ಕರ್ನಾಟಕ

ಪತ್ನಿ ಶವದ ಎದುರು ರಾತ್ರಿ ಕಳೆದ ಟೆಕ್ಕಿ!

Pinterest LinkedIn Tumblr


ಬೆಂಗಳೂರು: ಅನುಮಾನಾಸ್ಪದವಾಗಿ ಮೃತಪಟ್ಟ ಪತ್ನಿಯ ಶವವನ್ನು ಮನೆಯ ಸೋಫಾ ಮೇಲೆ ಇಟ್ಟುಕೊಂಡು ಸಾಫ್ಟ್‌ವೇರ್‌ ಎಂಜಿನಿಯರ್‌ವೊಬ್ಬ ರಾತ್ರಿಯಿಡೀ ಕಳೆದಿರುವ ಘಟನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶ ವಿಠ್ಠಲ ನಗರ ರಸ್ತೆಯಲ್ಲಿ ನಡೆದಿದೆ.

ನಗರದ ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಯಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿರುವ ವಿಜಯ್‌ ಕಿರಣ್‌ (35) ತನ್ನ ಪತ್ನಿ ತುಳಸಿ (31) ಶವವನ್ನು ಮನೆಯಲ್ಲಿಟ್ಟುಕೊಂಡು ರಾತ್ರಿ ಕಳೆದಿದ್ದಾನೆ. ಸಾವಿನಲ್ಲಿ ಈತನ ಕೈವಾಡ ಶಂಕಿಸಿರುವ ಪೊಲೀಸರು, ವಶಕ್ಕೆ ಪಡೆದಿದ್ದಾರೆ. ಮಹಿಳೆಯ ಪಾಲಕರ ದೂರು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ವಿಜಯ್‌ ಕಿರಣ್‌ ಹಾಗೂ ಗುಂಟೂರಿನ ತುಳಸಿ ನಡುವೆ 4 ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿಗೆ 2 ವರ್ಷದ ಮಗುವಿದ್ದು, ಗುಂಟೂರಿನಲ್ಲಿರುವ ಅಜ್ಜಿ-ತಾತನ ಮನೆಯಲ್ಲಿ ಬೆಳೆಯುತ್ತಿತ್ತು. ಕಳೆದ ಆರು ತಿಂಗಳಿಂದ ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿರುವ ಬಾಡಿಗೆ ಮನೆಯಲ್ಲಿ ವಿಜಯ್‌ ಹಾಗೂ ತುಳಸಿ ದಂಪತಿ ವಾಸವಿದ್ದರು. ವಿಪ್ರೋದಲ್ಲಿ ಎಂಜಿನಿಯರ್‌ ಆಗಿದ್ದ ವಿಜಯ್‌, ಎಂಜಿನಿಯರ್‌ ವಿದ್ಯಾರ್ಥಿಗಳಿಗೆ ಮನೆಯಲ್ಲೇ ಟ್ಯೂಷನ್‌ ಕೂಡಾ ಹೇಳಿಕೊಡುತ್ತಿದ್ದ.

ವಾಯುವಿಹಾರಕ್ಕೆ ಹೋಗಿದ್ದಾಗ ಘಟನೆ :
‘‘ಭಾನುವಾರ ರಾತ್ರಿ 11ರಿಂದ 12 ಗಂಟೆ ನಡುವೆ ಪತ್ನಿ ಹಾಗೂ ನನ್ನ ನಡುವೆ ಜಗಳವಾಗಿದೆ. 12 ಗಂಟೆ ಸುಮಾರಿಗೆ ಬೇಸರಗೊಂಡು ನಾನು ಕೆಲ ಕಾಲ ವಾಯು ವಿಹಾರ ಮಾಡಲೆಂದು ಮನೆಯಿಂದ ಹೊರಗೆ ಹೋಗಿದ್ದೆ. 15 ನಿಮಿಷ ಬಿಟ್ಟು ಮನೆಯೊಳಗೆ ಪ್ರವೇಶಿಸಿದಾಗ ಮಲಗುವ ಕೊಠಡಿಗೆ ತೆರಳಿದ್ದ ತುಳಸಿ, ಬಾಗಿಲು ಹಾಕಿಕೊಂಡಿದ್ದಳು. ಬಾಗಿಲು ಬಡಿದಾಗ ತೆಗೆದಿಲ್ಲ. ಹೀಗಾಗಿ, ಅನುಮಾನಗೊಂಡು ಬಾಗಿಲಿನ ಕೆಳಗೆ ಇರುವ ಸಂದಿಯಲ್ಲಿ ಇಣುಕಿ ನೋಡಿದೆ. ಈ ವೇಳೆ ಏನೋ ತೊಂದರೆಯಾಗಿದೆ ಎಂದು ಅನುಮಾನಗೊಂಡು ಬಲ ಪ್ರಯೋಗಿಸಿ ಬಾಗಿಲು ಮುರಿದು ಒಳಗೆ ಹೋದಾಗ ಹೆಂಡತಿ ನೇಣು ಹಾಕಿಕೊಂಡಿದ್ದಳು’’ ಎಂದು ಪೊಲೀಸರ ವಿಚಾರಣೆ ವೇಳೆ ವಿಜಯ್‌ ಕಿರಣ್‌ ತಿಳಿಸಿದ್ದೇನೆ.

