ಕರ್ನಾಟಕ

ಸೂರ್ಯನ ನೋಡದೆ 2 ತಿಂಗಳಾಗಿದ್ದು , ನೋಡುವುದಕ್ಕಾಗಿ 5 ದಿನಗಳ ರಜೆ ನೀಡಿ ಎಂದು ಅಧಿಕಾರಿಗೆ ಪೊಲೀಸಪ್ಪ ಬರೆದ ಪತ್ರ ವೈರಲ್ !

Pinterest LinkedIn Tumblr

ಬೆಂಗಳೂರು: ಸೂರ್ಯನ ಮುಖ ನೋಡದೆ ಎರಡು ತಿಂಗಳಾಗಿದೆ. ನಮ್ಮೂರಿಗೆ ಹೋಗಿ ಸೂರ್ಯನನ್ನು ನೋಡಿಕೊಂಡು ಬಟ್ಟೆಯನ್ನು ಒಣಗಿಸಿಕೊಂಡು ಬರುತ್ತೇನೆ. ಆದ್ದರಿಂದ ಐದು ದಿನ ಸಾಂದರ್ಭಿಕ ರಜೆ ಕೊಡಿ! ಹೀಗೆ ಪೊಲೀಸ್ ಪೇದೆಯೊಬ್ಬ ಕೊಡಗು ಜಿಲ್ಲೆಯ ಪೊಲೀಸ್ ನಿರೀಕ್ಷಕರಿಗೆ ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಈಗ ಹರಿದಾಡುತ್ತಿದೆ.

ಈ ಪತ್ರದಲ್ಲಿ, ‘ರಮೇಶ ಪಿಸಿ 1121 ಮಡಿಕೇರಿ. ಐದು ದಿನಗಳ ಸಾಂದರ್ಭಿಕ ರಜೆ ಕೋರಿ ಮನವಿ. ಎರಡು ತಿಂಗಳಿನಿಂದ ಸೂರ್ಯನ ಮುಖ ನೋಡದ ಹಿನ್ನೆಲೆಯಲ್ಲಿ ನನ್ನ ಊರಿಗೆ ತೆರಳಿ ಸೂರ್ಯನನ್ನು ನೋಡಿಕೊಂಡು ಜೊತೆಗೆ ಬಟ್ಟೆಯನ್ನು ಒಣಗಿಸಿಕೊಂಡು ಬರಲು 5 ದಿನ ಸಾಂದರ್ಭಿಕ ರಜೆಯನ್ನು ನೀಡಬೇಕೆಂದು ವಿನಂತಿಸಿಕೊಳ್ಳುತ್ತೇನೆ’ ಎಂದಿದೆ ಸದ್ಯ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ನಿಜಕ್ಕೂ
ಪೇದೆಯೊಬ್ಬರು ಸೂರ್ಯನ ಮುಖ ನೋಡದೆ ಎರಡು ತಿಂಗಳಾಗಿದೆ ಎಂದು ರಜೆ ಕೇಳಿದ್ದರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತ್ರಿಕ್ರಿಯಿಸಿದ್ದು, ‘ಈ ಸುದ್ದಿ ಸತ್ಯಕ್ಕೆ ದೂರವಾದುದು. ರಮೇಶ ಪಿಸಿ 1121 ಎಂಬುವವರು ಇಲಾಖೆಯಲ್ಲಿ ಯಾರೂ ಇಲ್ಲ. ಬೇಕೆಂದೇ ಯಾರೋ ಸುಳ್ಳು ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹರಡಿದ್ದಾರೆ’ ಎಂದು ತಿಳಿಸಿದ್ದಾರೆ. ಹಾಗಾಗಿ ಸೂರ್ಯನ ಮುಖ ನೋಡದೆ ಎರಡು ತಿಂಗಳಾಗಿದೆ ಎಂದು ಪೇದೆಯೊಬ್ಬರು ರಜೆ ಕೇಳಿ ಪೊಲೀಸ್ ನಿರೀಕ್ಷಕರಿಗೆ ಪತ್ರ ಬರೆದಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು.

Comments are closed.