ಬೆಂಗಳೂರು: ಕೆಎಸ್ಆರ್’ಟಿಸಿ ಬಸ್ಸಿನ ಕೆಳಗೆ ಸಿಲುಕಿದ್ದ ಅಪರಿಚಿತ ವ್ಯಕ್ತಿಯೊಬ್ಬರ ಶವವನ್ನು 70 ಕಿ.ಮೀ ದೂರದವರೆಗೂ ಎಳೆದು ತಂದಿರುವ ಘಟನೆಯೊಂದು ನಡೆದಿದೆ.
ಶಾಂತಿನಗರದ ಡಿಪೋ 1ರ ಕೆಎಸ್ಆರ್’ಟಿಸಿ ಬಸ್ ತಮಿಳುನಾಡಿನಿಂದ ಊಟಿ, ಮೈಸೂರು, ರಾಮನಗರ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿತ್ತು. ನಸುಕಿನ 1.30ರ ಸುಮಾರಿಗೆ ರಾಮನಗರ-ಚನ್ನಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬನಿಗೆ ಬಸ್ ಡಿಕ್ಕಿಯಾಗಿದೆ.
ಯಾವುದೋ ನಾಯಿ ಅಥವಾ ಕಲ್ಲಿಗೆ ಡಿಕ್ಕಿ ಹೊಡಿದಿದೆ ಎಂದು ಭಾವಿಸಿ ಚಾಲಕ ಬಸ್ ನಿಲ್ಲಿಸದೆ ನೇರವಾಗಿ ಡಿಪೋಗೆ ಬಂದಿದ್ದಾನೆ. ಅಪಘಾತದ ವೇಳೆ ಮೃತ ವ್ಯಕ್ತಿ ಕಾಲುಗಳು, ಬಸ್ಸಿನ ಚಾಸಿಯಲ್ಲಿ ಸಿಲುಕಿಕೊಂಡಿವೆ. ಘಟನಾ ಸ್ಥಳದಿಂದಲೇ ಅವರ ದೇಹವು ನೆಲಕ್ಕೆ ಉಜ್ಜಿಕೊಂಡು ನಗರದವರೆಗೂ ಬಂದಿದೆ. ಶವದ ಹಿಂಭಾಗವು ಛಿದ್ರವಾಗಿದೆ.
ಶಾಂತಿನಗರ ನಿಲ್ದಾಣಕ್ಕೆ ಬೆಳಿಗ್ಗೆ 2.30ರ ಸುಮಾರಿಗೆ ಬಸ್ ಬಂದಿದೆ. ಪ್ರಯಾಣಿಕರನ್ನು ಕೆಳಗೆ ಇಳಿಸಿರುವ ಚಾಲಕ ಮೊಹಿನುದ್ದೀನ್ ಅವರು, ಬೆಳಿಗ್ಗೆ 3 ಗಂಟೆಗೆ ಬಸ್ ತೆಗೆದುಕೊಂಡು ಡಿಪೋಗೆ ಹೋಗಿದ್ದಾರೆ. ಡಿಪೋ ಬಾಗಿಲು ಬಳಿಯೇ ಬಸ್ ನಿಲ್ಲಿಸಿ, ಶಬ್ದ ಬಂದಿದ್ದ ಹಿನ್ನಲೆಯಲ್ಲಿ ಸಂಶಯಗೊಂಡು ಚಾಸಿಯನ್ನು ಬಗ್ಗಿ ನೋಡಿದ್ದಾರೆ. ಈ ವೇಳೆ ಶವ ಸಿಲುಕಿರುವುದು ಕಂಡುಬಂದಿದೆ. ಗಾಬರಿಗೊಂಡ ಮೊಹಿನುದ್ದೀನ್, ಅದೇ ಸ್ಥಿತಿಯಲ್ಲಿಯೇ ಬಸ್ಸನ್ನು ಡಿಪೋ ಒಳಗೆ ತೆಗೆದುಕೊಂಡು ಹೋಗಿದ್ದಾರೆ. ಸ್ವಲ್ಪ ದೂರ ಹೋಗುವಷ್ಟರಲ್ಲೇ ಶವ ಕಳೆಗೆ ಬಿದ್ದಿದೆ. ಇದನ್ನು ನೋಡಿದ ಚಾಲಕ ಶವವನ್ನು ತೆಗೆದುಕೊಂಡು ಹೋಗಿ ಮತ್ತೊಂದು ಬಸ್ಸಿನಲ್ಲಿ ಬಚ್ಚಿಟ್ಟಿದ್ದಾನೆ. ಬಳಿಕ ತಮ್ಮ ಬಸ್ಸನ್ನು ನಿಗದಿತ ಜಾಗದಲ್ಲಿಯೇ ನಿಲ್ಲಿಸಿ ಮನೆಗೆ ಹೋಗಿದ್ದಾರೆ.