‘‘ಪತ್ನಿ ಸೀರೆಯಿಂದ ಫ್ಯಾನಿಗೆ ನೇಣು ಹಾಕಿಕೊಂಡಿದ್ದಳು. ಕೂಡಲೇ ಕೆಳಗಿಳಿಸಿದೆ. ಮೈ ಬಿಸಿ ಇತ್ತು. ಹೀಗಾಗಿ, ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲೇ ಆಕೆಯನ್ನು ಹೊರಗೆ ಎತ್ತಿಕೊಂಡು ಹೋಗಿ ಆಟೋದಲ್ಲಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದೆ. ವೈದ್ಯರು ಪರೀಕ್ಷಿಸಿ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾಳೆಂದು ತಿಳಿಸಿದರು. ಹೀಗಾಗಿ, ಆಕೆಯ ಶವವನ್ನು ವಾಪಸ್‌ ಮನೆಗೆ ತೆಗೆದುಕೊಂಡು ಬಂದಿದ್ದೇನೆ,’’ ಎಂದು ವಿಜಯ್‌ ಕಿರಣ್‌ ಹೇಳಿದ್ದಾನೆ.

ಪೊಲೀಸರಿಗೆ ಮಾಹಿತಿ ನೀಡಲು ವಿಳಂಬ:

ಆರೋಪಿ ರಾತ್ರಿಯೇ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ಆದರೆ, ಮಾಹಿತಿ ನೀಡಿಲ್ಲ. ಮನೆ ಮಾಲೀಕರಿಗೆ ಅಥವಾ ಪರಿಚಿತರಿಗೂ ವಿಷಯ ತಿಳಿಸಿಲ್ಲ. ಆದರೆ, ಶವವನ್ನು ಮನೆಯಲ್ಲಿ ಇಟ್ಟುಕೊಂಡು ರಾತ್ರಿ ಕಳೆದಿದ್ದಾನೆ. ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮನೆ ಮಾಲೀಕರು ವಿಷಯ ತಿಳಿದು ನಮಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿ ಆತನನ್ನು ವಶಕ್ಕೆ ಪಡೆಯಲಾಗಿದೆ. ಮೃತನ ಪಾಲಕರಿಗೆ ಮಾಹಿತಿ ನೀಡಿ ಅವರ ಬರುವಿಕೆಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದರು.

ತುಳಸಿ ನೇಣು ಹಾಕಿಕೊಂಡಿದ್ದಾಳೆ ಎಂದು ಹೇಳಲಾದ ಮಲಗುವ ಕೊಠಡಿಯ ಬಾಗಿಲಿನ ಬೋಲ್ಟ್‌ಗಳು ಮುರಿದಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದರು.

ತಾನು ಬೇರೆ ಮಹಿಳೆಯರ ಜತೆ ತುಂಬಾ ಹೊತ್ತು ಮಾತನಾಡುತ್ತಿದ್ದೆ ಎಂದು ಪತ್ನಿ ಜಗಳ ತೆಗೆಯುತ್ತಿದ್ದಳು. ಅದೇ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು. ಭಾನುವಾರ ರಾತ್ರಿ ಕೂಡಾ ಜಗಳವಾಗಿದೆ. ನಾನು ಹೊರಗೆ ಹೋಗಿದ್ದ ವೇಳೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ವಿಜಯ್‌ ಕಿರಣ್‌ ಹೇಳುತ್ತಿದ್ದಾನೆ. ಆದರೆ, ಆತ ಮಗಳಿಗೆ ಕಿರುಕುಳ ನೀಡುತ್ತಿದ್ದ ಎಂದು ಪಾಲಕರು ಫೋನ್‌ನಲ್ಲಿ ತಿಳಿಸಿದ್ದಾರೆ. ಹೀಗಾಗಿ, ಅವರು ಬಂದ ನಂತರ ಹೆಚ್ಚಿನ ಮಾಹಿತಿ ಪಡೆದು, ನೀಡುವ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುವುದು ಎಂದು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ತಿಳಿಸಿದರು.

Comments are closed.