UAE

ದುಬೈನಲ್ಲಿ ಅದ್ದೂರಿಯಾಗಿ ಜರುಗಿದ ವಿಶ್ವ ಪಟ್ಲ ಸಂಭ್ರಮ : ಯಕ್ಷ ರಕ್ಷಶ್ರೀ ಮತ್ತು ವಿಶ್ವ ಕಲಾ ಪೋಷಕ ಪ್ರಶಸ್ತಿ ಪ್ರದಾನ

Pinterest LinkedIn Tumblr

ದುಬೈ: ಒಂದು ಕಾಲದಲ್ಲಿ ಆರ್ಥಿಕವಾಗಿ ಬಡತನದ ಬೇಗೆಯಲ್ಲಿ ಬಳಲುತ್ತಿದ್ದ ಯಕ್ಷಗಾನ‌ ಕಲಾವಿದರಿಗೆ ಆಸರೆಯ ದ್ಯೋತಕವಾಗಿ ಯಕ್ಷಧ್ರುವ ಪಟ್ಲ ಪೌಂಡೇಶನ್ ಮೂಲಭೂತ ಸಹಕಾರಗಳನ್ನು ನೀಡುತ್ತಾ ಜನ ಮಾನಸದಲ್ಲಿ ನೆಲೆಗೊಳ್ಳುತ್ತಿರುವ ನಡುವೆ ಈ ಪ್ರೋತ್ಸಾಹಕ ಸಂಘಟನೆಗೆ ಪೋಷಕವಾಗಿ ಹಲವಾರು ದಾನಿಗಳು ತಮ್ಮ ಕೈಲಾದ ಕೊಡುಗೆ ನೀಡುತ್ತಾ ಯಕ್ಷ ಕಲೆಯನ್ನು ಶ್ರೀಮಂತಗೊಳಿಸುತ್ತಿರುವುದು ವರ್ತಮಾನದಲ್ಲಿ ಕಾಣಬಹುದಾಗಿದೆ.
ಇದಕ್ಕೊಂದು ಸ್ಪಷ್ಟ ನಿದರ್ಶನ ಎಂಬಂತೆ ಪ್ರ ಪ್ರಥಮ ಬಾರಿಗೆ ಗಲ್ಫ್ ರಾಷ್ಟ್ರದಲ್ಲಿ ನಡೆದ ವಿಶ್ವ ಪಟ್ಲ ಸಂಭ್ರಮವು ಸಾವಿರಾರು ಯಕ್ಷಾಭಿಮಾನಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ಜರುಗಿರುವುದಲ್ಲದೆ ವಿವಿದೆಡೆಯ ಗಣ್ಯರನ್ನು ವಿಶ್ವ ಮಟ್ಟದಲ್ಲಿ ಗುರುತಿಸಿ ಸಂಭ್ರಮಿಸಿರುವುದು ಈ ಬಾರಿ ದುಬೈಯಲ್ಲಿ ನಡೆದ ವಿಶ್ವ ಪಟ್ಲ ಸಂಭ್ರಮದ ಸವಿಶೇಷತೆಯಾಗಿದೆ.

 

ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಮತ್ತು ಪಟ್ಲ ಘಟಕ ದುಬೈಯ ಸಹಯೋಗದೊಂದಿಗೆ ಜೂನ್ 11ರಂದು ದುಬೈಯ ಇಂಡಿಯನ್ ಹೈಸ್ಕೂಲ್ ನ ಶೇಖ್ ರಷೀದ್ ಸಭಾಂಗಣದಲ್ಲಿ ಜರಗಿದ ದುಬೈ ಯಕ್ಷೋತ್ಸವ 2023 ಮತ್ತು ವಿಶ್ವ ಪಟ್ಲ ಸಂಭ್ರಮಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗಿರುವುದಲ್ಲದೆ ವಿವಿಧ ಕೊಡುಗೆ ನೀಡುವ ಜತೆಗೆ ಅವಿಸ್ಮರಣೀಯವಾಗಿ ಮೂಡಿ ಬಂದಿತ್ತು.ಮಧ್ಯಾಹ್ನ 2 ಗಂಟೆಯ ಬಳಿಕ‌ ಪುತ್ತಿಗೆ ವೆಂಕಟೇಶ ಶಾಸ್ತ್ರೀಯವರ ಪೌರೋಹಿತ್ಯದಲ್ಲಿ ರಂಗಸ್ಥಳ ಪೂಜೆ ಹಾಗು ಚೌಕಿ ಪೂಜೆಯೊಂದಿಗೆ ಯಕ್ಷಗಾನದ ಪೂರ್ವರಂಗ ಆರಂಭಗೊಂಡು ನಂತರ ಗಣ್ಯಾತಿ ಗಣ್ಯರಿಂದ ವಿಶ್ವ ಪಟ್ಲ ಸಂಭ್ರಮದ ದೀಪ ಬೆಳಗಿಸುವ ಮೂಲಕ ಸಂಪ್ರದಾಯಿಕವಾಗಿ ಉದ್ಘಾಟನೆಗೊಂಡಿತು.

