ಕರ್ನಾಟಕ

ಮುಖ್ಯಮಂತ್ರಿಯಿಂದ ರೈತರ ಸಾಲ ಮನ್ನಾಗೆ ಗ್ರೀನ್ ಸಿಗ್ನಲ್ ನೀಡಿಕೆ!

Pinterest LinkedIn Tumblr


ಬೆಂಗಳೂರು : ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿರುವ ರೈತರ ಸಾಲಮನ್ನಾದ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದ್ದು, ಎರಡು ಹಂತದಲ್ಲಿ ಸಾಲಮನ್ನಾ ಮಾಡುವ ಚಿಂತನೆ ನಡೆದಿದೆ.

ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ಸಾಲಮನ್ನಾ ಘೋಷಣೆಯ ಭರವಸೆ ನೀಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಸಾಲಮನ್ನಾ ವಿಚಾರವು ತಲೆಬಿಸಿ ಉಂಟುಮಾಡಿತ್ತು. ಪ್ರತಿಪಕ್ಷ ಬಿಜೆಪಿ ಇದಕ್ಕೆ ಪ್ರಮುಖ ಟೀಕಾಸ್ತ್ರವನ್ನಾಗಿ ಬಳಸಿಕೊಳ್ಳಲಾರಂಭಿಸಿದೆ. ಬಿಜೆಪಿ ಟೀಕೆಗೆ ಪ್ರತ್ಯುತ್ತರ ನೀಡಬೇಕಿರುವ ಕಾರಣ ಬಜೆಟ್‌ನಲ್ಲಿ ಸಾಲಮನ್ನಾ ಘೋಷಣೆಯ ವಿಚಾರವನ್ನು ಪ್ರಸ್ತಾಪ ಮಾಡಲು ಮುಖ್ಯಮಂತ್ರಿ ಸನ್ನದ್ಧರಾಗಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಎರಡು ಹಂತದಲ್ಲಿ ಸಾಲಮನ್ನಾ ಮಾಡುವ ಚಿಂತನೆ ನಡೆಸಿರುವ ಕುಮಾರಸ್ವಾಮಿ ಮೊದಲ ಹಂತದಲ್ಲಿ 33 ಸಾವಿರ ಕೋಟಿ ರು. ಮತ್ತು ಎರಡನೇ ಹಂತದಲ್ಲಿ ಉಳಿದ 20 ಕೋಟಿ ರು.ನಷ್ಟುಸಾಲಮನ್ನಾ ಮಾಡುವ ಆಲೋಚನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಸಾಲಮನ್ನಾದಿಂದ ರಾಜ್ಯಕ್ಕಾಗುವ ಆರ್ಥಿಕ ಹೊರೆ ಕುರಿತು ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

ಬ್ಯಾಂಕ್‌ಗಳಿಗೆ ಶೂರಿಟಿ ಬಾಂಡ್‌ ನೀಡುವ ಮಾದರಿಯನ್ನು ಅನುಸರಿಸುವ ಚಿಂತನೆ ನಡೆದಿದೆ. ಆದರೆ ಇದು ಕೇವಲ ಇನ್ನೂ ಚರ್ಚೆಯ ಹಂತದಲ್ಲಿದೆ. ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಬ್ಯಾಂಕ್‌ಗಳ ಮುಖ್ಯಸ್ಥರ ಜತೆ ಮತ್ತು ಮತ್ತೊಮ್ಮೆ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಜು.5ರಂದು ಬಜೆಟ್‌ ಮಂಡನೆ ಮಾಡಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ. ಬಜೆಟ್‌ನಲ್ಲಿ ಸಾಲಮನ್ನಾದ ಬಗ್ಗೆ ಘೋಷಣೆ ಮಾಡಲು ಉದ್ದೇಶಿಸಲಾಗಿದೆ ಎನ್ನಲಾಗಿದೆ.

ಪ್ರತಿಪಕ್ಷ ಬಿಜೆಪಿ ಸಾಲಮನ್ನಾ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡದಿದ್ದರೆ ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ. ಇದರಿಂದ ತಪ್ಪಿಸಿಕೊಳ್ಳಲು ಈ ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗಿದೆ.

ಸಾಲಮನ್ನಾ ಮಾಡುವ ವಿಚಾರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚೆಗೆ ದೆಹಲಿಗೆ ತೆರಳಿದ ವೇಳೆ ಪ್ರಧಾನಿಗೆ ಶೇ.50ರಷ್ಟುನೆರವು ನೀಡುವಂತೆ ಮನವಿ ಮಾಡಿದ್ದರು. ಕೇಂದ್ರದಿಂದ ನೆರವು ಲಭ್ಯವಾಗದಿದ್ದರೂ ಇತರೆ ಮೂಲಗಳಿಂದ ಸಾಲಮನ್ನಾ ಮಾಡುವುದಕ್ಕೆ ಬದ್ಧವಾಗಿರುವುದಾಗಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಸಾಲಮನ್ನಾ ಮಾಡುವ ವಾಗ್ದಾನ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಸಾಲಮನ್ನಾ ಮಾಡುವ ಕುರಿತು ಕಸರತ್ತು ಪ್ರಾರಂಭಿಸಿದ್ದಾರೆ.

Comments are closed.