ಅಂತರಾಷ್ಟ್ರೀಯ

ಸೌದಿಯಲ್ಲಿ ವಾಹನ ಚಲಾಯಿಸಲು ಮಹಿಳೆಯರಿಗಿದ್ದ ನಿಷೇಧ ತೆರವು!

Pinterest LinkedIn Tumblr


ರಿಯಾದ್‌: ವಾಹನ ಚಲಾಯಿಸಲು ಮಹಿಳೆಯರಿಗಿದ್ದ ನಿಷೇಧ ತೆರವುಗೊಳಿಸಲು ಸಿದ್ಧತೆ ನಡೆಸಿರುವ ಹೊತ್ತಿನಲ್ಲಿಯೇ ಸೌದಿ ಅರೇಬಿಯಾ ಸರಕಾರ ಸೋಮವಾರ ಮಹಿಳೆಯರಿಗೆ ವಾಹನ ಪರವಾನಗಿ ಪತ್ರಗಳನ್ನು ವಿತರಿಸಿದೆ.

ಸೌದಿಅರೇಬಿಯಾದಲ್ಲಿ ದಶಕಗಳಿಂದ ವಾಹನ ಚಲಾಯಿಸಲು ಮಹಿಳೆಯರಿಗಿದ್ದ ನಿಷೇಧವನ್ನು ಜೂನ್‌ 24ರಂದು ಪೂರ್ಣ ಪ್ರಮಾಣದಲ್ಲಿ ತೆಗೆದುಹಾಕಲು ಸರಕಾರ ತೀರ್ಮಾನಿಸಿದೆ. ಈ ಸಂಬಂಧ ಅಗತ್ಯ ಕಾನೂನು ಪ್ರಕ್ರಿಯೆಗಳೂ ನಡೆಯುತ್ತಿವೆ. ಅದರ ಭಾಗವಾಗಿ ವಾಹನ ಚಲಾವಣೆಯ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಸಾದ ಮಹಿಳೆಯರಿಗೆ ಡ್ರೈವಿಂಗ್‌ ಲೈಸನ್ಸ್‌ ವಿತರಿಸಲಾಗಿದೆ. ಮಹಿಳೆಯರಿಗಾಗಿ ಐದು ನಗರಗಳಲ್ಲಿ ವಾಹನ ಚಾಲನಾ ತರಬೇತಿ ಶಾಲೆ ಆರಂಭಿಸಲೂ ಸರಕಾರ ನಿರ್ಧರಿಸಿದೆ ಎಂದು ಸಾರಿಗೆ ಇಲಾಖೆ ಹೇಳಿದೆ. ಮೊದಲ ಹಂತದಲ್ಲಿ ಎಷ್ಟು ಮಂದಿಗೆ ವಿತರಿಸಲಾಗಿದೆ ಎಂಬುದನ್ನು ಅದು ಸ್ಪಷ್ಟಪಡಿಸಿಲ್ಲ.

ಇತ್ತೀಚಿನ ತಿಂಗಳಲ್ಲಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರು ಕೆಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇಸ್ಲಾಂ ಧರ್ಮದ ಸಂಪ್ರದಾಯವಾದಿ ಹಣೆಪಟ್ಟೆಯಿಂದ ಸೌದಿ ಅರೇಬಿಯಾವನ್ನು ಹೊರತರಲು ಯತ್ನಿಸಿದ್ದು ಅದರ ಒಂದು ಭಾಗವೇ ಮಹಿಳೆಯರಿಗೆ ಡ್ರೈವಿಂಗ್‌ ಲೈಸನ್ಸ್‌ ನೀಡುವುದಾಗಿದೆ. ಈ ಬೆಳವಣಿಗೆಯ ನಡುವೆಯೇ ಕೆಲ ಸಂಪ್ರದಾಯವಾದಿಗಳು ಮಹಿಳೆಯರ ಮೇಲೆ ಹಲ್ಲೆ ನಡೆಸುವ ಯತ್ನ ನಡೆಸಿದ್ದು ಅಂತಹ 17 ಮಂದಿಯನ್ನು ಕಳೆದ ವಾರ ಬಂಧಿಸಿರುವುದಾಗಿ ಸರಕಾರ ಹೇಳಿದೆ.

Comments are closed.