ಯಕ್ಷ ಸಂಘಟಕ ದಿನೇಶ್ ಶೆಟ್ಟಿ ಕೊಟ್ಟಿಂಜರವರ ಸಂಯೋಜನೆಯಲ್ಲಿ ‘ದಶಾವತಾರ’ ಯಕ್ಷಗಾನ ಪ್ರಸಂಗ ಆರಂಭಗೊಂಡಿತು. ಯಕ್ಷಗಾನದಲ್ಲಿ ಊರಿನ ಸುಪ್ರಸಿದ್ಧ ಹಿಮ್ಮೇಳ ಕಲಾವಿದರು ಹಾಗೂ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಆರು ವಯಸ್ಸಿನ ಬಾಲ ಕಲಾವಿದರಿಂದ ಅರುವತ್ತು ವರ್ಷದ ಕಲಾವಿದರು ಅಮೋಘವಾದ ಅಭಿನಯದಲ್ಲಿ ಸೇರಿದ ಕಲಾಭಿಮಾನಿಗಳಿಗೆ ರಸದೌತಣ ನೀಡಿದರು. ವನ್ನು ಶೇಖರ್ ಡಿ.ಶೆಟ್ಟಿಗಾರ್ ಮತ್ತು ಶರತ್ ಕುಡ್ಲರವರ ನಿರ್ದೇಶನ ಮಾಡಿದ್ದರು.

ಯಕ್ಷ ಕಲಾಶ್ರೀ ಪ್ರಶಸ್ತಿ ಪ್ರದಾನ:
ವಿಶ್ವ ಪಟ್ಲ ಸಂಭ್ರಮದ ಸಭಾ ಕಾರ್ಯಕ್ರಮದಲ್ಲಿ ದುಬೈ ಮತ್ತು ಯುಎಇಯಲ್ಲಿ ಕಲಾವಿದರನ್ನು ಗುರುತಿಸಿ ಕೊಡಮಾಡುವ “ಯಕ್ಷಶ್ರಿ ರಕ್ಷ” ಪ್ರಶಸ್ತಿಯನ್ನು ಕಲಾವಿದರಾದ ಪಟ್ಲಗುತ್ತು ಮಹಾಬಲ ಶೆಟ್ಟಿಯವರಿಗೆ ನೀಡಲಾಯಿತು. “ವಿಶ್ವ ಕಲಾಪೋಷಕ” ಪ್ರಶಸ್ತಿಯನ್ನು ಪಟ್ಲ ಪೌಂಡೇಷನ್ ನ ಕೇಂದ್ರೀಯ ಘಟಕದ ಗೌರವಾಧ್ಯಕ್ಷರಾದ ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಸಮರ್ಪಿಸಲಾಯಿತು.

ಶೈಲಜಾ ನಿತ್ಯಾನಂದ ಶೆಟ್ಟಿಯವರು ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದ ಮಹಾ ಪೋಷಕರಾದ ಉದ್ಯಮಿ ಹರೀಶ್ ಶೇರಿಗಾರ್ ದಂಪತಿಗಳನ್ನು ಮತ್ತು ಭೀಮ ಜ್ಯುವೇಲರ್ಸ್ ನ ಯು.ನಾಗರಾಜ ರಾವ್ ರವರಿಗೆ ಮಹಾ ಗೌರವದೊಂದಿಗೆ ಸನ್ಮಾನಿಸಲಾಯಿತು.

