ಕರಾವಳಿ

ಮಂಗಳೂರು ಆಕಾಶವಾಣಿ ಸಿಬ್ಬಂದಿಗಳ ಧರಣಿ : ವಿವಿಧ ಬೇಡಿಕೆಗಳಿಗೆ ಆಗ್ರಹ

Pinterest LinkedIn Tumblr

ಮಂಗಳೂರು : ಕಾರ್ಯಕ್ರಮ ಸಿಬ್ಬಂದಿಗಳ ಬಡ್ತಿ, ಕಾರ್‍ಯಕ್ರಮಕ್ಕೆ ಅನುದಾನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಆಕಾಶವಾಣಿ-ದೂರದರ್ಶನ ಜಂಟಿ ಕ್ರಿಯಾ ಸಮಿತಿಯ ಕರೆಯ ಮೇರೆಗೆ ದೇಶಾದ್ಯಂತ ನಡೆಸುತ್ತಿರುವ ಪ್ರತಿಭಟನೆಯ ಅಂಗವಾಗಿ ಮಂಗಳೂರು ಅಕಾಶವಾಣಿಯ ಮುಂಭಾಗದಲ್ಲಿ ಕಾರ್‍ಯಕ್ರಮ ಸಿಬ್ಬಂದಿಗಳ ಧರಣಿ ಮುಂದುವರಿದಿದೆ.

ಸಿಬ್ಬಂದಿ ಸಂಘದ ಕಾರ್ಯದರ್ಶಿ ಟಿ.ಶ್ಯಾಮ್ ಪ್ರಸಾದ್ ನೇತೃತ್ವದಲ್ಲಿ ಉಷಾಲತಾ ಸರಪಾಡಿ, ಸದಾನಂದ ಹೊಳ್ಳ, ಸೂರ್ಯನಾರಾಯಣ ಭಟ್, ಡಾ.ಸದಾನಂದ ಪೆರ್ಲ, ಶುಭದಾ ಡಿ. ರೈ, ದೇವು ಹನೇಹಳ್ಳಿ ಮತ್ತು ಡಾ.ಶರಭೇಂದ್ರ ಸ್ವಾಮಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬೇಡಿಕೆ :

25 – 30 ವರ್ಷಗಳಿಂದ ಒಂದೂ ಪದೋನ್ನತಿಯನ್ನು ಪಡೆಯದೇ ಇರುವ ಸಿಬ್ಬಂದಿಗೆ ಸಿಗಬೇಕಾದ ಪದೋನ್ನತಿಯನ್ನು ಪೂರ್ವಾನ್ವಯವಾಗುವಂತೆ ಶೀಘ್ರವಾಗಿ ನೀಡುವುದು.
ಅಡ್‌ಹಾಕ್ ಹಾಗೂ ಇನ್-ಸಿಟು ಸೇವಾವಧಿಯ ಸೇವಾಜೇಷ್ಠತೆ ಪರಿಗಣಿಸಿ, 20 ವರ್ಷಗಳ ಸೇವೆ ಸಲ್ಲಿಸಿದ ಪ್ರಸಾರ ನಿರ್ವಾಹಕರಿಗೆ 2 ಪದೊನ್ನತಿ ನೀಡಿ ಸಹಾಯಕ ನಿರ್ದೇಶಕರನ್ನಾಗಿ ಮಾಡಬೇಕು.
ಅಡ್‌ಹಾಕ್ ಸೇವಾವಧಿಯನ್ನು ಸೇವಾ ಜೇಷ್ಠತೆಗೆ ಪರಿಗಣಿಸಿ, 20 ವರ್ಷಗಳ ಸೇವೆ ಸಲ್ಲಿಸಿದ ಕಾರ್ಯಕ್ರಮ ನಿರ್ವಾಹಕರಿಗೆ 2 ಪದೋನ್ನತಿ ನೀಡಿ ನಿರ್ದೇಶಕರನ್ನಾಗಿ ಮಾಡಬೇಕು.
ನಾಲ್ಕು ವರ್ಷಗಳ ನಿಯಮಿತ ಸೇವೆ ಸಲ್ಲಿಸಿದ ಎಲ್ಲಾ ಕಾರ್ಯಕ್ರಮ ನಿರ್ವಾಹಕರಿಗೂ ವೇತನ ಭಡ್ತಿ ನೀಡಬೇಕು.
ಬೇರೆ ಬೇರೆ ಇಲಾಖೆಗಳಿಂದ ಅನರ್ಹ ಉನ್ನತ ಅಧಿಕಾರಗಳನ್ನು ಎರವಲು ಸೇವೆಯ ಮೇಲೆ ನಿಯೋಜಿಸಿರುವುದನ್ನು ತತ್‌ಕ್ಷಣ ಹಿಂದಕ್ಕೆ ಕರೆಸಿಕೊಳ್ಳಬೇಕು.
ಭಾರತೀಯ ಕಾರ್ಯಕ್ರಮ ಸೇವೆಗೆ ನಿಗದಿಗೊಳಿಸಿರುವ ಉನ್ನತ ಹುದ್ದೆಗಳಿಗೆ ತಾಂತ್ರಿಕ ಸೇವೆಯವರನ್ನು ನೇಮಿಸಬಾರದು.
ಪ್ರಸಾರಭಾರತಿಯಲ್ಲಿ ಖಾಲಿ ಇರುವ ಎಲ್ಲಾ ಕಾರ್ಯಕ್ರಮ ಹುದ್ದೆಗಳನ್ನು ಅರ್ಹ ಕಾರ್ಯಕ್ರಮ ಸಿಬ್ಬಂದಿಗೆ ಒಂದು ಬಾರಿ ನಿಯಮ ಸಡಿಲಿಕೆ ಮಾಡಿ ಪದೋನ್ನತಿಯೊಂದಿಗೆ ಭರ್ತಿ ಮಾಡಬೇಕು.

