ಕರ್ನಾಟಕ

ಸದ್ಯದಲ್ಲೇ ಅಮಿತ್ ಶಾ ಕೈ ಸೇರಲಿದೆ ಸಮೀಕ್ಷಾ ವರದಿ

Pinterest LinkedIn Tumblr


ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಟೀಂ ಕಳೆದ ಮೂರು ದಿನಗಳಿಂದ ರಾಜ್ಯ ಪ್ರವಾಸದಲ್ಲಿದ್ದು, ಕ್ಷೇತ್ರವಾರು ಅವಲೋಕನಾ ಕಾರ್ಯವನ್ನು ಕೈಗೊಳ್ಳುತ್ತಿದ್ದಾರೆ. ಪ್ರತಿ ಕ್ಷೇತ್ರದ ಸ್ಥಿತಿಗತಿ ಪರಾಮರ್ಶಿಸುತ್ತಿರುವ ಟೀಂ ತಮಗೆ ವಹಿಸಲಾದ ಕ್ಷೇತ್ರದ ವಾಸ್ತವ ಸ್ಥಿತಿಯ ವರದಿಯನ್ನು ಹೈಕಮಾಂಡ್‌ಗೆ ನೀಡಲಿದೆ.

ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳುತ್ತಿರುವ 55 ಮಂದಿಯ ರಾಷ್ಟ್ರೀಯ ನಾಯಕರ ತಲಾ 4 ಕ್ಷೇತ್ರಗಳಲ್ಲಿ ಸಮಗ್ರ ಅಧ್ಯಯನ ಕಾರ್ಯವನ್ನು ನಡೆಸುತ್ತಿದೆ. ಮಂಗಳವಾರ ಅಮಿತ್ ಶಾ ಟೀಂ ತಮ್ಮ ಕ್ಷೇತ್ರವಾರು ಅವಲೋಕನಾ ಕಾರ್ಯವನ್ನು ಮುಗಿಸಲಿದ್ದು, ಅಂತಿಮ ವರದಿಯನ್ನು ವರಿಷ್ಠರಿಗೆ ಸಲ್ಲಿಸಲಿದ್ದಾರೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭ ಹೈಕಮಾಂಡ್ ಈ ವರದಿಯನ್ನು ಪರಿಗಣಿಸಲಿದೆ. ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಸಂಬಂಧ ಎರಡು ಸಮೀಕ್ಷೆಗಳನ್ನು ಪೂರ್ಣಗೊಳಿಸಿರುವ ಬಿಜೆಪಿ ವರಿಷ್ಠರು, ಈ 55 ನಾಯಕರ ತಂಡ ನೀಡುವ ಕ್ಷೇತ್ರವಾರು ವರದಿಯನ್ನೂ ಆಧರಿಸಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಿದೆ.

ವರದಿಯಲ್ಲಿ ಏನಿರಲಿದೆ? ಅಮಿತ್ ಶಾ ಸೂಚನೆಯಂತೆ ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವ 55 ರಾಷ್ಟ್ರೀಯ ನಾಯಕರ ತಂಡ ಕ್ಷೇತ್ರವಾರು ಭೇಟಿ ನೀಡುತ್ತಿರುವ ಅಲ್ಲಿನ ಸ್ಥಿತಿಗತಿ, ವಾಸ್ತವತೆ, ಆಕಾಂಕ್ಷಿಗಳ ಗೆಲ್ಲುವ ಸಾಮರ್ಥ್ಯ, ಇತರ ಪಕ್ಷಗಳ ಅಭ್ಯರ್ಥಿಗಳು ಮತ್ತು ಅವರ ಬಲಾಬಲ, ಬೂತ್ ಮಟ್ಟದ ಕಾರ್ಯಕರ್ತರ ಅಭಿಪ್ರಾಯ, ಕ್ಷೇತ್ರದಲ್ಲಿನ ಬಿಜೆಪಿ ಪರ ಮತ್ತು ಕಾಂಗ್ರೆಸ್ ವಿರುದ್ಧದ ಅಲೆ ಸೇರಿದಂತೆ ಪ್ರತಿ ಕ್ಷೇತ್ರದ ಗ್ರೌಂಡ್ ರಿಯಾಲಿಟಿಯನ್ನು ವರದಿಯಲ್ಲಿ ಉಲ್ಲೇಖಿಸಲಿದೆ. ಅಮಿತ್ ಶಾ ನೀಡಿದ ಗುರಿ, ಬೂತ್ ಪಕ್ಷ ಸಂಘಟನೆ ಇವುಗಳ ಈಡೇರಿಕೆ ಪ್ರಮಾಣದ ಅವಲೋಕನವೂ ನಡೆಯುತ್ತಿದೆ. ಆ ಮೂಲಕ ಹೈಕಮಾಂಡ್‌ಗೆ ಪ್ರತಿ ಕ್ಷೇತ್ರದ ಸ್ಪಷ್ಟ ಚಿತ್ರಣ ಸಿಗಲಿದ್ದು, ಅದನ್ನಾಧರಿಸಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕಾರ್ಯತಂತ್ರ ಬಿಜೆಪಿ ವರಿಷ್ಠರದ್ದು. 55 ಮಂದಿಯ ತಂಡಕ್ಕೆ ತಲಾ ನಾಲ್ಕು ಕ್ಷೇತ್ರಗಳ ಹೊಣೆಗಾರಿಕೆ ನೀಡಲಾಗಿದ್ದು, ಅಲ್ಲಿನ ಸಮಗ್ರ ಚಿತ್ರಣವನ್ನು ಒದಗಿಸಲಿದ್ದಾರೆ. ಕಳೆದ ಮೂರು ದಿನಗಳಿಂದ ಶಾ ಟೀಂ ಕ್ಷೇತ್ರವಾರು ಅಧ್ಯಯನ ಕಾರ್ಯದಲ್ಲಿ ತೊಡಗಿದೆ. ಮಂಗಳವಾರ ಅಮಿತ್ ಶಾ ಟೀಂ ತಮ್ಮ ಅವಲೋಕನವನ್ನು ಮುಗಿಸಲಿದ್ದು, ಆ ಮೂಲಕ 224 ಕ್ಷೇತ್ರಗಳ ಗ್ರೌಂಡ್ ರಿಯಾಲಿಟಿಯನ್ನು ವರದಿ ಮುಖೇನ ನೀಡಲಿದೆ.

