ರಾಷ್ಟ್ರೀಯ

ನೀರವ್‌ ಮೋದಿ, ಮೇಹುಲ್‌ ಚೋಕ್ಸಿರನ್ನು ಹಿಡಿದು ತರಲಿದ್ದೇವೆ: ರಕ್ಷಣಾ ಸಚಿವೆ

Pinterest LinkedIn Tumblr


ದೆಹಲಿ: ಸಾರ್ವಜನಿಕ ವಲಯದ ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ಗೆ 12,600 ಕೋಟಿ ರುಗಳ ವಂಚನೆ ಮಾಡಿ ದೇಶ ಬಿಟ್ಟು ಓಡಿಹೋಗಿರುವ ಆರ್ಥಿಕ ಅಪರಾಧಿಗಳಾದ ನೀರವ್‌ ಮೋದಿ ಹಾಗು ಮೇಹುಲ್‌ ಚೋಕ್ಸಿರನ್ನು ಸರಕಾರ ಮರಳಿ ಭಾರತಕ್ಕೆ ತರಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

“ವ್ಯವಸ್ಥೆಯಲ್ಲಿ ಈ ರೀತಿಯ ಹುಳುಕುಗಳು ಇರದಂತೆ ಎಚ್ಚರಿಕೆ ವಹಿಸಬೇಕಿದೆ. ನೀರವ್‌ ಮೋದಿ ಹಾಗೂ ಚೋಕ್ಸಿ ಈ ಬಾರಿ ತಪ್ಪಿಸಕೊಂಡಿದ್ದಾರೆ. ಆದರೆ ಅವರನ್ನು ಹಿಡಿದು ಭಾರತಕ್ಕೆ ತರಲಿದ್ದೇವೆ” ಎಂದು ಸೀತಾರಾಮನ್‌ ತಿಳಿಸಿದ್ದಾರೆ.

ತಮ್ಮ ಸರಕಾರ ಸುಧಾರಣೆಗಳನ್ನು ತರಲು ಕಟಿಬದ್ಧವಾಗಿದ್ದು ಈ ನಿಟ್ಟಿನಲ್ಲಿ ಜಿಎಸ್‌ಟಿ ಜ್ವಲಂತ ನಿದರ್ಶನವಾಗಿದೆ ಎಂದು ಸೀತಾರಮಾನ್‌, “ಕೆಲ ಸಮಸ್ಯೆಗಳಿದ್ದರೂ, ಜಿಎಸ್‌ಟಿಯನ್ನು ಸರಕಾರ ಯಶಸ್ವಿಯಾಗಿ ಜಾರಿಗೊಳಿಸಿದೆ. ಜಿಎಸ್‌ಟಿ ಅನುಷ್ಠಾನವನ್ನು ಮುಂದೂಡಲು ಎಲ್ಲ ರೀತಿಯಲ್ಲೂ ಒತ್ತಡ ಹೇರಲಾಗಿತ್ತು. ಆದರೆ ಜಿಎಸ್‌ಟಿಯಂಥ ಧೈರ್ಯಶಾಲೀ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ನಮ್ಮ ಸರಕಾರ ಕಟಿಬದ್ಧವಾಗಿದೆ” ಎಂದು ತಮ್ಮ ಸರಕಾರ ತೆಗೆದುಕೊಳ್ಳುತ್ತಿರುವ ಸುಧಾರಣಾ ಕ್ರಮಗಳ ಕುರಿತಂತೆ ವಿವರಿಸಿದ್ದಾರೆ.

ಮಾಧ್ಯಮವೊಂದರ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಸೀತಾರಾಮನ್ , “ನಮ್ಮ ಸರಕಾರದಲ್ಲಿ ಭ್ರಷ್ಟಾಚಾರದ ಮಾತೇ ಇಲ್ಲ. ಸರಕಾರದ ಎಲ್ಲ ನಿರ್ಧಾರಗಳನ್ನು ನೀತಿ ಅನುಸಾರವೇ ತೆಗೆದುಕೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ.

“ಸೂಕ್ತವಾದ ವ್ಯಕ್ತಿಗಳ ಮೂಲಕ ಸೂಕ್ತ ಕೆಲಸಗಳಿಗೆ ಹಣ ವ್ಯಯ ಮಾಡುವುದೇ ಭ್ರಷ್ಟಾಚಾರ ಮುಕ್ತ ಸರಕಾರ ಅರ್ಥವಾಗಿದೆ” ಎಂದು ಸೀತಾರಾಮನ್‌, ಡಿಜಿಟಲೀಕರಣದ ಮೂಲಕ ಪ್ರತಿಯೊಬ್ಬರಿಗೂ ಲಾಭವಾಗಿದೆ ಎಂದಿದ್ದಾರೆ.

Comments are closed.