ಕರ್ನಾಟಕ

‘ಆಪರೇಷನ್ ಕಮಲ’ ಬಗ್ಗೆ ಯಡಿಯೂರಪ್ಪ ಹೇಳಿದ್ದೇನು…?

Pinterest LinkedIn Tumblr

ಬೆಂಗಳೂರು: ತುರ್ತು ಸಭೆ ಇದ್ದ ಕಾರಣ ನಾನು ದೆಹಲಿಗೆ ಹೊಗಿದ್ದೆ, ಆಪರೇಷನ್ ಕಮಲ ಮಾಡೋಕಲ್ಲ. ಇಷ್ಟಕ್ಕೂ ನಾನು ಆಪರೇಷನ್ ಕಮಲ ಮಾಡಲ್ಲ, ಅದರ ಅಗತ್ಯವೂ ನನಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಡಿಕೆ ಶಿವಕುಮಾರ್ ಹಾಗೂ ದಿನೇಶ್ ಗುಂಡೂರಾವ್ ಅವರುಗಳ ಹೇಳಿಕೆ ಉಲ್ಲೇಖಿಸಿದ ಯಡಿಯೂರಪ್ಪ ಈ ಮೇಲಿನಂತೆ ಪ್ರತಿಕ್ರಯಿಸಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿ ತಮ್ಮ ನಿವಾಸದಲ್ಲಿ ಅವರು ಸುದ್ದಿಗಾರರೊಡನೆ ಮಾತನಾಡಿದರು.

ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರೊಡನೆ ರಾಜ್ಯದ ಪ್ರಸಕ್ತ ರಾಜಕೀಯದ ಬಗ್ಗೆ ಚರ್ಚೆ ನಡೆಸಿದ್ದೇನೆ. ತುರ್ತು ಸಭೆಯಲ್ಲಿ ಭಾಗವಹಿಸಲು ನಾನು ದೆಹಲಿಗೆ ತೆರಳಿದ್ದೆ. ನಾವು ವಿರೋಧ ಪಕ್ಷದವರಾಗಿದ್ದುಕೊಂಡು ರಾಜ್ಯದ ಸಮ್ಮಿಶ್ರ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ, ಸಚಿವ ಡಿ.ಕೆ. ಶಿವಕುಮಾರ್ ಹಾಗೂ ದಿನೇಶ್ ಗುಂಡೂರಾವ್ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಆಗಬೇಕಾದ ಕೆಲಸದ ಕುರಿತಂತೆ ಕೇಂದ್ರ ಸಚಿವರುಗಳೊಡನೆ ಮಾತುಕತೆ ನಡೆಸಿದ್ದೇನೆ ಎಂದ ಯಡಿಯೂರಪ್ಪ, ನಾಳೆಯಿಂದಲೇ ನಮ್ಮ ಪಕ್ಷದ ನಾಯಕರು ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದೇವೆ. ಬೀದರ್ ಜಿಲ್ಲೆಯಿಂದ ಈ ಪ್ರವಾಸ ಕಾರ್ಯಕ್ರಮ ಪ್ರಾರಂಭವಾಗಲಿದೆ. ಎಂದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿಕೊಳ್ಳುವುದು ಅಗತ್ಯವಿದೆ. ಇನ್ನು ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯ ಕೊರತೆ ಆಗಿದೆ, ಬರದ ಛಾಯೆ ಆವರಿಸಿದೆ. ಪ್ರವಾಸದ ವೇಳೆ ಈ ಎಲ್ಲಾ ಅಂಶಗಳನ್ನು ಗಮನಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕರುಣಾನಿಧಿಗೆ ಸಂತಾಪ
ಹಿರಿಯ ರಾಜಕಾರಣಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಸಾವು ಅತ್ಯಂತ ನೋವು ತಂದಿದೆ ಎಂದ ಯಡಿಯೂರಪ್ಪ ಕರುಣಾನಿಧಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕರುಣಾನಿಧಿ ಮುಖ್ಯಮಂತ್ರಿಗಳಾಗಿದ್ದ ವೇಳೆ ತಮಿಳುನಾಡಿನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪನೆ ಆಯಿತು. ಇದೇ ವೇಳೆ ಕರ್ನಾಟಕದಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಮಾಡುವ ಮೂಲಕ ಎರಡೂ ಭಾಷಿಗರ ನಡುವೆ ಸಾಮರಸ್ಯಕ್ಕೆ ವಿಶೇಷ ಪ್ರಯತ್ನ ನಡೆಸಲಾಗಿತ್ತು. ಅವರ ನನ್ನ ಒಡನಾಟ ಎಂದೂ ಮರೆಯುವಂತಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲೆಂದು ಯಡಿಯೂರಪ್ಪ ಹೇಳಿದ್ದಾರೆ.

Comments are closed.