ಹಾವೇರಿ: ದಲಿತರ ಅಭಿವೃದ್ಧಿಗೆ ಮೀಸಲಿಟ್ಟ 929 ಕೋಟಿ ಹಣವನ್ನು ಸಿಎಂ ಸಿದ್ದರಾಮಯ್ಯ ರೈತರ ಸಾಲಮನ್ನಾಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಸಾಲ ಮನ್ನಾಕ್ಕೆ ಬೇರೆ ಇಲಾಖೆಯ ಹಣ ಬಳಕೆ ಮಾಡಿಕೊಳ್ಳಬಹುದಿತ್ತು. ಲಜ್ಜೆಗೆಟ್ಟ ಮುಖ್ಯಮಂತ್ರಿ ಮನಬಂದಂತೆ ಮಾಡುತ್ತಿದ್ದಾರೆ. ದಲಿತರ ಕಲ್ಯಾಣಕ್ಕಾಗಿ ಇಟ್ಟ ಹಣವನ್ನು ಮರಳಿ ದಲಿತರ ಕಲ್ಯಾಣಕ್ಕಾಗಿಯೇ ನೀಡಬೇಕು. ರಾಜ್ಯಾದ್ಯಂತ ಹೋರಾಟ ಪ್ರಾರಂಭಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ಗುರುವಾರ ಆಯೋಜಿಸಿದ್ದ ಬಿಜೆಪಿ ಪರಿಶಿಷ್ಟ ಸಮುದಾಯಗಳ ಕಿತ್ತೂರು ವಿಭಾಗ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ಸಿಎಂ ಸಿದ್ದರಾಮಯ್ಯನವರು ರೈತರ ಸಾಲ ಮನ್ನಾಕ್ಕಾಗಿ ದಲಿತರಿಗೆ ಮೀಸಲಿದ್ದ 929 ಕೋಟಿ ಹಣವನ್ನು ಬಳಕೆ ಮಾಡಲು ಮುಂದಾಗಿದ್ದು ತಪ್ಪು. ಸಿದ್ದರಾಮ್ಯನವರಿಗೆ ಮಾನ ಮರ್ಯಾದೆ ಇದ್ದರೆ ದಲಿತರ ಜೇಬಿಗೆ ಕೈಹಾಕುತ್ತಿರಲಿಲ್ಲ. ಸಾಲಮನ್ನಾಕ್ಕೆ ಹಣ ಬೇಕಿದ್ದರೆ ಬೇರೆ ಇಲಾಖೆ ಇರಲಿಲ್ಲವೇ? ಎಲ್ಲ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನದ ಪೈಕಿ ಶೇ.50ಕ್ಕಿಂತ ಹೆಚ್ಚು ಅನುದಾನ ಖರ್ಚಾಗದೇ ಉಳಿದಿದೆ ಎಂದರು.