ರಾಷ್ಟ್ರೀಯ

ಬಸ್ಸಿಗಾಗಿ ಕಾಯುತ್ತಿದ್ದವರ ಮೇಲೆ ಎರಗಿದ ಕಾರು: ಆರು ಜನರ ದುರ್ಮರಣ

Pinterest LinkedIn Tumblr


ಕೊಯಮತ್ತೂರು( ತಮಿಳುನಾಡು): ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿ ನಿಂತಿದ್ದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಬಸ್​​ ನಿಲ್ದಾಣದಲ್ಲಿ ನಿಂತಿದ್ದವರಿಗೆ ಗುದ್ದಿದ ಪರಿಣಾಮ ಆರು ಮಂದಿ ಸಾವಿಗೀಡಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಯಮ್ಮತ್ತೂರಿನ ಸುಂದರಪುರಂನಲ್ಲಿ ಬುಧವಾರ ನಡೆದಿದೆ.

ಇಂದು ಬೆಳಗ್ಗೆ ಸುಮಾರು 9.30ರ ಸಮಯದಲ್ಲಿ ಈ ಘಟನೆ ನಡೆದಿದೆ. ಬಿಳಿ ಬಣ್ಣದ ಎಸ್​ಯುವಿ ಆಡಿ ಕಾರು ಪೊಲ್ಲಾಚಿಯಿಂದ ಕೊಯಮ್ಮತೂರು ಕಡೆ ಬರುತ್ತಿತ್ತು. ರಾಷ್ಟ್ರೀಯ ಹೆದ್ದಾರಿ ಪಕ್ಕದ ಪೆರಿಯಾರ್​ ಬಸ್​ ನಿಲ್ದಾಣದ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಏಕಾಏಕಿ ಆಟೋ ರಿಕ್ಷಾಗೆ ಗುದ್ದಿದೆ.

ಆ ನಂತರ ಕಾರು ಹೂವಿನ ಅಂಗಡಿ ಹಾಗೂ ವಿದ್ಯುತ್​ ಕಂಬಕ್ಕೂ ಅಪ್ಪಳಿಸಿದ್ದು, ಪೆರಿಯಾರ್​ ಬಸ್​ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದವರ ಕಡೆಗೂ ನುಗ್ಗಿದೆ. ಮೃತರಲ್ಲಿ ನಾಲ್ವರು ಪುರುಷರು ಹಾಗೂ ಕಾಲೇಜು ವಿದ್ಯಾರ್ಥಿನಿ ಸೇರಿದಂತೆ ಇಬ್ಬರು ಮಹಿಳೆಯರು ಸಾವಿಗೀಡಾಗಿದ್ದಾರೆ. ಮೃತರನ್ನು ಸೋಮು(55), ಸುರೇಶ್​(43), ಹಂಸವೇಣಿ(30), ಸುಭಾಶಿನಿ(20), ಶ್ರೀರಂಗದಾಸ್​(75) ಹಾಗೂ ಕುಪ್ಪಮ್ಮಲ್​(60) ಎಂದು ಗುರುತಿಸಲಾಗಿದೆ. ಮೃತರಲ್ಲಿ ಇಬ್ಬರು ಘಟನಾ ವೇಳೆ ಆಟೋ ಒಳಗಡೆ ಇದ್ದರು.

ಜಿಲ್ಲಾ ಪೊಲೀಸ್​ ಆಯುಕ್ತ ಪೆರಿಯಯ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ. ಇದೊಂದು ದುರಾದೃಷ್ಟಕರ ಘಟನೆಯಾಗಿದೆ. ಡ್ರಂಕ್​ ಅಂಡ್​ ಡ್ರೈವ್​ ಪರೀಕ್ಷಿಸಲು ಚಾಲಕ ಜಗದೀಶನ ರಕ್ತದ ಮಾದರಿಯನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹರಿಹರನ್​​ ಸುದ್ದಿಗಾರರಿಗೆ ತಿಳಿಸಿದ್ದಾರೆ.

Comments are closed.