ಮಹಾ ಪೋಷಕರನ್ನು ಮತ್ತು ವಿವಿಧ ಘಟಕಗಳಿಂದ ಬಂದ ಪದಾಧಿಕಾರಿಗಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಪಟ್ಲ ಘಟಕದ ಯುಎಇಯ ಗೌರವಾಧ್ಯಕ್ಷರಾದ ಪುತ್ತಿಗೆ ವಾಸುದೇವ ಭಟ್,ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಸುಜಾತ ಶೆಟ್ಟಿ, ರಮಾನಂದ ಶೆಟ್ಟಿ, ಸಂದೀಪ್ ರೈ ನಂಜೆ,ದಿವಾಕರ ಶೆಟ್ಟಿ, ಪ್ರದೀಪ್ ಶೆಟ್ಟಿ,ಪಟ್ಲ ಸತೀಶ್ ಶೆಟ್ಟಿ, ಕೇಂದ್ರೀಯ ಘಟಕದ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಮಂಗಳೂರಿನ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಕೇಂದ್ರೀಯ ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ರಾಮಚಂದ್ರ ಆಳ್ವ, ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಘಟಕದ ಟ್ರಸ್ಟಿಗಳಾದ ರಮಾನಂದ ಶೆಟ್ಟಿ ಓಮಾನ್, ನಿತ್ಯಾನಂದ ಶೆಟ್ಟಿ, ಸುಧಾಕರ ಪೂಂಜ, ಜಯರಾಮ ರೈ ಮಿತ್ರಂಪಾಡಿ ಅಬುಧಾಬಿ, ಕೃಷ್ಣ ಶೆಟ್ಟಿ, ತಾರನಾಥ ಶೆಟ್ಟಿ, ಚಂದ್ರಹಾಸ ಶೆಟ್ಟಿ ರಂಗೋಲಿ, ಶ್ರೀಮತಿ ಅನಿತ ಪಿಂಟೊ,ನಾರಾಯಣ ಶೆಟ್ಟಿ ಸುರತ್ಕಲ್, ಲೀಲಾದರ ಶೆಟ್ಟಿ ಸುರತ್ಕಲ್, ಯಕ್ಷಗಾನ ಸಂಘಟಕ ಭುಜಬಲಿ‌ ಧರ್ಮಸ್ಥಳ ಉಪಸ್ಥಿತರಿದ್ದರು.

ಪಟ್ಲ ಪೌಂಡೇಶನ್ ದುಬೈ ಘಟಕದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಪ್ರಾಸ್ತವಿಕ ಮಾತುಗಳೊಂದಿಗೆ ಘಟಕದ ಕಾರ್ಯ ಚಟುವಟಿಕೆಗಳನ್ನು ವಿಶ್ಲೇಷಿಸುತ್ತಾ ದುಬೈ ಘಟಕ ಆರಂಭದಿಂದ ಇಂದಿನ ಕಾರ್ಯಕ್ರಮದ ವರೆಗೆ 93 ಲಕ್ಷ ರೂಪಾಯಿ ಮೊತ್ತವನ್ನು ಸಂಗ್ರಹಿಸಿದ್ದೇವೆ. ಮುಂದಿನ ವರ್ಷದ ಪಟ್ಲ ಸಂಭ್ರಮದ ಕಾರ್ಯಕ್ರಮದ ಮುಂಚೆ ದಾನಿಗಳಿಂದ ಸಂಗ್ರಹ ಮಾಡಿ ಒಂದು ಕೋಟಿ ರೂಪಾಯಿಯನ್ನು ಕೇಂದ್ರ ಘಟಕಕ್ಕೆ ಕೊಡುವ ಉದ್ದೇಶವಿದೆ. ಈ ಬಾರಿ ಇದಕ್ಕಾಗಿ ಯಕ್ಷ ಕಲಾ ಪೋಷಕರೋರ್ವರು ಯುಎಇ ಘಟಕದ ಮೂಲಕ 50ಲಕ್ಷ ರೂ.ವನ್ನು ದೇಣಿಗೆಯಾಗಿ ನೀಡಿರುವುದಲ್ಲದೆ ಹೆಸರನ್ನು ಬಹಿರಂಗಪಡಿಸದಂತೆ ಆಗ್ರಹಿಸಿದ್ದಾರೆ ಎಂದರು. ಕೇಂದ್ರ ಘಟಕದ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಮತ್ತು ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಕೊನೆಗೆ ಊರಿಂದ ಆಗಮಿಸಿದ ಹಿಮ್ಮೇಳ ಕಲಾವಿದರಾದ ರವಿಚಂದ್ರ ಕನ್ನಡಿಕಟ್ಟೆ,ಚೈತನ್ಯ ಪದ್ಯಾಣ,ಪದ್ಮನಾಭ ಉಪಾಧ್ಯಾಯ, ವಸ್ತ್ರಲಂಕಾರರಾದ ಗಂಗಾದರ ಶೆಟ್ಟಿಗಾರ್, ನವೀನ್ ಕುಂಪಲ, ಮನೋಜ್ ಕುಮಾರ್ ಮತ್ತು ಮಾಧ್ಯಮಗಾರರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)
ಚಿತ್ರ : ಅಶೋಕ್ ಬೆಳ್ಮಣ್

Comments are closed.