ಕರ್ನಾಟಕ

ತನ್ನ ಕುಟುಂಬದ ರಕ್ಷಣೆ ಮಾಡುವಂತೆ ಯೋಧನೋರ್ವ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿರುವ ವಿಡಿಯೋ ವೈರಲ್

Pinterest LinkedIn Tumblr

ಮೈಸೂರು: ಇಡೀ ದೇಶದ ರಕ್ಷಣೆಗಾಗಿ ಗಡಿಯಲ್ಲಿ ತನ್ನ ಪ್ರಾಣದ ಹಂಗನ್ನು ತೊರೆದು ಹೋರಾಡುವ ಭಾರತೀಯ ಸೇನೆಯ ಯೋಧನೋರ್ವ ಇದೀಗ ತನ್ನ ಕುಟುಂಬದ ರಕ್ಷಣೆ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

https://www.facebook.com/hemanthcp.jaikapi.1/videos/385254531997051/?t=0

ಮೈಸೂರಿನ ಪಿರಿಯಾ ಪಟ್ಟಣ ಮೂಲದ ಯೋಧ ಮಂಜುನಾಥ್ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಅಳಲು ತೋಡಿಕೊಂಡಿದ್ದು, ಕರ್ತವ್ಯ ನಿರತನಾಗಿರುವ ತಾನು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ತನ್ನ ತಂದೆಯ ಪಾಲನೆ ಮಾಡಲಾಗುತ್ತಿಲ್ಲ. ಹೀಗಾಗಿ ಅವರಿಗೆ ರಕ್ಷಣೆ ನೀಡಿ, ನನ್ನ ಕುಟುಂಬಕ್ಕೆ ನೆರವು ನೀಡಿ ಎಂದು ಅಂಗಲಾಚಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ಯೋಧ ಹೇಳಿಕೊಂಡಿರುವಂತೆ, ಪಿರಿಯಾಪಟ್ಟಣದ ರಾಜೀವ್ ಗ್ರಾಮದ ಮುತ್ತೂರು ಕಾಲೋನಿಯ ನಿವಾಸಿ ಯೋಧ ಮಂಜುನಾಥ್ ಜಾರ್ಖಂಡ್​ನಲ್ಲಿ ಸಿಎಸ್​ಎಫ್​ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಜೂನ್​ 5 ರಂದು ತಮ್ಮ ತಂದೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಎದುರಿಗೆ ಬಂದ ಮತ್ತೊಂದು ಬೈಕ್ ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಅಪಘಾತಕ್ಕೆ ಕಾರಣವಾದ ಮತ್ತೋರ್ವ ಬೈಕ್ ಸವಾರ ಅಪಘಾತ ಮಾಡಿದ್ದಲ್ಲದೇ ತನ್ನ ತಂದೆಯ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ.

ಈ ಬಗ್ಗೆ ನನ್ನ ಕುಟುಂಬಸ್ಥರು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ತೆರಳಿದ್ದು, ಈ ವೇಳೆ ಪೊಲೀಸರು ದೂರು ಸ್ವೀಕರಿಸದೇ ನಿರ್ಲಕ್ಷ್ಯ ತೋರಿದ್ದಾರೆ. ನನ್ನ ತಂದೆಗೆ ಅನ್ಯಾಯವಾಗಿದ್ದರೂ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಮಂಜುನಾಥ್ ವಿಡಿಯೋದಲ್ಲಿ​ ಆರೋಪಿಸಿದ್ದಾರೆ. ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವ ತಮ್ಮ ತಂದೆಯನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಮ್ಮ ತಂದೆ ಆರೈಕೆಗಾಗಿ ನನ್ನ ತಾಯಿಯೊಬ್ಬರೇ ಇದ್ದಾರೆ. ನಾನು ಕರ್ತವ್ಯದಲ್ಲಿರುವುದರಿಂದ ತಂದೆ ಚಿಕಿತ್ಸೆಯ ಮೇಲ್ವಿಚಾರಣೆ ನಡೆಸಲಾಗುತ್ತಿಲ್ಲ. ಈಗಲಾದರೂ ನಮ್ಮ ತಂದೆಯ ನೆರವಿಗೆ ಧಾವಿಸಿ, ನನ್ನ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಿ ಎಂದು ಯೋಧ ಮಂಜುನಾಥ್ ಅಂಗಲಾಚಿದ್ದಾರೆ.

ಮಂಜುನಾಥ್ ಅವರ ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

Comments are closed.