ಕರ್ನಾಟಕ

ಹಾಡಹಗಲೇ ಮಹಿಳೆಯರ ಬರ್ಬರ ಕೊಲೆ

Pinterest LinkedIn Tumblr


ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರನ್ನು ದುಷ್ಕರ್ಮಿಗಳು ಕುತ್ತಿಗೆ ಕೊಯ್ದು ಬರ್ಬರವಾಗಿ ಹತ್ಯೆಗೈದ ಘಟನೆಗಳು ಗುರುವಾರ ಬೆಳಗ್ಗೆ ನಗರದಲ್ಲಿ ನಡೆದಿವೆ. ಬ್ಯಾಟರಾಯನಪುರದ ಕಸ್ತೂರಬಾ ನಗರದಲ್ಲಿ ಗುರುವಾರ ಬೆಳಗ್ಗೆ ಮನೆಯೊಂದಕ್ಕೆ ನುಗ್ಗಿದ ಕಳ್ಳರು, ಕವಿತಾ (26) ಎಂಬುವವರ ಕತ್ತು ಕುಯ್ದು ಹತ್ಯೆಗೈದಿದ್ದಾರೆ.

ಬಳಿಕ 1.20 ಲಕ್ಷ ರೂ. ನಗದು, ಒಂದು ಮಾಂಗಲ್ಯ ಸರ ಹಾಗೂ ಇತರೆ ಚಿನ್ನಾಭರಣ ಕಳವು ಮಾಡಿ ನಾಪತ್ತೆಯಾಗಿದ್ದಾರೆ. 9.45ರ ಸುಮಾರಿಗೆ ಕವಿತಾ ತಂದೆ ಶಿವಪ್ಪ ಹಾಗೂ ನಾದಿನಿ ಮಂಗಳಗೌರಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ವಿಶೇಷ ತಂಡ ರಚಿಸಿದ್ದು, ಅನುಮಾನದ ಮೇಲೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಎಂ.ಎನ್‌.ಅನುಚೇತ್‌ ತಿಳಿಸಿದ್ದಾರೆ.

ಕಸ್ತೂರ ಬಾ ನಗರದಲ್ಲಿ ನೆಲೆಸಿರುವ ಶಿವರಾಮ್‌ ಕೆಲ ವರ್ಷಗಳ ಹಿಂದೆ ಕವಿತಾರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನಾಯಂಡಹಳ್ಳಿಯ ಫ್ಲೈವುಡ್‌ ಕಾರ್ಖಾನೆಯಲ್ಲಿ ಶಿವರಾಮ್‌ ಕೆಲಸ ಮಾಡುತ್ತಿದ್ದು,

ಗುರುವಾರ ಬೆಳಗ್ಗೆ 8.30ಕ್ಕೆ ಶಿವರಾಮ್‌ ಕೆಲಸಕ್ಕೆ ಹೋಗಿದ್ದು, ಕವಿತಾ ಮಕ್ಕಳನ್ನು ಶಾಲೆಗೆ ಬಿಡಲು ಹೋಗಿದ್ದರು. ವಾಪಸ್‌ ಬರುವಾಗ ಮನೆ ಸಮೀಪದಲ್ಲೇ ವಾಸವಾಗಿರುವ ತಂದೆ ಶಿವಪ್ಪ ಅವರನ್ನು ತಿಂಡಿ ತಿನ್ನಲು ಕರೆದಿದ್ದು, ತಂದೆ ಶಿವಪ್ಪ, ಬೋಂಡಾ ತರಲು ತೆರಳಿದ್ದರು.

30 ನಿಮಿಷದಲ್ಲೇ ನಡೆದ ಹತ್ಯೆ: 9.30ರ ಸುಮಾರಿಗೆ ಮನೆ ಬಳಿ ಬಂದ ಶಿವಪ್ಪ ಬಾಗಿಲು ಬಡಿದಿದ್ದಾರೆ. ಕವಿತಾ ಬಾಗಿಲು ತೆರೆದಿಲ್ಲ. ಹೀಗಾಗಿ ನೆಲಮಹಡಿಯಲ್ಲಿ ವಾಸವಿರುವ ಕವಿತಾರ ನಾದಿನಿ ಮಂಗಳಗೌರಿ ಮನೆಗೆ ಹೋಗಿ ವಿಚಾರಿಸಿದ್ದಾರೆ. ಇತ್ತ ಮಂಗಳಗೌರಿ ಕೀ ಹಿಡಿದು ಬಂದಾಗ ಕವಿತಾರ ಮನೆ ಬಾಗಿಲು ತೆರೆದಿತ್ತು.

ಒಳ ಹೋಗಿ ನೋಡಿದಾಗ ಕವಿತಾ ರಕ್ತದ ಮಡುವಲ್ಲಿ ಬಿದ್ದಿದ್ದರು. ಗಾಬರಿಗೊಂಡ ನಾದಿನಿ ಕಿರುಚಿಕೊಂಡಿದ್ದು ಕೇಳಿ ಒಳಬಂದ ಶಿವಪ್ಪ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚುವರಿ ಪೊಲೀಸ್‌ ಆಯುಕ್ತ ಬಿ.ಕೆ.ಸಿಂಗ್‌, ಡಿಸಿಪಿ ಅನುಚೇತ್‌, ಎಸಿಪಿ ಪ್ರಕಾಶ್‌ ಹಾಗೂ ಬ್ಯಾಟರಾಯನಪುರ ಇನ್ಸ್‌ಪೆಕ್ಟರ್‌ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.

