ಕರ್ನಾಟಕ

ಸಾಲ ಮನ್ನಾ ಜತೆಗೆ ಮತ್ತೆ ಸಾಲ ಮಾಡದಂತೆ ಯೋಜನೆ ಜಾರಿ: ಎಚ್​ಡಿಕೆ ಭರವಸೆ

Pinterest LinkedIn Tumblr


ಬಳ್ಳಾರಿ: ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವುದರ ಜೊತೆಗೆ, ಅವರು ಮತ್ತೆ ಸಾಲ ಮಾಡದಂತೆ ನೂತನ ಯೋಜನೆಗಳನ್ನು ಜಾರಿ ಮಾಡುತ್ತೇನೆ. ನನ್ನನ್ನು ಒಮ್ಮೆ ನಂಬಿ ಮತ ಹಾಕಿ ಎಂದು ಜೆಡಿಎಸ್​ ಅಧ್ಯಕ್ಷ ಹೆಚ್​.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಬೊಮ್ಮಘಟ್ಟದಲ್ಲಿ ಜೆಡಿಎಸ್​ ವಿಕಾಸ ಪರ್ವ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದ ನಂತರ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಉಚಿತವಾಗಿ ನೀಡುತ್ತೇವೆ ಎಂದು ಭರವಸೆ ನೀಡಿದರು.

ಕಳೆದ 10 ವರ್ಷದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರದ ಅನುಭವ ನಿಮಗಿದೆ. ಹಾಗೆಯೇ ನನ್ನ 20 ತಿಂಗಳ ರಾಜಕೀಯವನ್ನೂ ನೀವು ನೋಡಿದ್ದೀರ. ನನ್ನ ಕನಸಿನ ಯೋಜನೆಗಳನ್ನು ಜಾರಿಗೆ ತರಲು ಮತ ನೀಡುವ ಮೂಲಕ ಮತ್ತೊಂದು ಅವಕಾಶ ನೀಡಿ ಎಂದು ಕೇಳಲು ಬಂದಿದ್ದೇನೆ ಎಂದು ತಮ್ಮನ್ನು ಮತ್ತೊಮ್ಮೆ ಅಧಿಕಾರದ ಗದ್ದುಗೆಗೇರಿಸುವಂತೆ ಕೇಳಿಕೊಂಡರು.

ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುತ್ತಿರುವ ಇಸ್ರೇಲ್​ನಲ್ಲಿ ರೈತರು ನೀರನ್ನು ಹಣ ಕೊಟ್ಟು ಖರೀದಿಸುತ್ತಿದ್ದಾರೆ. ಆದರೂ ಅವರು ಕೃಷಿಯಿಂದ ಅಧಿಕ ಲಾಭ ಪಡೆಯುತ್ತಿದ್ದಾರೆ. ನಮ್ಮ ದೇಶದಲ್ಲಿ ಇವೆಲ್ಲಾ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುಂಚೆ ಎರಡು ಕೋಟಿ ಯುವಕರಿಗೆ ಉದ್ಯೋಗ ಕೊಡುವುದಾಗಿ ಹೇಳಿದ್ದರು. ಆದರೆ, ಈಗ, ಪಕೋಡ ಮಾರಿ ಜೀವನ ಮಾಡಿ ಎನ್ನುತ್ತಿದ್ದಾರೆ. ಅಧಿಕಾರದಲ್ಲಿರುವವರಿಗೆ ಹೃದಯ ಹಾಗೂ ಮಾನವೀಯತೆ ಇರಬೇಕು ಎಂದರು.

ಅನ್ನದೊಂದಿಗೆ ಮಣ್ಣು ತಿನ್ನುತ್ತಿದ್ದಾರೆ
ಇಲ್ಲಿನ ಮಣ್ಣು ಅಗೆದು ಕೆಲವರು ಮಾತ್ರ ಶ್ರೀಮಂತರಾದರು. ಆದರೆ, ಗಣಿಗಾರಿಕೆ ಧೂಳಿನಿಂದ ಇಲ್ಲಿನ ಜನ ಅನ್ನದೊಂದಿಗೆ ಮಣ್ಣು ತಿನ್ನುವಂತಾಗಿದೆ. ಗಣಿ ಪರಿಣಾಮದಿಂದ ಈ ಭಾಗದ ಜನರ ಆರೋಗ್ಯ ಇನ್ನೂ ಸುಧಾರಿಸಿದೆಯೋ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ನೀರಿಗೂ ಅನನುಕೂಲವಿದ್ದು, ಮಳೆ ಬಂದರೆ ಮಾತ್ರ ಇಲ್ಲಿನ ಜನರ ಬದುಕು ನಡೆಯುವಂತಾಗಿದೆ. ಹಾಗಾಗಿ ಜನರ ಅನುಕೂಲಕ್ಕಾಗಿ ಇಲ್ಲಿ ಕೆರೆಗಳನ್ನು ತುಂಬಿಸುವ ಕೆಲಸಗಳಾಗಬೇಕಿದೆ ಎಂದರು.

Comments are closed.