ಮನೋರಂಜನೆ

ನಿಜವಾದ ಪ್ರೀತಿಯಲ್ಲಿ ನನಗೆ ನಂಬಿಕೆ ಇದೆ: ಪ್ರಿಯಾ ಪ್ರಕಾಶ್ ವಾರಿಯರ್

Pinterest LinkedIn Tumblr

*ಅಂಜನಾ ಜಾರ್ಜ್

‘ದಿನ ಬೆಳಗಾಗುವುದರೊಳಗೆ ಸಿಕ್ಕಂತಹ ಈ ಸ್ಟಾರ್‌ಡಂನಿಂದ ಗೊಂದಲಕ್ಕೊಳಗಾಗಿದ್ದೇನೆ. ಇದನ್ನು ಹೇಗೆ ಸಂಭಾಳಿಸುವುದು ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಮಾತು ಆರಂಭಿಸಿದರು ಮಲಯಾಳಂ ತಾರೆ ಪ್ರಿಯಾ ಪ್ರಕಾಶ್ ವಾರಿಯರ್. ಮಲಯಾಳಂನ ‘ಒರು ಅಡರ್ ಲವ್’ ಚಿತ್ರದ ವೀಡಿಯೋ ಹಾಡು ಅಂತರ್ಜಾಲದಲ್ಲಿ ಹೊಸ ದಾಖಲೆ ಸೃಷ್ಟಿಸಿರುವ ಬಗ್ಗೆ ಅವರು ಮಾತನಾಡುತ್ತಾ, ತಮಗೆ ಆಗುತ್ತಿರುವ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ ಎಂದಿದ್ದಾರೆ. ಕಳೆದ 48 ಗಂಟೆಗಳಿಂದ ಅವರ ಫೋನ್ ನಿರಂತರ ಮೊಳಗುತ್ತಲೇ ಇದೆಯಂತೆ.

ಓಮರ್ ಲೂಲು ಆಕ್ಷನ್ ಕಟ್ ಹೇಳಿರುವ ‘ಒರು ಅಡಾರ್ ಲವ್’ ಚಿತ್ರದಲ್ಲಿ ಉದಯೋನ್ಮುಖ ತಾರೆ ಪ್ರಿಯಾ ಪ್ರಕಾಶ್‍ಗೆ ಸಣ್ಣ ಪಾತ್ರ ನೀಡಿದ್ದಾರೆ. ಆದರೆ ಅದೇ ಪಾತ್ರ ಈಗ ಇಷ್ಟೆಲ್ಲಾ ಸದ್ದು ಮಾಡುತ್ತದೆಂದು ಯಾರೂ ಊಹಿಸಿರಲಿಲ್ಲ. ಈ ಹಾಡಿನ ಚಿತ್ರೀಕರಣ ಬಗ್ಗೆ ಪ್ರಿಯಾ ಮಾತನಾಡುತ್ತಾ, ‘ಈ ಹಾಡನ್ನು ಜನವರಿಯಲ್ಲಿ ಚಿತ್ರೀಕರಿಸಲಾಯಿತು. ಈ ಹಾಡಿಗೆ ಇನ್ನೂ ಸ್ವಲ್ಪ ಏನೋ ಸೇರಿಸಬೇಕು ಎಂದು ಶೂಟಿಂಗ್‌ ಸ್ಪಾಟ್‍ನಲ್ಲಿ ಓಮರ್ ಅಣ್ಣ ನನ್ನನ್ನು ಕೇಳಿದರು. ಈ ರೀತಿ ಆಗಬಹುದಾ ಎಂದು ಮಾಡಿ ತೋರಿಸಿದೆ. ಓಕೆ ಎಂದು ಹೇಳಿ ಅದನ್ನೇ ಸೆರೆಹಿಡಿದರು. ಪ್ರತಿಯೊಬ್ಬರಿಗೂ ಈ ಲವ್ ಸೀನ್ ಇಷ್ಟವಾಯಿತು. ನನಗೇ ಲೀಡ್ ರೋಲ್ ಕೊಡಲು ನಿರ್ಧರಿಸಿದರು. ಇದು ನನಗೆ ಒಲಿದ ಅದೃಷ್ಟ. ರಿಲೀಸ್ ಆದ ಮೇಲೆ ಹಾಡು ಇಷ್ಟೆಲ್ಲಾ ಸದ್ದು ಮಾಡುತ್ತದೆಂದು ನಾನು ಕನಸು ಮನಸಿನಲ್ಲೂ ಊಹಿಸಿರಲಿಲ್ಲ’ ಎಂದಿದ್ದಾರೆ ಪ್ರಿಯಾ ಪ್ರಕಾಶ್.

