ಬಾಗಲಕೋಟೆ: ಅದು 1978ರ ಅವಧಿ. ದೇಶದಲ್ಲಿ ಕಾಂಗ್ರೆಸ್ ಇಬ್ಭಾಗವಾಗಿತ್ತು. ಅಲ್ಲಿಯವರೆಗೆ ಐಎನ್‌ಸಿ ಇದ್ದ ಪಕ್ಷ, ಅಲ್ಲಿಂದ ಐಎನ್‌ಸಿ(ಐ) ಆಗಿತ್ತು. ಆಗ ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಬಾಗಲಕೋಟೆಗೆ ಇಂದಿರಾ ಗಾಂಧಿ ಬಂದಿದ್ದರು. ಬಾಗಲಕೋಟೆಯಲ್ಲಿ ಸಾರ್ವ ಜನಿಕ ಸಭೆ ನಡೆಸಲು ಸ್ಥಳಾವಕಾಶವೇ ಸಿಕ್ಕಿರಲಿಲ್ಲ. ಎಲ್ಲಿ ಬಹಿರಂಗ ಸಭೆ ಮಾಡೋದು ಎಂಬ ಗೊಂದಲದಲ್ಲಿ ಎಲ್ಲರೂ ಇದ್ದರು.
ಆಗ ಇಂದಿರಾ ಅವರನ್ನು ಕರೆದು ಬೃಹತ್ ಸಭೆ ನಡೆಸಲು ಬೆಂಗಾವಲಾಗಿ ನಿಂತವರು ಇಲ್ಲಿನ ಹರಣಶಿಕಾರಿ ಕಾಲೋನಿ ಜನರು. ಆ ಕಾಲೋನಿಗೆ ಇದೇ ಫೆ.25ರಂದು ಇಂದಿರಾ ಗಾಂಧಿ ಮೊಮ್ಮಗ ರಾಹುಲ್ ಗಾಂಧಿ ಭೇಟಿ ನೀಡುತ್ತಿದ್ದಾರೆ! ಇಂದಿರಾ ಗಾಂಧಿ ಬಾಗಲಕೋಟೆಗೆ ಒಟ್ಟು 3 ಬಾರಿ ಬಂದಿದ್ದಾರೆ. 1960 ಮತ್ತು 1962ರಲ್ಲಿ ನೆಹರು ಅವ ರೊಂದಿಗೆ ಬಂದಿದ್ದರು. ಆಗ ಇಲ್ಲಿನ ಬಸವೇಶ್ವರ ಕಾಲೇಜು ಆವರಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದರು.
1977ರಲ್ಲಿ ಕಾಂಗ್ರೆಸ್ (ಐ) ಪಕ್ಷ ರಚಿಸಿ, ಪ್ರಚಾರಕ್ಕೆ ಬಂದಿದ್ದ ಇಂದಿರಾ ಗಾಂಧಿ ಅವರಿಗೆ ಬಾಗಲಕೋಟೆಯಲ್ಲಿ ಸಮಾವೇಶ ನಡೆಸಲು ಯಾರೂ ಸ್ಥಳ ಕೊಟ್ಟಿರಲಿಲ್ಲ. ಆ ವೇಳೆಯಲ್ಲಿ ಇಂದಿರಾ ಅವರಿಗೆ, ಸಣ್ಣ ವೇದಿಕೆ ನಿರ್ಮಿಸಿ, ದೊಡ್ಡ ಪ್ರಮಾಣದಲ್ಲಿ ಜನ ಕೂಡಿಸಿದ್ದು ಹರಿಣ ಶಿಕಾರಿ ಕಾಲೋನಿ ಜನ. ಆಗ ಇಡೀ ಕಾರ್ಯಕ್ರಮ ಯಶಸ್ವಿಗೊಳಿಸಲು ಬಾಗಲಕೋಟೆ ಯ ದಿವಂಗತ ರಹೆಮತ್‌ಬಿ ಜಮಖಂಡಿ ಹಾಗೂ ಶಿವಾಜಿ ಯಂಗಪ್ಪ ಚವ್ಹಾಣ ಓಡಾಡಿದ್ದರು.
ಅಂದು ಇಂದಿರಾ ಗಾಂಧಿಗೆ ನೆಲದ ಜತೆಗೆ ಪಕ್ಷಕ್ಕೆ ಭದ್ರ ನೆಲೆ ನೀಡಿದ ನೆಲದಲ್ಲಿ ಕಾಲೋನಿಗೆ ಇಂದಿಗೂ ಇಂದಿರಾ ಗಾಂಧಿ ಕಾಲೋನಿ ಎಂದೇ ಕರೆಯುತ್ತಾರೆ. ಇನ್ನೊಂದು ವಿಶೇಷ ಅಂದ್ರೆ, ಈ ಕಾಲೋನಿ ವ್ಯಾಪ್ತಿಯ ನಗರಸಭೆ ವಾರ್ಡಿಗೆ ಚುನಾವಣೆ ನಡೆಯುವುದಿಲ್ಲ. ಪ್ರತಿ ವರ್ಷ ನಗರ ಸಭೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡುತ್ತ (40 ವರ್ಷದಲ್ಲಿ ಎರಡು ಬಾರಿ ಮಾತ್ರ ಚುನಾವಣೆ ನಡೆದಿದೆ) ಬಂದಿದ್ದಾರೆ.
