ಕರ್ನಾಟಕ

ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆ

Pinterest LinkedIn Tumblr


ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದ್ದು , ಉತ್ತರ ಕರ್ನಾಟಕದ ಹಲವೆಡೆ ಭಾರೀ ಅವಾಂತರಗಳನ್ನು ಸೃಷ್ಟಿಸಿದೆ. ಗದಗದ ತಿಮ್ಮಾಪುರದಲ್ಲಿ ಗೋಡೆ ಕುಸಿದ ಪರಿಣಾಮ ಮನೆಯಲ್ಲಿ ಮಲಗಿದ್ದ ಮಳಿದೆ ದಾರುಣವಾಗಿ ಸಾವನ್ನಪ್ಪಿದ ಅವಘಡ ಸೋಮವಾರ ರಾತ್ರಿ ನಡೆದಿದೆ.

ಮೃತ ಮಹಿಳೆ 56 ವರ್ಷದ ಮಲ್ಲವ್ವ ಜಲಾಲ್‌ ಎಂದು ತಿಳಿದು ಬಂದಿದ್ದು, ಗೋಡೆ ಕುಸಿದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಶವವನ್ನು ಸ್ಥಳೀಯರು ಅವಶೇಷಗಳ ಅಡಿಯಿಂದ ಮೇಲಕ್ಕೆತ್ತಿದ್ದಾರೆ.

ಬೆಳಗಾವಿಯಲ್ಲೂ ಗಾಳಿ ಸಹಿತ ಭಾರೀ ಮಳೆ ಸುರಿದಿದ್ದು, ಹಲವು ವಿದ್ಯುತ್‌ ಕಂಬಗಳು ಧರಾಶಾಹಿಯಾಗಿವೆ. ಹಲವು ಮನೆಗಳಿಗೆ ಹಾನಿಯಾಗಿದ್ದು, ವಿವಿಧೆಡೆ ಮರಗಳು ಧರೆಗುರುಳಿವೆ.

ಚಿತ್ರದುರ್ಗ, ರಾಮನಗರ , ಹಾವೇರಿಯಲ್ಲೂ ಭಾರೀ ಮಳೆ ಸುರಿದಿದ್ದು ಹಲವು ಅವಾಂತರಗಳನ್ನು ಸೃಷ್ಟಿಸಿದೆ.

ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ವಾಹನಗಳು ನೀರಪಾಲಾಗಿರುವ ಬಗ್ಗೆ ವರದಿಯಾಗಿದೆ. ಶಿಗ್ಗಾಂವ್‌ನ ಮೋಡಚಿ ಹಳ್ಳದಲ್ಲಿ ಟ್ರ್ಯಾಕ್ಟರ್‌ ನೀರುಪಾಲಾಗಿದ್ದು, ಅದೃಷ್ಟವಷಾತ್‌ ಟ್ರ್ಯಾಕ್ಟರ್‌ನಲ್ಲಿದ್ದ ನಾಲ್ವರು ರೈತರು ಪಾರಾಗಿದ್ದಾರೆ.

ಧಾರವಾಡದಲ್ಲೂ ವ್ಯಾಪಕ ಮಳೆಯಾಗಿದ್ದು ಅಪಾರ ಹಾನಿ ಸಂಭವಿಸಿದೆ. ಕುಂದಗೋಳದ ಬೆಣ್ಣೆ ಹಳ್ಳದಲ್ಲಿ ಟ್ರ್ಯಾಕ್ಟರ್‌ ಮುಳುಗಿದ್ದು , ರೈತ ಈಜಿ ದಡ ಸೇರಿದ ಘಟನೆ ನಡೆದಿದೆ.

ರಾಮನಗರ ದಲ್ಲೂ ಭಾರೀ ಮಳೆ ಸುರಿದಿದ್ದು , ಬೆಂಗಳೂರು -ಮೈಸೂರು ಹೆದ್ದಾರಿ ಜಲಾವೃತವಾಗಿ ವಾಹನ ಸವಾರರು ಪರದಾಡಬೇಕಾಯಿತು.

ರಾಜ್ಯದಲ್ಲಿ ನಾಳೆ, ನಾಡಿದ್ದು ಮುಂಗಾರು ಅಬ್ಬರಿಸುವ ಮುನ್ಸೂಚನೆ ನೀಡಲಾಗಿದ್ದು ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.

Comments are closed.