ಬೆಂಗಳೂರು: ನೃಪತುಂಗ ರಸ್ತೆ¤ಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯ 7ನೇ ಮಹಡಿಯಲ್ಲಿ ಕಳುವಾಗಿದ್ದ ಎಲ್‌ಸಿಡಿ ಟಿವಿ ಪ್ರಕರಣ ಪತ್ತೆಗೂ ಮುನ್ನವೇ ಇದೇ ಕಚೇರಿಯ ನಿಧಿ ಮತ್ತು ಪಿಂಚಣಿ ವಿಭಾಗದಲ್ಲಿ ಕಂಪ್ಯೂಟರ್ ಕಳವು ಮಾಡಲಾಗಿದೆ.
ಈ ಸಂಬಂಧ ನಿಧಿ ಮತ್ತು ಪಿಂಚಣಿ ವಿಭಾಗದಲ್ಲಿ ದಲಾಯತ್ (ಡಿ ಗ್ರೂಪ್ ನೌಕರ) ಆಗಿ ಕೆಲಸ ಮಾಡುವ ಶ್ರೀನಿವಾಸ್‌ನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದು, ಮೂರು ದಿನಗಳ ಕಾಲ ಪೊಲೀಸ್‌ರು ವಶಕ್ಕೆ ಪಡೆದಿದ್ದಾರೆ. ಫೆ.6ರಂದು ರಾತ್ರಿ 8 ಗಂಟೆ ಸುಮಾರಿಗೆ ಪ್ರಧಾನ ಕಚೇರಿಯ 4ನೇ ಮಹಡಿಯಲ್ಲಿರುವ ನಿಧಿ ಮತ್ತು ಪಿಂಚಣಿ ವಿಭಾಗದಲ್ಲಿ ಕಂಪ್ಯೂಟರ್, ಸಿಪಿಯು, ಮೌಸ್ ಮತ್ತು ಕೀ ಬೋರ್ಡ್ ಕಳುವಾಗಿತ್ತು.
ಈ ಸಂಬಂಧ ಡಿಜಿ ಕಚೇರಿಯ ಸಹಾಯಕ ಸಾರ್ವಜನಿಕ ಸಂಪರ್ಕಾಧಿಕಾರಿ ಜ.7ರಂದು ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಹಲಸೂರು ಗೇಟ್ ಪೊಲೀಸರು, ವಿಭಾಗದ ಮುಂಭಾಗ ಹಾಗೂ ಒಳಗಿರುವ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಶ್ರೀನಿವಾಸ್ ಕೃತ್ಯ ಸಗಿರುವುದು ಬಯಲಾಗಿದ್ದು, ಜ.8ರಂದು ಆರೋಪಿಯನ್ನು ಬಂಧಿಸಿದ್ದಾರೆ.
ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಕಚೇರಿಯ ಸಿಬ್ಬಂದಿ ರಾತ್ರಿ 8 ಗಂಟೆವರೆಗೂ ಕೆಲಸ ಮಾಡುತ್ತಿದ್ದಾರೆ. ಫೆ.6ರಂದು ಪಿಂಚಣಿ ವಿಭಾಗದ ಪ್ರಥಮ ದರ್ಜೆ ಸಹಾಯಕರಾದ ಎನ್.ಸಂಪಕ್ಕ ಮತ್ತು ಕನ್ನಮ್ಮ 7.30ರ ಸುಮಾರಿಗೆ ಮನೆಗೆ ಹೋಗುವಾಗ ಕಂಪ್ಯೂಟರ್ ಶಟ್‌ಡೌನ್ ಮಾಡಿ ಹೋಗಿದ್ದಾರೆ. ಮರು ದಿನ ಬೆಳಗ್ಗೆ ಕಚೇರಿಗೆ ಆಗಮಿಸಿದಾಗ ಕಂಪ್ಯೂಟರ್ ಹಾಗೂ ಇತರೆ ವಸ್ತುಗಳು ನಾಪತ್ತೆಯಾಗಿದ್ದವು. ಕೂಡಲೇ ಸಿಬ್ಬಂದಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು.