ಈಗ ರಾಹುಲ್ ಭೇಟಿ: ರಾಹುಲ್ ಅವರ ಅಜ್ಜಿಗೆ ನೆಲೆ ಕೊಟ್ಟ ಹರಣಶಿಕಾರಿ ಕಾಲೋನಿ ಬಳಿಯೇ ಸಕ್ರಿ ಕಾಲೇಜು ಮೈದಾನವೂ ಇದೆ. ಈ ಮೈದಾನದಲ್ಲಿ ಫೆ. 25ರಂದು ರಾಹುಲ್ ಗಾಂಧಿ, ಬಹಿರಂಗ ಸಭೆ ನಡೆಸುತ್ತಿದ್ದಾರೆ. ಶಿವಾಜಿ ಚವ್ಹಾಣ ಸಹಿತ ಹಲವು ಹಿರಿಯರು, ರಾಹುಲ್ ಅವರನ್ನು ಭೇಟಿ ಮಾಡಲು ತಯಾರಿ ನಡೆಸಿದ್ದಾರೆ.
ಹಳೆ ನೆನಪು: ಅಂದು ನಡೆದ ಪ್ರಸಂಗಗಳನ್ನು ಎಳೆ ಎಳೆಯಾಗಿ ಉದಯವಾಣಿ ಎದುರು ಬಿಚ್ಚಿಟ್ಟಿ ದ್ದಾರೆ ಶಿವಾಜಿ ಚವ್ಹಾಣ. 1978ರಲ್ಲಿ ರಾಜ್ಯ ವಿಧಾನ ಸಭೆ ಚುನಾವಣೆ ನಡೆದಿತ್ತು. ಬಾಗಲ ಕೋಟೆ ಕ್ಷೇತ್ರದ ಕಾಂಗ್ರೆಸ್ (ಐ) ಪಕ್ಷದಿಂದ ಪರಪ್ಪ ಕಳ್ಳಿಗುಡ್ಡ ಸ್ಪರ್ಧೆ ಮಾಡಿದ್ದರು. ಸಂಜೆ ಬಂದ ಇಂದಿರಾ ಅವರಿಗೆ ಸಭೆ ನಡೆಸಲು ಸ್ಥಳ ಸಿಗಲಿಲ್ಲ. ಎಸ್.ಆರ್. ಕಂಠಿ, ಪರಪ್ಪ ಕಳ್ಳಿಗುಡ್ಡ, ಡಾ.ಸಾಲಾರ್ ಎಲ್ಲಿ ಸಭೆ ಮಾಡೋದು ಎಂಬ ಚಿಂತೆಯಲ್ಲಿದ್ದರು. ದಿ.ರಹೆಮತ್‌ಬಿ ಜಮಖಂಡಿ, ನನಗೆ ಅತ್ಯಂತ ಆತ್ಮೀಯರಾಗಿದ್ದರು.
ನಾನು, ನಮ್ಮ ಏರಿಯಾದಲ್ಲಿ ಸಭೆ ಮಾಡಿ ಎಂದು ಕೇಳಿಕೊಂಡೆ. ಈಗಿರುವ ಸರ್ಕಾರಿ ಪ್ರಾಥಮಿಕ ಶಾಲೆ ನಂ.3ರ ಎದುರು (ವಾಸವಿ-ಶಕ್ತಿ ಚಿತ್ರ ಮಂದಿರ ಇರುವ ಜಾಗ) ಸಣ್ಣ ಪೆಂಡಾಲ್ ಹಾಕಿ ದ್ದೆವು. ಆ ವೇದಿಕೆಗೆ ಬಂದು ಇಂದಿರಾ ಗಾಂಧಿ ಭಾಷಣ ಮಾಡಿದರು. ಹರಣಶಿಕಾರಿ ಕಾಲೋನಿ ಜನರನ್ನು ಸ್ಮರಿಸಿದರು. ನಾನು ಇಂತಹ ಬಡ ಜನರನ್ನು ಮೇಲೆತ್ತುವ ಕೆಲಸ ಮಾಡುತ್ತೇನೆ. ಇಂದಿನಿಂದಲೇ ದೇಶದಲ್ಲಿ ಕಾಂಗ್ರೆಸ್ (ಐ) ಪಕ್ಷ ಅಧಿಕಾರಕ್ಕೆ ಬಂತು ಎಂದು ತಿಳಿದುಕೊಳ್ಳಿ.
ಅಧಿಕಾರಕ್ಕೆ ಬಂದ ಕೂಡಲೇ ಮೊದಲು, ನಿಮಗೆಲ್ಲ ಆಶ್ರಯ ಒದಗಿಸುತ್ತೇನೆ ಎಂದು ಭಾಷಣ ಮಾಡಿ ದ್ದರು. ಆ ಚುನಾವಣೆಯಲ್ಲಿ ಪರಪ್ಪ ಕಳ್ಳಿಗುಡ್ಡ ಅವರು ಬಾಗಲಕೋಟೆ ಕ್ಷೇತ್ರದಿಂದ ಗೆದ್ದರು. 1972ರ ಚುನಾವಣೆ ವರೆಗೂ ಕಾಂಗ್ರೆಸ್‌ನ ಚಿನ್ಹೆ ಆಕಳು ಮತ್ತು ಕರು ಇತ್ತು. 1978ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ ಕೈ ಚಿನ್ಹೆ ಬಂತು. 1984ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯಾದಾಗ ಬಾಗಲಕೋಟೆಯಿಂದ ನಾನೊಬ್ಬ ಮಾತ್ರ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತೆರಳಿದ್ದೆ ಎಂದು ನೆನಪಿಗೆ ಜಾರಿಗೊಂಡರು ಶಿವಾಜಿ.
* ಶ್ರೀಶೈಲ ಕೆ. ಬಿರಾದಾರ
-ಉದಯವಾಣಿ