ಕರ್ನಾಟಕ

ಸೋಲಿನ ಬೆನ್ನಲ್ಲೇ ನಿವೃತ್ತಿ ಪ್ರಕಟಿಸಿದ ಕಾಂಗ್ರೆಸ್‌ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ

Pinterest LinkedIn Tumblr


ಬೆಂಗಳೂರು: ರಾಜ್ಯದ ಸಮಾಜವಾದಿ ಹೋರಾಟಗಾರರ ಪೈಕಿ ಮುಂಚೂಣಿಯಲ್ಲಿರುವ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರು ತಮ್ಮ ಸುದೀರ್ಘ‌ 57 ವರ್ಷಗಳ ರಾಜಕೀಯ ಜೀವನಕ್ಕೆ ನಿವೃತ್ತಿ ಪ್ರಕಟಿಸಿದ್ದಾರೆ. “ಚುನಾವಣ ರಾಜಕೀಯ ಸಾಕಾಗಿದೆ. ಹೀಗಾಗಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಷ್ಟು ವರ್ಷ ಹೋರಾಟ ಮಾಡಿದ್ದು ಸಾಕು. ನನಗೂ ವಯಸ್ಸಾಗಿದೆ. ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಹೋರಾಟ ನಡೆಸಿದ್ದೇನೆ. ಇನ್ಮುಂದೆ ಹೋರಾಟ ಸಾಧ್ಯವಿಲ್ಲ ಎಂದರು.

ಹಿಂದಿನ ಕಾಂಗ್ರೆಸ್‌ ಸರಕಾರದಲ್ಲಿ ಮೊದಲಿಗೆ ಸ್ಪೀಕರ್‌ ಆಗಿ ಕಾರ್ಯನಿರ್ವಹಿಸಿದ್ದ ಕಾಗೋಡು ತಿಮ್ಮಪ್ಪ ಅನಂತರ ಕಂದಾಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹರತಾಳು ಹಾಲಪ್ಪ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಹಿಂದೆ ವೀರೇಂದ್ರ ಪಾಟೀಲ್‌ ಹಾಗೂ ಬಂಗಾರಪ್ಪ ಅವಧಿಯಲ್ಲಿ ಗೃಹ ಮಂಡಳಿ ಅಧ್ಯಕ್ಷರಾಗಿ, ಎಸ್‌.ಎಂ.ಕೃಷ್ಣ ಅವರ ಅವಧಿಯಲ್ಲಿ ಸಮಾಜ ಕಲ್ಯಾಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು.

Comments are closed.