ಶಿಕಾರಿಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಶಿಕಾರಿಪುರಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ಅವರ ನಿವಾಸ ಮಂಗಳವಾರ ವಿಧಾನಸಭಾ ಟಿಕೆಟ್ ಆಕಾಂಕ್ಷಿಗಳಿಂದ ತುಂಬಿಹೋಗಿತ್ತು.
ಬ್ಯಾಡಗಿಯಿಂದ ಬೆಂಬಲಿಗರ ಜತೆ ವಿರೂಪಾಕ್ಷಪ್ಪ ಆಗಮಿಸಿದ್ದರು. ಇನ್ನು ಸಾಗರದಿಂದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಮತ್ತೊಂದೆಡೆ ಮಾಜಿ ಸಚಿವ ಹರತಾಳು ಹಾಲಪ್ಪ ತಮ್ಮ ಬೆಂಬಲಿಗರ ಜತೆ ಆಗಮಿಸಿದ್ದರು. ಬಳಿಕ ಅನೌಪಚಾರಿಕವಾಗಿ ಮಾತನಾಡಿದ ಯಡಿಯೂರಪ್ಪ, ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ನಮಗೆ ವ್ಯಕ್ತಿಗಿಂತ ಪಕ್ಷ ಮುಖ್ಯ. ರಾಷ್ಟ್ರೀಯ ನಾಯಕರ ಅಣತಿಯಂತೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಶ್ರಮ ಹಾಕೋಣ. ಎಲ್ಲರ ಅಹವಾಲುಗಳನ್ನು ವರಿಷ್ಠರ ಗಮನಕ್ಕೆ ತರುತ್ತೇನೆ. ನಿರ್ಧಾರ ಅವರದ್ದು. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೆಲಸ ಮಾಡೋಣ ಎಂದು ಸಲಹೆ ನೀಡಿದರು.