ಬೆಳಿಗ್ಗೆ 9 ಗಂಟೆ ಸುಮಾರಿಗೆ ಡಿಪೋಗೆ ಬಂದಿರುವ ಸಿಬ್ಬಂದಿಗಳು ಬಸ್ಸನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಬಸ್’ನ್ನು ಸ್ವಚ್ಛಗೊಳಿಸುವ ವೇಳೆ ಬಸ್ಸಿನ ಕೆಳಗೆ ನೀರನ್ನು ರಭಸದಿಂದ ಬಿಟ್ಟ ವೇಳೆ ಶವವೊಂದು ಕೆಳಗೆ ಬಿದ್ದಿದೆ. ಈ ವೇಳೆ ಗಾಬರಿಗೊಂಡ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಡಿಪೋದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೊಹಿನುದ್ದೀನ್ ಮೇಲೆ ಸಂಶಯ ಮೂಡಿದೆ. ಬಳಿಕ ಆತನ ಬಸ್ಸಿನ ಕೆಳಗೆ ತಪಾಸಣೆ ನಡೆಸಿದಾಗ ಬಸ್ಸಿನ ಕೆಳಗೆ ರಕ್ತದ ಕಲೆಗಳಿರುವುದು ಕಂಡು ಬಂದಿದೆ. ಇದರ ಆಧಾರದಲ್ಲಿ ಮೊಹಿನುದ್ದೀನ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಮೊಹಿನುದ್ದೀನ್ ಸತ್ಯವನ್ನು ಹೇಳಿದ್ದಾರೆ.
ಮೃತ ವ್ಯಕ್ತಿ ಯಾರೆಂಬುದು ತಿಳಿದುಬಂದಿಲ್ಲ. ಆದರೆ, ವ್ಯಕ್ತಿ 30-40 ವರ್ಷದೊಳಗಿನವರಾಗಿರಬಹುದು ಎಂದು ಹೇಳಲಾಗುತ್ತಿದೆ. ಪ್ರಸ್ತುತ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಪೊಲೀಸರು ಕಳುಹಿಸಿದ್ದಾರೆ.
ಚನ್ನಪಟ್ಟಣದಿಂದ ಬೆಂಗಳೂರಿನತ್ತ ಬರುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಜೋರಾಗಿ ಶಬ್ಧವೊಂದು ಕೇಳಿಸಿತ್ತು. ಪ್ರಯಾಣಿಕರೆಲ್ಲರೂ ಮಲಗಿದ್ದರಿಂದ ಯಾರೊಬ್ಬರೂ ಆ ಬಗ್ಗೆ ವಿಚಾರಿಸಲಿಲ್ಲ. ಬಸ್ಸಿನ ಕನ್ನಡಿಯಲ್ಲೂ ಏನೂ ಕಾಣಿಸಿರಲಿಲ್ಲ. ನಾನು ಆ ಶಬ್ಧದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಬಸ್ ಓಡಿಸಿಕೊಂಡು ನಗರಗ್ಗೆ ಬಂದಿದ್ದೆ. ಬಸ್ ನಿಲ್ಲಿಸಲು ಡಿಪೋಗೆ ಹೋದಾಗಲೇ ಶವವಿರುವುದು ಗೊತ್ತಾಗಿದ್ದು ಎಂದು ಮೊಹಿನಿದ್ದೀನ್ ಅವರು ಹೇಳಿದ್ದಾರೆ.