ಭಾರತೀಯ ಪ್ರಸಾರ ಸೇವೆಯ 810 ಉನ್ನತ ಹುದ್ದೆಗಳಿದ್ದು ಖಾಯಂ ಆಗಿ 8 ಹಾಗೂ ಪ್ರಭಾರಿಯಾಗಿ 260 ಮಾತ್ರ ಹಾಲಿ ಕೆಲಸದಲ್ಲಿದ್ದಾರೆ. ಉಳಿದ ಹುದ್ದೆಗಳಿಗೆ ಬೇರೆ ಇಲಾಖೆಯಿಂದ ಎರವಲು ಸೇವೆಯ ಮೇರೆಗೆ ತಂದು ತುಂಬುವ ಕೆಲಸ ಪ್ರಸಾರ ಭಾರತಿ ಮಾಡುತ್ತಿದೆ. ನಿಗದಿತ ಸಮಯದಲ್ಲಿ ಎಲ್ಲಾ ಹುದ್ದೆಗಳನ್ನು ತುಂಬದೆ, ಇರುವವರಿಗೆ ಇಲಾಖಾ ಬಡ್ತಿ ಪ್ರಕ್ರಿಯೆ ಮಾಡದೆ ಆಕಾಶವಾಣಿ ದೂರದರ್ಶನ ಸಮಸ್ಯೆ ಎದುರುಸುತ್ತಿದೆ. ಮಾಧ್ಯಮ ಪೈಪೋಟಿಯ ಸಂದರ್ಭದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಇದ್ದ ಸಿಬ್ಬಂದಿಗಳಿಗೆ ನ್ಯಾಯಯುತ ಭಡ್ತಿ ನೀಡದೆ ಕಾರ್ಯಕ್ರಮ ಗುಣಮಟ್ಟ ಸೊರಗುವಂತೆ ಮಾಡಿದ ಆಡಳಿತ ವೈಖರಿ ಖಂಡನೀಯ. ಪ್ರಸಾರ ಭಾರತೀಯ ಒಟ್ಟು ಬಜೆಟ್‌ನ ಶೇ.15 ರಷ್ಟು ಮಾತ್ರ ಕಾರ್ಯಕ್ರಮಕ್ಕಾಗಿ ವೆಚ್ಚ ಮಾಡಲಾಗುತ್ತಿದ್ದು ಅನುದಾನ ಹೆಚ್ಚಿಸುವಂತೆ ಒತ್ತಾಯಿಸಲಾಗಿದೆ.

Comments are closed.