ಕರ್ನಾಟಕ

ಸಾಲ ಮನ್ನಾ ಜೊತೆ ರೈತರಿಗೆ ಮತ್ತೊಂದು ಶುಭಸುದ್ದಿ!

Pinterest LinkedIn Tumblr


ಬೆಂಗಳೂರು: ರೈತರಿಗೆ ಬೆಳೆ ನಷ್ಟ ತಪ್ಪಿಸಲು ಜಾರಿಯಾಗಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ವಿಮಾ ಯೋಜನೆಗಳನ್ನು ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲು ರಾಜ್ಯದ ಪಾಲು 655 ಕೋಟಿ ರು. ಬಿಡುಗಡೆಗೆ ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

2015 ರಿಂದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಯಾಗಿದ್ದು, 2018 – 19 ನೇ ಸಾಲಿನ ಅನುಷ್ಠಾನ ಬಾಕಿ ಇತ್ತು. ಯೋಜನೆಗೆ ಶೇ.50 ರಷ್ಟು ಅನುದಾನ ಸರ್ಕಾರ, ಶೇ.50 ರಷ್ಟು ಅನುದಾನ ರಾಜ್ಯ ಸರ್ಕಾರ ಭರಿಸಬೇಕು. ಹೀಗಾಗಿ ಹಿಂಗಾರು ಹಾಗೂ ಮುಂಗಾರು ಬೆಳೆಗಳ ವಿಮೆಗೆ ಅನುವಾಗುವಂತೆ 655 ಕೋಟಿ ರು. ಬಿಡುಗಡೆ ಮಾಡಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ರೈತರಿಂದ ಶೇ.1.5ರಷ್ಟು ಪ್ರೀಮಿಯಂ: ಬೆಳೆ ವಿಮೆಗೆ ಖಾಸಗಿ ವಿಮಾ ಕಂಪನಿಗಳಿಂದ ಟೆಂಡರ್ ಕರೆಯಲಾಗಿದೆ. ಟೆಂಡರ್‌ನಲ್ಲಿ ಭಾಗವಹಿಸಿರುವ ಕಂಪನಿಗಳು ಶೇ.8.5 ರಿಂದ ಶೇ.14.5ರವರೆಗೆ ಪ್ರೀಮಿಯಂ ನಮೂದಿಸಿವೆ. ಕಡಿಮೆ ಪ್ರೀಮಿಯಂ ನಮೂದಿಸಿದವರಿಗೆ ಟೆಂಡರ್ ಅಂತಿಮವಾಗಲಿದೆ.

ರೈತರು ಮುಂಗಾರು ಬೆಳೆಗೆ ಶೇ.1.5ರಷ್ಟು ಹಾಗೂ ಹಿಂಗಾರು ಬೆಳೆಗೆ ಶೇ.2 ರಷ್ಟು ಪ್ರೀಮಿಯಂ ಮೊತ್ತ ಭರಿಸಬೇಕು. ಉಳಿದ ಮೊತ್ತವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಮವಾಗಿ ಭರಿಸುತ್ತದೆ ಎಂದು ಹೇಳಿದರು.

Comments are closed.