ತ್ರಿಶೂರ್‌ನ ವಿಮಲಾ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಕಾಂ ಓದುತ್ತಿರುವ ಪ್ರಿಯಾ ಪ್ರಕಾಶ್ ವಾರಿಯರ್ ಸದ್ಯಕ್ಕೆ ತಮಗೆ ಸಿಕ್ಕಿರುವ ಜನಪ್ರಿಯತೆಯ ಪ್ರತಿ ಕ್ಷಣವನ್ನೂ ಆಸ್ವಾದಿಸುತ್ತಿದ್ದಾರೆ. ‘ನಿನ್ನೆಯಷ್ಟೇ ಕಾಲೇಜಿಗೆ ಹೋಗಿದ್ದೆ. ಉಪಾಧ್ಯಾಯರು ಮತ್ತು ಗೆಳೆಯರು ಎಲ್ಲರೂ ನನಗಿಂತ ಜಾಸ್ತಿ ಅವರೇ ಎಗ್ಜೈಟ್ ಆಗಿದ್ದರು. ನನ್ನ ಬಗ್ಗೆ ಅವರಿಗೆ ತುಂಬಾ ಹೆಮ್ಮೆ ಅನ್ನಿಸಿದೆಯಂತೆ. ನನ್ನ ಕುಟುಂಬದ ಬಗ್ಗೆಯೂ ಅಷ್ಟೇ.’ ಎಂದಿದ್ದಾರೆ.

ಓದಿನ ಜತೆಗೆ ಸಿನಿಮಾಗಳ ಕಡೆಗೆ ಹೆಚ್ಚಿನ ಗಮನ ಹರಿಸಿರುವ ಪ್ರಿಯಾ ಪ್ರಕಾಶ್, ಡಾನ್ಸ್ ಮತ್ತು ಸಂಗೀತ ತರಗತಿಗಳನ್ನು ಮಿಸ್ ಮಾಡಿಕೊಳ್ಳಲ್ಲ ಎಂದಿದ್ದಾರೆ. ಪ್ರೀತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದರೆ, ‘ಇಂದಿನ ಆಧುನಿಕ ಜಗತ್ತಿನಲ್ಲೂ ಪ್ರೀತಿ ಎಂದರೆ ಮೋಡಿ ಮಾಡುವ ಸಂಮ್ಮೋಹಕ ಶಕ್ತಿ ಇದ್ದಂತೆ. ಸಿನಿಮಾದ ಆ ದೃಶ್ಯದಲ್ಲಿ ಶಾಲೆಯಲ್ಲಿನ ಕ್ರಷ್ ತೋರಿಸಿದ್ದೇವೆ. ನನಗಸಿಸುವಂತೆ ಇದು ತುಂಬಾ ಮೋಹಕವಾದ ಪ್ರೀತಿಯ ಒಂದು ರೂಪ. ಕಣ್ಣುಕಣ್ಣು ಬೆರೆಯುವ ಮತ್ತು ಆ ನಾಚಿಕೆ ನಿಜವಾಗಿಯೂ ಮಧುರಾನುಭವ’ ಎಂದು ಪ್ರೀತಿಯ ಬಗ್ಗೆ ತಮ್ಮ ಮನದಾಳ ಮಾತು ಬಿಚ್ಚಿಟ್ಟರು.

ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಪ್ರಿಯಾ ಪ್ರತಿಯೊಬ್ಬರಿಗೂ ಪ್ರೇಮದ ಶುಭಾಶಯ ತಿಳಿಸಿದ್ದು. ‘ನನಗೆ ನಿಜವಾದ ಪ್ರೀತಿಯಲ್ಲಿ ನಂಬಿಕೆ ಇದೆ. ಆದರೂ ಈ ಪ್ರೀತಿ ಅವರದೇ ಹಾದಿಯಲ್ಲಿ ಪ್ರತಿ ತಲೆಮಾರಿನಲ್ಲೂ ಹಾಸುಹೊಕ್ಕಾಗಿರುತ್ತದೆ. ತಂತ್ರಜ್ಞಾನವಾಗಲಿ, ಆಧುನಿಕತೆಯಾಗಲಿ ಪ್ರೀತಿಯ ಬೆಳಕನ್ನು ನಂದಿಸಲು ಸಾಧ್ಯವಿಲ್ಲ’ ಎಂಬುದು ಪ್ರೀತಿಯ ಬಗೆಗಿನ ಅವರ ಒಕ್ಕಣೆ.

Comments are closed.