ಕರ್ನಾಟಕ

ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಹಿರಿಯ ಶಾಸಕರಿಗೆ ಖಾತೆ ಹಂಚಿಕೆಯೇ ತಲೆನೋವು

Pinterest LinkedIn Tumblr


ಬೆಂಗಳೂರು: ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಹಿರಿಯ ಶಾಸಕರಿಗೆ ಅವಕಾಶ ಕೊಡಲು ಹೈಕಮಾಂಡ್‌ ಮುಂದಾಗಿದೆಯಾದರೂ ಆಕಾಂಕ್ಷಿಗಳು ಪ್ರಮುಖ ಖಾತೆಗಳ ಮೇಲೆಯೇ ಕಣ್ಣಿಟ್ಟಿರುವುದು ತಲೆನೋವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಿರಿಯ ಶಾಸಕರಾದ ಎಂ.ಬಿ. ಪಾಟೀಲ್‌, ರಾಮಲಿಂಗಾರೆಡ್ಡಿ,ಎಚ್‌.ಕೆ.ಪಾಟೀಲರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಕಾಂಗ್ರೆಸ್‌ ಹೈಕಮಾಂಡ್‌ ಒಲವು ವ್ಯಕ್ತಪಡಿಸಿದೆ.

ಆದರೆ, ಈ ಮೂವರು ನಾಯಕರು ಪ್ರಬಲ ಖಾತೆಗಳ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಸಚಿವ ಸಂಪುಟಕ್ಕೆ
ಸೇರುವ ಪಟ್ಟಿಯಲ್ಲಿದ್ದಾರೆಂದು ಹೇಳಲಾಗುತ್ತಿರುವ ಎಂ.ಬಿ.ಪಾಟೀಲ್‌, ಜಲ ಸಂಪನ್ಮೂಲ ಖಾತೆ ಮೇಲೆ ಕಣ್ಣಿಟ್ಟಿದ್ದು, ಈಗಾಗಲೇ ಆ ಖಾತೆಯನ್ನು ಡಿ.ಕೆ. ಶಿವಕುಮಾರ್‌ ಪಡೆದುಕೊಂಡಿದ್ದಾರೆ. ಎಚ್‌.ಕೆ.ಪಾಟೀಲ್‌ ಗ್ರಾಮೀಣಾಭಿವೃದ್ಧಿ
ಮತ್ತು ಪಂಚಾಯತ್‌ ರಾಜ್‌ ಖಾತೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅದನ್ನು ಕೃಷ್ಣ ಬೈರೇಗೌಡರಿಗೆ ನೀಡಲಾಗಿದೆ.
ರಾಮಲಿಂಗಾರೆಡ್ಡಿಯವರು ಬೆಂಗಳೂರು ನಗರಾಭಿವೃದ್ಧಿ ಖಾತೆ ಬಯಸಿದ್ದು, ಡಿಸಿಎಂ ಪರಮೇಶ್ವರ್‌ ಆ ಖಾತೆ ಪಡೆದುಕೊಂಡಿದ್ದಾರೆ.

ಹೀಗಾಗಿ, ಹಿರಿಯರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರೂ ಅವರಿಗೆ ಯಾವ ಖಾತೆ ಕೊಡಬೇಕು? ಯಾರಿಂದ ಯಾವ ಖಾತೆ ಕಿತ್ತುಕೊಳ್ಳಬೇಕು ಎಂಬುದೇ ಹೈಕಮಾಂಡ್‌ಗೆ ತಲೆಬಿಸಿಯುಂಟು ಮಾಡಿದೆ ಎಂದು ಹೇಳಲಾಗಿದೆ.

ಈ ಮಧ್ಯೆ, ಎಚ್‌.ಕೆ. ಪಾಟೀಲ್‌ ಮತ್ತು ಎಂ.ಬಿ. ಪಾಟೀಲರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಭರವಸೆಯನ್ನೂ ಹೈಕಮಾಂಡ್‌ ನೀಡಿದೆ.ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಸಚಿವ ಸ್ಥಾನ ಸಿಗುವುದು ಅನುಮಾನ ಎಂದು ತಿಳಿದು ಬಂದಿದೆ.

ಶಾಸಕರ ಹೊರತು ಬೇರ್ಯಾರೂ ಎಲ್‌ಎಚ್‌ನಲ್ಲಿ ತಂಗುವಂತಿಲ್ಲ
ಬೆಂಗಳೂರು: ಶಾಸಕರ ಭವನಕ್ಕೆ ರಾತ್ರಿ 8ರಿಂದ ಬೆಳಗ್ಗೆ 9ರವರೆಗೆ ಸಾರ್ವಜನಿಕರು, ಅತಿಥಿಗಳ ಪ್ರವೇಶ ನಿರ್ಬಂಧದ ಬೆನ್ನಲ್ಲೇ ಶಾಸಕರನ್ನು ಹೊರತುಪಡಿಸಿ ಬೇರೆಯವರು ಶಾಸಕರ ಭವನದಲ್ಲಿ ತಂಗುವುದನ್ನು ನಿಷೇಧಿಸಲಾಗಿದೆ.

ಸಾರ್ವಜನಿಕರು, ಅತಿಥಿಗಳು ಶಾಸಕರನ್ನು ಭೇಟಿಯಾಗಲು ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ಮಾತ್ರ ಅವಕಾಶ. ರಾತ್ರಿ 8ರ ಬಳಿಕ ಶಾಸಕರನ್ನು ಹೊರತುಪಡಿಸಿ ಯಾರೊಬ್ಬರೂ ಶಾಸಕರ ಭವನದಲ್ಲಿ ತಂಗುವಂತಿಲ್ಲ. ಹಂಚಿಕೆಯಾಗುವ ಕೊಠಡಿಗಳನ್ನು ಸಂಬಂಧಪಟ್ಟ ಶಾಸಕರು ಹಾಗೂ ಮಾಜಿ ಶಾಸಕರಷ್ಟೇ ಬಳಸಬೇಕು. ಅವರ ಹೆಸರಿನಲ್ಲಿ ಬೇರೆ ಯಾರೊಬºರೂ ಬಳಸಲು ಅವಕಾಶವಿಲ್ಲ. ಶಾಸಕರ ಖಾಸಗಿತನ ರಕ್ಷಣೆ ಜತೆಗೆ ಅವರಿಗೆಂದೇ ಕಲ್ಪಿಸಿರುವ ವಸತಿ, ಸಾರಿಗೆ, ಔಷಧಾಲಯ, ಹೆಲ್ತ್‌ ಕ್ಲಬ್‌, ಲಾಂಡ್ರಿ, ಉಪಾಹಾರ ಗೃಹ ಇತರೆ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅನುಕೂಲವಾಗುವಂತೆ ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಕೆಲ ಸೂಚನೆಗಳನ್ನು ನೀಡಿದ್ದಾರೆ. ಇವುಗಳನ್ನು ಪಾಲಿಸುವಂತೆ ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಶಾಸಕರಿಗೆ ಪತ್ರ ಬರೆದು ತಿಳಿಸಿದ್ದಾರೆ.

Comments are closed.