ಕರ್ನಾಟಕ

ಕೈ ಹಿಡಿದ ಅಶೋಕ್ ಖೇಣಿ , ಮಾಜಿ ಸಚಿವ ನಾಯಕ್

Pinterest LinkedIn Tumblr

ಬೆಂಗಳೂರು, ಮಾ. ೫- ಕಾಂಗ್ರೆಸ್ ಪಕ್ಷದ ಕೆಲ ಶಾಸಕರ ವಿರೋಧದ ಮಧ್ಯೆಯೇ ನೈಸ್ ಸಂಸ್ಥೆ ಮುಖ್ಯಸ್ಥ ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ್ ಖೇಣಿ ಮತ್ತು ಮಾಜಿ ಸಚಿವ ಆರ್.ಎನ್. ನಾಯಕ್ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಪ್ರಚಾರ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಅಶೋಕ್ ಖೇಣಿ ಮತ್ತು ಆರ್.ಎನ್. ನಾಯಕ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಪರಮೇಶ್ವರ್ ಯಾವುದೇ ಷರತ್ತು ಇಲ್ಲದೆ ಅಶೋಕ್ ಖೇಣಿ ಪಕ್ಷ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ನೀತಿ, ಸಿದ್ಧಾಂತ ಹಾಗೂ ರಾಹುಲ್ ಗಾಂಧಿ ನಾಯಕತ್ವವನ್ನು ಒಪ್ಪಿದ್ದಾರೆ. ಹೀಗಾಗಿ ಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಹೆಚ್ಚಿನ ಬಲ ಬಂದಿದೆ. ಅಲ್ಲದೆ ಕರ್ನಾಟಕ ಮಕ್ಕಳ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸಿದ್ದಾರೆ ಎಂದರು.

ಅಶೋಕ್ ಖೇಣಿ ಸೇರ್ಪಡೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಯಾವುದೇ ವಿರೋಧವಿಲ್ಲ. ಎಲ್ಲರ ಅಭಿಪ್ರಾಯವನ್ನು ಕ್ರೂಢೀಕರಿಸಿ ಒಮ್ಮತದಿಂದ ಅಶೋಕ್ ಖೇಣಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಕಳೆದ ಬಾರಿ ಖೇಣಿ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ಸಂಗ್ರಾಮ್ ಅವರು ಸಮ್ಮತಿಸಿದ್ದು, ಇಂದು ಹಾಜರಾಗಿದ್ದಾರೆ ಎಂದು ಹೇಳಿದರು.

ನೈಸ್ ಸಂಸ್ಥೆ ಹಗರಣದ ರೂವಾರಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೀರಿ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುವುದಿಲ್ಲವೇ? ನೈತಿಕತೆ ಬಗ್ಗೆ ಏನು ಹೇಳುತ್ತೀರಿ? ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ನಾವು ಶಾಸಕರಾಗಿರುವ ಅಶೋಕ್ ಖೇಣಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆಯೇ ಹೊರತು ನೈಸ್ ಸಂಸ್ಥೆಯನ್ನಲ್ಲ. ನೈಸ್ ಸಂಸ್ಥೆಗೂ, ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ. ಕಾಂಗ್ರೆಸ್ ಪಕ್ಷ ಕಾನೂನಿನ ವಿರುದ್ಧವಾಗಿ ಎಂದೂ ನಡೆದುಕೊಂಡಿಲ್ಲ ಎಂದು ಹೇಳಿದರು.

ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಎಲ್ಲರ ಅಭಿಪ್ರಾಯವನ್ನು ಪಡೆದು ಖೇಣಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ನೈಸ್‌ಗೂ, ಕಾಂಗ್ರೆಸ್‌ಗೂ ಯಾವುದೇ ಸಂಪರ್ಕವೂ ಇಲ್ಲ, ಅದನ್ನು ಬೆಂಬಲಿಸುವುದೂ ಇಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವ ಆರ್.ಎನ್. ನಾಯಕ್ ಅವರನ್ನೂ ಕೂಡ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಕಳೆದ ಬಾರಿ ಅಶೋಕ್ ಖೇಣಿ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ಸಂಗ್ರಾಮ್ ಮತ್ತಿತರರು ಇದ್ದರು.

Comments are closed.