ಕರ್ನಾಟಕ

ಸಿದ್ದರಾಮಯ್ಯರನ್ನು ಕಟ್ಟಿ ಹಾಕಲು ತಂತ್ರ

Pinterest LinkedIn Tumblr

ಬೆಂಗಳೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೆಡ್ಡು ಹೊಡೆಯಲು ಜೆಡಿಎಸ್‌ ರಣತಂತ್ರ ರೂಪಿಸಿರುವ ಬೆನ್ನಲ್ಲೇ ಅವರ ಪುತ್ರ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿರುವ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಆತಂಕಕ್ಕೆ ನೂಕಲು ಬಿಜೆಪಿ ಕಾರ್ಯತಂತ್ರ ಹೆಣೆಯುತ್ತಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಅವರು ಜೆಡಿಎಸ್‌ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಅವರಿಗೆ ಪೈಪೋಟಿ ನೀಡಲು ಸಜ್ಜಾಗಿದ್ದರೆ, ಅತ್ತ ವರುಣಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಪ್ರಯತ್ನ ನಡೆಸಲಾಗುತ್ತಿದೆ. ಆ ಮೂಲಕ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರದಲ್ಲೇ ಕಟ್ಟಿ ಹಾಕುವ ತಂತ್ರವನ್ನು ಜೆಡಿಎಸ್‌ ಹಾಗೂ ಬಿಜೆಪಿ ಎರಡೂ ಮಾಡುತ್ತಿವೆ. ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಸ್ಥಳೀಯ ಬಿಜೆಪಿ ನಾಯಕರು ಪಕ್ಷದ ರಾಜ್ಯ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ಯಡಿಯೂರಪ್ಪ ಅವರಿಗೂ ಒಲವಿದೆ ಎಂದು ಹೇಳಲಾಗಿದೆ.

ವಿಜಯೇಂದ್ರ ಏಕೆ?: ಕ್ಷೇತ್ರದಲ್ಲಿ ಸುಮಾರು 60 ಸಾವಿರ ಲಿಂಗಾಯತ ಮತದಾರರಿದ್ದಾರೆ. ಜತೆಗೆ ಕುರುಬ ಸಮುದಾಯದವರು 45ರಿಂದ 48 ಸಾವಿರ, ಪರಿಶಿಷ್ಟ ಜಾತಿ ಮತ್ತು ಪಂಗಡದವರು 35 ಸಾವಿರದಷ್ಟಿದ್ದಾರೆ.

ವಿಜಯೇಂದ್ರ ಸ್ಪರ್ಧಿಸಿದರೆ ಲಿಂಗಾಯತ ಮತಗಳು ಬಿಜೆಪಿಗೆ ಪಕ್ಕಾ ಆಗುತ್ತದೆ. ಇತ್ತೀಚೆಗಷ್ಟೇ ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವುದರಿಂದ ಈ ಸಮುದಾಯದ ಮತಗಳು ಬಿಜೆಪಿಗೆ ಬೀಳುತ್ತವೆ. ಜತೆಗೆ ಪಕ್ಕದ ನಂಜನಗೂಡು ಕ್ಷೇತ್ರದ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ಮತ್ತು ಸಂಸದ ಶ್ರೀರಾಮುಲು ಬೆಂಬಲಕ್ಕೆ ನಿಂತರೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಹಳಷ್ಟು ಮತಗಳನ್ನು ಸೆಳೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.

-ಉದಯವಾಣಿ

Comments are closed.