ಮಾ.22ಕ್ಕೆ ಮೊದಲ ಪಟ್ಟಿ ಬಿಡುಗಡೆ:
ಈ ಬಾರಿ ವೈಜ್ಞಾನಿಕವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮುಂದಾಗಿರುವ ಬಿಜೆಪಿ, ಕ್ಷೇತ್ರದ ಜನರ, ಕಾರ್ಯಕರ್ತರ ನಾಡಿಮಿಡಿತವನ್ನು ಅರಿತು, ಅದಕ್ಕನುಗುಣವಾಗಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಿದೆ. ಆ ಮೂಲಕ ಜಯಗಳಿಸಬಲ್ಲಂಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿರ್ಧರಿಸಿದ್ದಾರೆ. ಟಿಕೆಟ್ ಹಂಚಿಕೆ ವಿಚಾರವಾಗಿ ಈಗಾಗಲೇ ಎರಡು ಸಮೀಕ್ಷೆಗಳನ್ನು ಬಿಜೆಪಿ ಪೂರ್ಣಗೊಳಿಸಿದೆ. ಈ ಎರಡೂ ಅಮಿತ್ ಶಾ ಕೈಸೇರಿದ್ದು, 55 ಮಂದಿಯ ತಂಡದಿಂದ ಸಿದ್ಧಗೊಳ್ಳುವ 224 ಕ್ಷೇತ್ರವಾರು ಅಧ್ಯಯನ ವರದಿ ಸದ್ಯದಲ್ಲೇ ಅಮಿತ್ ಶಾ ಕೈ ಸೇರಲಿದೆ. ಈ ಮೂರು ವರದಿಗಳನ್ನು ಆಧಾರಿಸಿ ಹೈಕಮಾಂಡ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಾ.22ಕ್ಕೆ ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದೆ. ಮೊದಲ ಪಟ್ಟಿಯಲ್ಲಿ ಸುಮಾರು 100 ಅಭ್ಯರ್ಥಿಗಳ ಹೆಸರು ಇರಲಿದೆ ಎನ್ನಲಾಗಿದೆ. ಮೊದಲ ಪಟ್ಟಿಯಲ್ಲಿ ಬಹುತೇಕ ಹಾಲಿ ಶಾಸಕರ ಹೆಸರು ಇರಲಿದ್ದು, ಉಳಿದಂತೆ ಗೆಲ್ಲಬಲ್ಲಂಥ ಇನ್ನು ಕೆಲವು ಅಭ್ಯರ್ಥಿಯ ಹೆಸರನ್ನೂ ಅಂತಿಮಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಮಾ.22ಕ್ಕೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.

