ಕರ್ನಾಟಕ

ಉತ್ತರಕ್ಕಾಗಿ 13 ಜಿಲ್ಲೆಗಳ ಮಠಾಧೀಶರ ಧರಣಿ; ಯಡಿಯೂರಪ್ಪ ಭಾಗಿ,ಮನವೊಲಿಕೆ

Pinterest LinkedIn Tumblr


ಬೆಳಗಾವಿ:ಸುವರ್ಣ ವಿಧಾನಸೌಧಕ್ಕೆ ಸರಕಾರದ ಪ್ರಮುಖ ಕಚೇರಿಗಳು ಸ್ಥಳಾಂತರವಾಗಬೇಕು ಎಂದು ಒತ್ತಾಯಿಸಿ ಉತ್ತರ ಕರ್ನಾಟಕದ 13 ಜಿಲ್ಲೆಗಳ ವಿವಿಧ ಮಠಾಧೀಶರು ಮಂಗಳವಾರ ಸುವರ್ಣ ವಿಧಾನಸೌಧದ ಮುಂದೆ ಧರಣಿ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಬಿಜೆಪಿ ಶಾಸಕರೊಂದಿಗೆ ಧರಣಿಯಲ್ಲಿ ಭಾಗಿಯಾಗಿ ಸಾಂಕೇತಿಕ ಬೆಂಬಲ ಸೂಚಿಸಿದರು.

ಹಲವು ರೈತ ಪರ ಸಂಘಟನೆಗಳು ಮಠಾಧೀಶರ ಧರಣಿಗೆ ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಭಾಗಿಯಾಗಿದ್ದರು. ಕೆಲ ಸ್ವಾಮೀಜಿಗಳು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸ್ಥಳಕ್ಕಾಗಮಿಸುವಂತೆ ಆಗ್ರಹಿಸಿದರು.

ಧರಣಿ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದ ಅವರಣದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

ಧರಣಿ ನಿರತರು ಮಧ್ಯಾಹ್ನದ ಬಳಿಕ ಅಪರ ಜಿಲ್ಲಾಧಿಕಾರಿಯ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಯಡಿಯೂರಪ್ಪ ಅವರಿಗೂ ಮನವಿ ಸಲ್ಲಿಸಲಾಯಿತು. ಬಳಿಕ ಧರಣಿಯನ್ನು ಹಿಂಪಡೆದುಕೊಂಡಿದ್ದಾರೆ.

ಪ್ರತ್ಯೇಕ ರಾಜ್ಯದ ಪರವಿಲ್ಲ
ಧರಣಿ ನಿರತರು ಪ್ರತ್ಯೇಕ ರಾಜ್ಯದ ಕುರಿತಾಗಿ ಹೇಳಿಕೆ ನೀಡಿದ್ದು, ಯಡಿಯೂರಪ್ಪ ಅವರೂ ಪ್ರತ್ಯೇಕ ರಾಜ್ಯಕ್ಕೆ ನಮ್ಮ ಬೆಂಬಲವಿಲ್ಲ ಎಂದು ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲದೆ ನಾನು ಬದುಕಿರುವ ವರೆಗೆ ರಾಜ್ಯ ಒಡೆಯಲು ಅವಕಾಶ ಕೊಡುವುದಿಲ್ಲ ಎಂದಿದ್ದಾರೆ. ಪ್ರತ್ಯೇಕ ರಾಜ್ಯದ ಹೋರಾಟ ಮಾಡಬಾರದು, ಏಕೀಕರಣಕ್ಕೆ ಧಕ್ಕೆ ತರಬೇಡಿ ಎಂದು ಮಠಾಧೀಶರ ಮನವೊಲಿಸಿದ್ದಾರೆ.

ಹೋರಾಟ ನಿರತರು ನಮ್ಮ ಧರಣಿಯಲ್ಲಿ ಯಾವುದೇ ರಾಜಕೀಯ ಇಲ್ಲ,ಇದು ಪಕ್ಷಾತೀತ ಹೋರಾಟ ಎಂದಿದ್ದಾರೆ.

ಸಿಎಂ ಮನೆಗೆ ಮುತ್ತಿಗೆ ಯತ್ನ
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಕುರಿತಾಗಿ ನೀಡಿದ ಹೇಳಿಕೆ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಹುಬ್ಬಳ್ಳಿಯ ನವನಗರದಲ್ಲಿರುವ ಎಚ್‌ಡಿಕೆ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Comments are closed.