ಕರ್ನಾಟಕ

ಪ್ರೇಮಲತಾ ದಿವಾಕರ್ ದಂಪತಿ ಸೇರಿ 7 ಜನರ ವಿರುದ್ಧ ಕೇಸ್ ದಾಖಲಿಸಲು ಕೋರ್ಟ್‌ ಆದೇಶ

Pinterest LinkedIn Tumblr


ಬೆಂಗಳೂರು: ಶ್ರೀರಾಮಚಂದ್ರಾಪುರಮಠ ಹಾಗೂ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ವಿರುದ್ಧ ಮಾಡಲಾಗಿದ್ದ ಬ್ಲಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಿಸಿ ಪ್ರೇಮಲತಾ ದಿವಾಕರ್ ದಂಪತಿ ಹಾಗೂ ಚ. ಮೂ ಕೃಷ್ಣಶಾಸ್ತ್ರಿ ಸೇರಿದಂತೆ 7 ಜನರ ವಿರುದ್ಧ ದೂರು ದಾಖಲಿಸಿ, ಸಮನ್ಸ್ ಜಾರಿಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಜನವರಿ 29ರಂದು ಸಿಐಡಿ ಸಲ್ಲಿಸಿದ್ದ ಬಿ ರಿಪೋರ್ಟ್ ತಿರಸ್ಕರಿಸಿದ್ದ ನ್ಯಾಯಾಲಯ, ಇದೀಗ ಪ್ರೇಮಲತಾ , ದಿವಾಕರ್ ಶಾಸ್ತ್ರಿ, ಚ.ಮೂ ಕೃಷ್ಣಶಾಸ್ತ್ರಿ, ಸಿ.ಎಂ.ಎನ್ ಶಾಸ್ತ್ರಿ, ಗಂಗಾಧರ ಶಾಸ್ತ್ರಿ, ಸರಕಾರಿ ಅಭಿಯೋಜಕ ಬಿ.ಟಿ ವೆಂಕಟೇಶ್, ಬಿ ಪದ್ಮನಾಭ ಶರ್ಮ ಎಂಬುವರ ವಿರುದ್ಧ IPC 384, 389, 504, 506, 511, 120(B) ಅನ್ವಯ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆದೇಶಿಸಿರುವ ನ್ಯಾಯಾಲಯ, ಎಲ್ಲಾ ಏಳು ಆರೋಪಿಗಳಿಗೂ ಸಮನ್ಸ್ ಜಾರಿಗೊಳಿಸಿ; ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಶ್ರೀರಾಮಚಂದ್ರಾಪುರಮಠದ ಭಕ್ತರು ದಾಖಲಿಸಿದ್ದ ದೂರಿನನ್ವಯ ಸಿಐಡಿ ಸಲ್ಲಿಸಿದ್ದ ‘ಬಿ’ ರಿಪೋರ್ಟ್ ತಿರಸ್ಕರಿಸಿ ವಿಚಾರಣೆ ಆರಂಭಿಸಿರುವ ಹೊನ್ನಾವರದ ನ್ಯಾಯಾಲಯ ಪೂರಕ ದಾಖಲೆಗಳು ಲಭ್ಯವಾಗಿರುವುದರಿಂದ ಈ ಕ್ರಮ ಕೈಗೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಪ್ರೇಮಲತಾ ದಂಪತಿಗಳು, ಪಂಚನಾಮೆಯಲ್ಲಿ ತಾವು ರಾಮಚಂದ್ರಾಪುರಮಠವನ್ನು ಬ್ಲಾಕ್‌ಮೇಲ್ ಮಾಡಿರುವುದಾಗಿ ಹಾಗೂ ರಾಘವೇಶ್ವರ ಶ್ರೀಗಳ ವಿರುದ್ಧ ಸುಳ್ಳು ಅತ್ಯಾಚಾರ ಆರೋಪ ದಾಖಲಿಸುವ ಪ್ರಯತ್ನ ಮಾಡಿರುವುದಾಗಿ ಒಪ್ಪಿಕೊಂಡಿದ್ದರು.

ಆದರೆ ಬಲವಾದ ಸಾಕ್ಷಗಳ ಹೊರತಾಗಿಯೂ ‘ಬಿ’ ರಿಪೋರ್ಟ್ ಸಲ್ಲಿಸಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು. ಇದೀಗ ನ್ಯಾಯಾಲಯ ವಿಚಾರಣೆ ಆರಂಭಿಸಿದ್ದು, ಆರೋಪಿಗಳಾದ ಪ್ರೇಮಲತಾ ದಂಪತಿ, ಚ ಮೂ ಕೃಷ್ಣಶಾಸ್ತ್ರಿ ಹಾಗೂ ಮತ್ತಿತರ ವಿರುದ್ಧ ಕ್ರಮಕ್ಕೆ ನ್ಯಾಯಾಲಯ ಮುಂದಾಗಿದೆ.

Comments are closed.