ರಾಷ್ಟ್ರೀಯ

ಮಕ್ಕಳನ್ನು ಹಡೆಯುತ್ತಲೇ ಇರು ಎಂದು ಮಡದಿಗೆ ಸೂಚಿಸಿದ್ದೇನೆ: ಬಿಜೆಪಿ ಶಾಸಕ

Pinterest LinkedIn Tumblr


ಮುಜಾಫರ್‌ ನಗರ್ (ಉ.ಪ್ರ): ‘ಜನಸಂಖ್ಯಾ ನಿಯಂತ್ರಣಕ್ಕೆ ಸರಕಾರ ಕಾನೂನು ರೂಪಿಸುವವರೆಗೂ ನೀನು ಮಕ್ಕಳನ್ನು ಹಡೆಯುವುದನ್ನು ನಿಲ್ಲಿಸಬೇಡ, ಎಂದು ಪತ್ನಿಗೆ ಹೇಳಿದ್ದೇನೆ’, ಎನ್ನುವುದರ ಮೂಲಕ ಖತೌಲಿಯ ಬಿಜೆಪಿ ಶಾಸಕ ವಿಕ್ರಮ್ ಸೈನಿ ಶುಕ್ರವಾರ ಹೊಸ ವಿವಾದ ಸೃಷ್ಟಿಸಿದ್ದಾರೆ.

ಮುಜಾಫರ್ ನಗರದಲ್ಲಿ ಸಾರ್ವಜನಿಕ ಸಭೆಯನೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ನಮಗಿಬ್ಬರೇ ಮಕ್ಕಳು ಸಾಕು ಎನ್ನುತ್ತಾಳೆ ನನ್ನ ಪತ್ನಿ. ಆದರೆ ಜನಸಂಖ್ಯಾ ನಿಯಂತ್ರಣ ಕಾನೂನು ಅಸ್ತಿತ್ವಕ್ಕೆ ಬರುವವರೆಗೂ ಮಕ್ಕಳನ್ನು ಹಡೆಯುತ್ತಾ ಇರಲು ಹೇಳಿದ್ದೇನೆ ಎಂದರು.

ಸೈನಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕ್ರಿಶ್ಚಿಯನ್ನರನ್ನು ಸಂಬೋಧಿಸಿ ವಾಗ್ದಾಳಿ ನಡೆಸಿದ್ದ ಅವರು, ಹೊಸವರ್ಷಾಚರಣೆ ಕ್ರೈಸ್ತರ ಹಬ್ಬ, ಈ ಆಚರಣೆಯಿಂದ ಹಿಂದೂಗಳು ದೂರವಿರಿ ಎಂದು ಮನವಿ ಮಾಡಿದ್ದರು.

ಜನಸಂಖ್ಯಾ ನಿಯಂತ್ರಣ ವಿಷಯದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದ ಸೈನಿ, ನಾವು ಇಬ್ಬರು- ಮಕ್ಕಳು ನಿಯಮವನ್ನು ಒಪ್ಪಿಕೊಂಡಿದ್ದೇವೆ. ಆದರೆ ಇತರರು ಅದನ್ನು ಒಪ್ಪಿಕೊಂಡಿಲ್ಲ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಹಿಂದೂಗಳು ಮಕ್ಕಳಿಗೆ ಜನ್ಮ ನೀಡುವುದನ್ನು ನಿಲ್ಲಿಸಬಾರದು. ನಮಗೆ ಇಬ್ಬರು ಮಕ್ಕಳಾದ ಬಳಿಕ, ಸಾಕು ಅಂದಿದ್ದಳು ನನ್ನ ಮಡದಿ, ಆದರೆ ನಾನು ಹೇಳಿದೆ ನಾವು 4-5 ಮಕ್ಕಳನ್ನು ಪಡೆಯೋಣ ಎಂದರು.

ಕಳೆದ ವರ್ಷ ಜನವರಿಯಲ್ಲಿ, ಹಿಂದೂಸ್ತಾನ ಹಿಂದೂಗಳದ್ದು, ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ಮುಸ್ಲಿಮರಿಗೆ ಕರೆ ನೀಡಿದ್ದ ಅವರು ಪ್ರೇಮಿಗಳ ದಿನ ಕ್ರೈಸ್ತರದ್ದು , ಹಿಂದೂಗಳು ಆಚರಿಸಬೇಡಿ ಎಂದು ಸಹ ಕರೆ ನೀಡಿದ್ದರು.

Comments are closed.