ರಾಷ್ಟ್ರೀಯ

ಸಂಸತ್ ನ ಉಭಯ ಸದನಗಳಲ್ಲಿ ಪಿಎನ್ ಬಿ ವಂಚನೆ ಪ್ರಕರಣ ಗದ್ದಲ; ಕಲಾಪ ನಾಳೆಗೆ ಮುಂದೂಡಿಕೆ

Pinterest LinkedIn Tumblr

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ಸಂಸತ್ ನ ಉಭಯ ಸದಗಳಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದ್ದು, ತೀವ್ರ ಗದ್ದಲದ ಪರಿಣಾಮ ಉಭಯ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

ಉದ್ಯಮಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸುಮಾರು 11, 300 ಕೋಟಿ ರೂ.ಗಳನ್ನು ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಸಂಸತ್ ನ ಉಭಯ ಕಲಾಪಗಳಲ್ಲಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡವು. ಕಲಾಪ ಆರಂಭವಾಗುತ್ತಿದ್ದಂತೆಯೇ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ಈ ಸಂಬಂಧ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದವು.

ಇದರ ಹೊರತಾಗಿ ಲೋಕಸಭೆಯಲ್ಲಿ ಟಿಆರ್ ಎಸ್ ಮತ್ತು ಟಿಡಿಪಿ ಪಕ್ಷದ ಶಾಸಕರು ವಿವಿಧ ಸಮಸ್ಯೆಗಳನ್ನು ಹೊತ್ತು ಧರಣಿ ನಡೆಸಿದರೆ, ತಮಿಳುನಾಡಿನ ಎಐಎಡಿಎಂಕೆ ಹಾಗೂ ಡಿಎಂಕೆ ಸದಸ್ಯರು ಕಾವೇರಿ ನಿರ್ವಹಣಾ ಮಂಡಳಿ ಕುರಿತು ಪ್ರತಿಭಟನೆ ಆರಂಭಿಸಿದರು. ಇನ್ನು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಪ್ರಸ್ತಾಪ ಮುಂದಿಟ್ಟ ಎನ್ ಡಿಎ ಮೈತ್ರಿಕೂಟದ ಮಿತ್ರ ಪಕ್ಷ ಟಿಡಿಪಿ ಕೂಡ ಸದನದ ಬಾವಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದೇ ಪರಿಸ್ಥಿತಿ ರಾಜ್ಯಸಭೆಯಲ್ಲೂ ಮುಂದುವರೆಯಿತು.

ಪಿಎನ್ ಬಿ ವಂಚನೆ ಪ್ರಕರಣ ಸಂಬಂಧ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಸರ್ಕಾರದ ಸ್ಪಷ್ಟನೆಗೆ ಪಟ್ಟು ಹಿಡಿಯಿತು. ಹೀಗಾಗಿ ರಾಜ್ಯ ಸಭೆ ಹಾಗೂ ಲೋಕಸಭೆ ಕಲಾಪವನ್ನುನಾಳೆಗೆ ಮುಂದೂಡಿಕೆ ಮಾಡಲಾಯಿತು. ಇನ್ನು ಇದಕ್ಕೂ ಮೊದಲು ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರು ನೂತನ ಸದಸ್ಯ ಅಮಿತ್ ಶಾ ಅವರಿಗೆ ಸ್ವಾಗತ ಕೋರಿದರು. ಬಳಿಕ ನಮ್ಮನ್ನಗಲಿದ ಗಣ್ಯರಿಗೆ ಮತ್ತು ಇತ್ತೀಚೆಗೆ ನಿಧನರಾದ ಮಾಜಿ ರಾಜ್ಯಸಭಾ ಸದಸ್ಯರಿಗೆ ಗೌರವ ಸಲ್ಲಿಕೆ ಮಾಡಲಾಯಿತು.

Comments are closed.