ರಾಷ್ಟ್ರೀಯ

ಭ್ರಷ್ಟ ಅಧಿಕಾರಿಗಳಿಗೆ ಪಾಸ್‌ಪೋರ್ಟ್‌ ಇಲ್ಲ

Pinterest LinkedIn Tumblr


ಹೊಸದಿಲ್ಲಿ: ಅಪರಾಧ ಪ್ರಕರಣ ಅಥವಾ ಭ್ರಷ್ಟಾಚಾರ ಪ್ರಕರಣ ಎದುರಿಸುತ್ತಿರುವ ಅಧಿಕಾರಿಗಳಿಗೆ ಇನ್ನು ಮುಂದೆ ಪಾಸ್‌ಪೋರ್ಟ್‌ ಸಿಗಲ್ಲ. ಈ ಸಂಬಂಧ ಕೇಂದ್ರ ಸಿಬಂದಿ ಮತ್ತು ತರಬೇತಿ ಸಚಿವಾಲಯ ಅಂತಿಮಗೊಳಿಸಿರುವ ಹೊಸ ನಿಯಮಾವಳಿಯಲ್ಲಿ ಸೇರಿಸಲಾಗಿದೆ. ಆದರೆ, ತುರ್ತು ವೈದ್ಯಕೀಯ ಸನ್ನಿವೇಶದಲ್ಲಿ ವಿದೇಶಕ್ಕೆ ತೆರಳಬೇಕಾದ ಅನಿವಾರ್ಯ ಎದುರಾದಾಗ ಮಾತ್ರವೇ ವಿಶೇಷ ವಿನಾಯಿತಿ ನೀಡಲಾಗುತ್ತದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದರೆ, ತನಿಖೆ ನಡೆಯುತ್ತಿದ್ದರೆ ಹಾಗೂ ಯಾವುದೇ ಸರಕಾರಿ ಸಂಸ್ಥೆಯಿಂದ ಅಧಿಕಾರಿಯ ವಿರುದ್ಧ FIR ದಾಖಲಾಗಿದ್ದರೆ ಮತ್ತು ಅಧಿಕಾರಿಯನ್ನು ಅಮಾನತಿನಲ್ಲಿರಿಸಿದ್ದರೆ ಪಾಸ್‌ಪೋರ್ಟ್‌ ನೀಡಿಕೆ ತಿರಸ್ಕರಿಸಲಾಗುತ್ತದೆ. ಅಲ್ಲದೆ ಅಪರಾಧ ಪ್ರಕರಣಗಳು ವಿಚಾರಣೆಯಲ್ಲಿದ್ದರೂ ಈ ನಿಯಮ ಅನ್ವಯವಾಗುತ್ತದೆ. ಕೇವಲ ಎಫ್.ಐ.ಆರ್‌. ದಾಖಲಾಗಿ, ಚಾರ್ಜ್‌ಶೀಟ್‌ ದಾಖಲಾಗಿಲ್ಲದಿದ್ದರೆ ಅಂಥವರಿಗೆ ಪಾಸ್‌ ಪೋರ್ಟ್‌ ನಿರಾಕರಿಸುವಂತಿಲ್ಲ.

ಎಫ್ಐಆರ್‌ನ ವಿವರಣೆಯನ್ನು ಪಾಸ್‌ಪೋರ್ಟ್‌ ಕಚೇರಿಗೆ ನೀಡಲಾಗುತ್ತದೆ. ಆದರೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಪಾಸ್‌ಪೋರ್ಟ್‌ ಕಚೇರಿಗೆ ಬಿಡಲಾಗುತ್ತದೆ. ಯಾವುದೇ ಶಿಸ್ತುಕ್ರಮ ಎದುರಿಸುತ್ತಿರುವ ಅಧಿಕಾರಿಗೆ ಪಾಸ್‌ಪೋರ್ಟ್‌ ನೀಡುವುದಿಲ್ಲ. ಆದರೆ ಅಧಿಕಾರಿಯ ಸಂಬಂಧಿಕರು ಅಥವಾ ಸ್ವತಃ ಅಧಿಕಾರಿಯು ಆರೋಗ್ಯ ಸಮಸ್ಯೆ ಹೊಂದಿದ್ದು, ವಿದೇಶಕ್ಕೆ ತೆರಳಬೇಕಿದ್ದರೆ ಆಗ ಪಾಸ್‌ಪೋರ್ಟ್‌ ನೀಡಲಾಗುತ್ತದೆ.

ಅಧಿಕಾರಿಯೊಬ್ಬರ ವಿರುದ್ಧ ಖಾಸಗಿ ದೂರು, ಈ ಸಂಬಂಧ ಎಫ್.ಐ.ಆರ್‌. ದಾಖಲಾಗಿದ್ದರೆ ಅಂಥವರಿಗೆ ಪಾಸ್‌ ಪೋರ್ಟ್‌ ನಿರಾಕರಿಸಲಾಗದು. ಕೇಂದ್ರ ಸರಕಾರದ ಎಲ್ಲ ಇಲಾಖೆಗಳಿಗೂ ನಿಯಮಾವಳಿಯ ಪ್ರತಿಯನ್ನು ಕಳುಹಿಸಲಾಗಿದೆ.

-ಉದಯವಾಣಿ

Comments are closed.