ಐದು ಕೀಲಿ ಕೈ!: ಶಿವರಾಮ್‌ ಮತ್ತು ಕವಿತಾ ದಂಪತಿ ಮನೆಗೆ ಐದು ಕೀಲಿ ಕೈಗಳಿವೆ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಎರಡು ಕೀಲಿ ಪತಿ ಶಿವರಾಮ್‌, ಒಂದು ಪತ್ನಿ ಕವಿತಾ ಬಳಿಯಿತ್ತು. ಮತ್ತೂಂದು ಮಂಗಳಗೌರಿ ಹಾಗೂ ಇನ್ನೊಂದು ಮನೆಯಲ್ಲಿ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಚಯಸ್ಥರೇ ಕೀಲಿ ಕೈ ಕಳವು ಮಾಡಿ ಕೃತ್ಯವೆಸಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮನೆ ಭೋಗ್ಯ ಸಂಬಂಧ ಮಹಿಳೆ ಕೊಲೆ: ಮತ್ತೂಂದು ಪ್ರಕರಣದಲ್ಲಿ ಮನೆ ಭೋಗ್ಯ ವಿಚಾರವಾಗಿ ಮನೆ ಮಾಲೀಕನೇ ಬಾಡಿಗೆಯಿದ್ದ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಸದ್ದುಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಮಲಮ್ಮ (55) ಕೊಲೆಯಾದ ಮಹಿಳೆ.

ಬುಧವಾರ ರಾತ್ರಿ 10.30ರಲ್ಲಿ ಘಟನೆ ನಡೆದಿದ್ದು ಕಮಲಮ್ಮನ ಪುತ್ರ ನೀಡಿದ ದೂರಿನ ಮೇರೆಗೆ ಸಂತೋಷ್‌ ಮತ್ತು ಕೇಶವ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಮುಖ ಆರೋಪಿ ಮನೆ ಮಾಲೀಕ ಜಗದೀಶ್‌ ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಟಿಎಂ ಮೊದಲ ಹಂತದಲ್ಲಿನ ಗುಂಡು ತೋಪಿನಲ್ಲಿ ಕೆಲ ಸ್ಲಂ ವಸತಿ ಮನೆಗಳಿದ್ದು, ಈ ಪೈಕಿ ಜಗದೀಶ್‌ ಕೂಡ ಒಂದು ಮನೆ ಹೊಂದಿದ್ದಾನೆ. ಇದೇ ಮನೆಯಲ್ಲಿ ಖಾಸಗಿ ಕಂಪೆನಿಯಲ್ಲಿ ಹೌಸ್‌ಕೀಪಿಂಗ್‌ ಕೆಲಸ ಮಾಡುವ ಮೃತ ಕಮಲಮ್ಮ ತಮ್ಮ ಇಬ್ಬರು ಮಕ್ಕಳೊಂದಿಗೆ ಐದು ವರ್ಷಗಳಿಂದ ನೆಲೆಸಿದ್ದಾರೆ.

ಮನೆ ಭೋಗ್ಯ ಅವಧಿ ಮುಕ್ತಾಯವಾಗಿದ್ದರಿಂದ ಆರೋಪಿ ಜಗದೀಶ್‌ ಕಮಲಮ್ಮರನ್ನು ಮನೆ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದ. ಆದರೆ, ಭೋಗ್ಯ ಹಣ ವಾಪಸ್‌ ನೀಡದೆ ಮನೆ ಖಾಲಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಆದರೆ, ಜಗದೀಶ್‌ ಸದ್ಯ ನನ್ನ ಬಳಿ ಹಣವಿಲ್ಲ.

ಬೇರೆಯವರು ಮನೆಗೆ ಬಂದಾಗ ಹಣ ಕೊಡುತ್ತೇನೆ ಎಂದಿದ್ದ. ಆದರೆ, ಕಮಲಮ್ಮ ಇದಕ್ಕೆ ಒಪ್ಪಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಗದೀಶ್‌ ತನ್ನ ಸ್ನೇಹಿತರಾದ ಸಂತೋಷ್‌ ಮತ್ತು ಕೇಶವ ಜತೆ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಕಮಲಮ್ಮರ ಮನೆಗೆ ಹೋಗಿ ಗಲಾಟೆ ಮಾಡಿದ್ದಾರೆ. ಜಗಳ ವಿಕೋಪಕ್ಕೆ ಹೋದಾಗ ಜಗದೀಶ್‌ ಚಾಕುವಿನಿಂದ ಕಮಲಮ್ಮರ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ.

ಇದಕ್ಕೂ ಮೊದಲು ಜಗದೀಶ್‌ ಕಮಲಮ್ಮ ಪುತ್ರ ಮತ್ತು ಪತ್ರಿಯನ್ನು ಮನೆಯಿಂದ ಹೊರಹೋಗುವಂತೆ ಸೂಚಿಸಿದ್ದ. ದೊಡ್ಡವರ ವಿಚಾರವೆಂದು ಮಕ್ಕಳು ಹೊರಗಡೆ ಹೋಗಿದ್ದರು. ಆದರೆ, ಕೆಲ ಹೊತ್ತಿನ ಬಳಿಕ ಮನೆಗೆ ಬಂದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಮಕ್ಕಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

-ಉದಯವಾಣಿ

Comments are closed.