ಕ್ಷೇತ್ರವಾರು ಹೊಣೆಗಾರಿಕೆ?
ಧರ್ಮೇಂದ್ರ ಪ್ರಧಾನ್- ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ, ಮುರಳಿಧರ ರಾವ್- ಶಿವಮೊಗ್ಗ ಗ್ರಾಮೀಣ, ಅನುರಾಗ್ ಸಿಂಗ್ ಠಾಕೂರ್-ರಾಯಚೂರು, ಬಂಡಾರು ದತ್ತಾತ್ರೇಯ-ಸಿಂಧನೂರು, ರಾಜವರ್ಧನ್ ಸಿಂಗ್ ರಾಠೋಡ್-ಕೆ.ಆರ್.ಪುರ, ಜೆ.ಪಿ. ನಡ್ಡಾ-ಕುಣಿಗಲ್, ಕೈಲಾಶ್ ವಿಜಯವರ್ಗಿಯಾ-ಗಂಗಾವತಿ, ಭೂಪೇಂದ್ರ ಯಾದವ್-ಪದ್ಮನಾಭನಗರ, ರಾಜೀವ್ ಪ್ರತಾಪ್-ಮಹಾಲಕ್ಷ್ಮೀ ಲೇಔಟ್, ನರೇಂದ್ರ ಸಿಂಗ್ ತೋಮರ್-ಜಗಳೂರು, ಥಾವರ್ ಚಂದ್ ಗೆಹ್ಲೋಟ್-ಕೆಜಿಎಫ್, ಸತ್ಯಪಾಲ್ ಸಿಂಗ್-ದಾವಣಗೆರೆ, ಡಾ. ಮಹೇಶ್ ಶರ್ಮಾ-ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಅರುಣ್ ಸಿಂಗ್-ಮುದ್ದೇಬಿಹಾಳ, ವಿನೋದ್ ಸೋನಕರ್-ಹಡಗಲಿ ಕ್ಷೇತ್ರದ ಹೊಣೆಗಾರಿಕೆ ನೀಡಲಾಗಿದೆ. ಇನ್ನು ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಿಜೆಪಿ ಹೆಚ್ಚಿನ ಒತ್ತು ನೀಡಿದ್ದು, ಈ ಕ್ಷೇತ್ರದ ಅವಲೋಕನದ ಜವಾಬ್ದಾರಿಯನ್ನು ಅಮಿತ್ ಶಾ ಟೀಂನ ಹುರಿಯಾಳು ರಾಜೇಂದ್ರ ಅಗರವಾಲ್‌ಗೆ ವಹಿಸಲಾಗಿದೆ.

ಹಾಲಿ ಶಾಸಕರಲ್ಲಿ ಶುರುವಾಗಿದೆ ತಳಮಳ
ಇದುವರೆಗೆ ರಾಜ್ಯ ನಾಯಕರೇ ಒಂದು ಸಮೀಕ್ಷಾ ವರದಿ ಮತ್ತು ಪಟ್ಟಿಯನ್ನು ನೀಡಿ ಅಭ್ಯರ್ಥಿಗಳನ್ನು ಹೈಕಮಾಂಡ್‌ನ ಸೀಲು ಗುದ್ದಿಸಿಕೊಂಡು ಬರುತ್ತಿದ್ದರು. ಇದರಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಆಗುತ್ತಿದ್ದವು. ಆದರೆ, ಪ್ರಸ್ತುತ ಸಮೀಕ್ಷೆ, ಸ್ಥಳೀಯ ಮಟ್ಟದ ಪ್ರಭಾವ, ಸೋಲು-ಗೆಲುವಿನ ಲೆಕ್ಕಾಚಾರಗಳನ್ನು ಕೇಂದ್ರದಿಂದ ಬಂದಿರುವ ನಾಯಕರೇ ನಡೆಸುತ್ತಿರುವುದರಿಂದ ಯಾವ ರೀತಿಯಲ್ಲಿ ವರದಿ ನೀಡಲಿದ್ದಾರೆ ಎಂಬ ತಳಮಳ ಹಾಲಿ ಶಾಸಕರು ಮತ್ತು ಮಾಜಿ ಶಾಸಕರಲ್ಲಿ ಉಂಟಾಗಿದೆ. ಸ್ಥಳೀಯ ಮಟ್ಟದಲ್ಲಿ ಅಮಿತ್ ಶಾ ಅವರ ತಂಡ ಸಮೀಕ್ಷೆ ನಡೆಸುತ್ತಿದ್ದರೆ, ಟಿಕೆಟ್ ಆಕಾಂಕ್ಷಿಗಳು ಪ್ರತಿದಿನದ ತಮ್ಮ ಪ್ರಚಾರ ವೈಖರಿ ಸೇರಿದಂತೆ ಇನ್ನೂ ಹಲವಾರು ಸಂಗತಿಗಳನ್ನು ನೇರವಾಗಿ ಬಿಜೆಪಿ ಕೇಂದ್ರ ಕಚೇರಿಗೆ ಇಮೇಲ್ ಮಾಡಲೇಬೇಕಾಗಿದೆ. ಒಂದು ವೇಳೆ ಇದರಲ್ಲಿ ಎಡವಟ್ಟು ಆಯ್ತೆಂದರೆ ಹೈಕಮಾಂಡ್‌ನಿಂದ ಟಿಕೆಟ್‌ಗೆ ಹಸಿರು ನಿಶಾನೆ ದೊರೆಯುವುದು ಕಷ್ಟ ಎಂಬ ಅಳುಕು ಎದುರಾಗಿದೆ.

Comments are closed.