ಭದ್ರತೆ ಇದ್ದರೂ ಕಳವಾಗಿದ್ದು ಹೇಗೆ?: ಪೊಲೀಸ್ ಪ್ರಧಾನ ಕಚೇರಿಗೆ ಮುಖ್ಯದ್ವಾರ ಹಾಗೂ ನೆಲಮಹಡಿ ಮೂಲಕ ಪ್ರವೇಶಿಸಬೇಕು. ಯಾವುದೇ ತಪಾಸಣೆ ಇಲ್ಲದೇ ಮುಖ್ಯದ್ವಾರದಲ್ಲಿ ಹಿರಿಯ ಅಧಿಕಾರಿಗಳು, ಗಣ್ಯರು ಪ್ರವೇಶಿಸುತ್ತಾರೆ. ನೆಲಮಹಡಿಯಲ್ಲಿ ಎರಡು ದ್ವಾರಗಳಿದ್ದು, ಮೆಟಲ್ ಡಿಟೆಕ್ಟರ್‌ನೊಂದಿಗೆ ಭದ್ರತಾ ಸಿಬ್ಬಂದಿ ಸದಾ ಕಾಲ ಕಾವಲಿರುತ್ತಾರೆ.
ಬ್ಯಾಗ್, ಬಾಕ್ಸ್ ಇತರೆ ವಸ್ತುಗಳನ್ನು ಸ್ಕ್ಯಾನಿಂಗ್ ಯಂತ್ರದಲ್ಲಿ ಪರಿಶೀಲಿಸಲಾಗುತ್ತದೆ. ಹೀಗಿದ್ದರೂ ಕಂಪ್ಯೂಟರ್ ಕಳುವಾಗಿರುವುದು ಅಚ್ಚರಿ ಮೂಡಿಸಿದೆ. ಆರೋಪಿಯು ಬ್ಯಾಗ್ ಒಂದರಲ್ಲಿ ಕಂಪ್ಯೂಟರ್ ಹಾಗೂ ಇತರೆ ವಸ್ತುಗಳನ್ನು ಕೊಂಡೊಯ್ಯುತ್ತಿರುವುದು ಸೆರೆಯಾಗಿತ್ತು. ಈ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಮೊದಲೇನಲ್ಲ: ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಕಳುವಾಗಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2017 ಏ.4ರಂದು ಕಟ್ಟಡದ 7ನೇ ಮಹಡಿಯಲ್ಲಿರುವ ಸಭಾಂಗಣದಲ್ಲಿದ್ದ ಎಲ್‌ಸಿಡಿ ಟಿವಿ ಕಳವು ಮಾಡಲಾಗಿತ್ತು. ಆಗಲೂ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಇದುವರೆಗೂ ಆರೋಪಿ ಪತ್ತೆಯಾಗಿಲ್ಲ. ಈಗಲೂ ಪ್ರಕರಣದ ತನಿಖೆ ನಡೆಯುತ್ತಿದೆ. ಪ್ರಸ್ತುತ ಕಳವು ಮಾಡಿರುವ ಶ್ರೀನಿವಾಸನೇ ಈ ಕೃತ್ಯ ಎಸಗಿರುವ ಬಗ್ಗೆ ಅನುಮಾನವಿದ್ದು, ವಿಚಾರಣೆ ಬಳಿಕ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಂಪ್ಯೂಟರ್ ಮಾರಾಟಕ್ಕೆ ಯತ್ನ: ಕಂಪ್ಯೂಟರ್ ಕಳವು ಮಾಡಿದ ಶ್ರೀನಿವಾಸ್, ಒಂದೆರಡು ದಿನಗಳ ಬಳಿಕ ಅದನ್ನು ಮಾರಲು ಯತ್ನಿಸಿದ್ದಾನೆ. ಅಷ್ಟರಲ್ಲಿ ತನಿಖೆ ನಡೆಸಿ, ಪ್ರಕರಣ ಪತ್ತೆಹಚ್ಚಿದ ಪೊಲೀಸರು ಆತನ ಮನೆಯಲ್ಲಿದ್ದ ಕಂಪ್ಯೂಟರ್ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಈತನ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ಕೊಡಿಸಲು ಕಳವು ಮಾಡಿರುವ ಸಾಧ್ಯತೆಯಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ರೀನಿವಾಸ್ ವಜಾ ಅಥವಾ ಅಮಾನತು?: ಶ್ರೀನಿವಾಸ್ ಕೃತ್ಯದಿಂದ ಇಡೀ ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತಾಗಿದೆ. ರಕ್ಷಣೆ ನೀಡಬೇಕಾದ ಕಚೇರಿಯಲ್ಲೇ ಈ ರೀತಿ ನಡೆದಿರುವುದು ಸಿಬ್ಬಂದಿಯಲ್ಲಿ ಆತಂಕ ಮೂಡಿದೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್‌ನನ್ನು ಅಮಾನತು ಅಥವಾ ವಜಾ ಮಾಡಲು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ನಿರ್ಧರಿಸಿದ್ದು, ಸೋಮವಾರ ಅಧಿಕೃತವಾಗಿ ಆದೇಶಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
-ಉದಯವಾಣಿ