಿದೆ. ಜಿಲ್ಲೆಯ ಹುನಗುಂದ ತಾಲೂಕಿನ ಐತಿಹಾಸಿಕ, ವಿಶ್ವದ ಗಮನ ಸೆಳೆದ ಪ್ರವಾಸಿ ತಾಣ ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನ ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ನಡುಗಡ್ಡೆಯಾಗಿದೆ. ಸಂಗಮೇಶ್ವರ ದೇವಸ್ಥಾನದ ನಾಲ್ಕು ಮೆಟ್ಟಿಲುಗಳ ಮೇಲೆ ಹಿನ್ನೀರು ಆವರಿಸಿಕೊಂಡಿದೆ.

– 115 ಬೆಂಗಳೂರು-ಮಂಗಳೂರು ನಡುವೆ ಸ್ಥಗಿತಗೊಂಡ ಬಸ್‌ಗಳು
– 15-20 ಸಾಮಾನ್ಯ ಬಸ್‌ಗಳು ಚಾರ್ಮಾಡಿ ಮಾರ್ಗವಾಗಿ ಸಂಚಾರ
– 30 ಲಕ್ಷ ರೂ. ಕಳೆದೆರಡು ದಿನಗಳಲ್ಲಿ ಕೆಎಸ್‌ಆರ್‌ಟಿಸಿಗಾದ ನಷ್ಟ
– 3,500 ನಿತ್ಯ ಬೆಂಗಳೂರು-ಮಂಗಳೂರು ನಡುವೆ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುವ ಜನ

Comments are closed.