
ಬೆಂಗಳೂರು: 23 ಗಂಟೆಗಳ ಸತತ ಕಾರ್ಯಾಚರಣೆಯಿಂದ ಕೊನೆಗೂ ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನ ಸೇನಾಧಿಕಾರಿಗಳು ಹತೋಟಿಗೆ ತಂದಿದ್ದಾರೆ. ಆದರೆ, ಕೆರೆ ಸುತ್ತಮುತ್ತ ದಟ್ಟ ಹೊಗೆ ಇನ್ನೂ ಆವರಿಸಿಕೊಂಡಿದೆ.
ಶುಕ್ರವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಮೊದಲು ಕೆರೆಯ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಅದು ಪಕ್ಕದಲ್ಲಿದ್ದ ರಕ್ಷಣಾ ಭೂಮಿಯೊಳಗೆ ಹರಡಿತ್ತು. ಇದರಿಂದ ಎಚ್ಚೆತ್ತ ಸೇನಾಪಡೆ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ಆದರೆ, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಇನ್ನೂ ನಾಲ್ಕೈದು ಗಂಟೆ ಬೇಕಾಗಿದ್ದು, ಅದಕ್ಕಾಗಿ ಐದು ಅಗ್ನಿಶಾಮಕ ವಾಹನ ಹಾಗೂ ಐದು ಸಾವಿರ ಯೋಧರು ಕಾರ್ಯಾಚರಣೆಗೆ ಇಳಿದಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಲೆಫ್ಟಿನೆಂಟ್ ಜನರಲ್ ವಿಪನ್ ಗುಪ್ತಾ ಅವರು ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಬೆಂಕಿ ನಂದಿಸಿದೆವು. ಆದರೆ, ಮತ್ತೆ ಸಂಜೆ ಬಳಿಕ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ಸೇನಾ ಕ್ಯಾಂಪಿಗೂ ಹರಡಬಹುದು ಎಂದು ಎಚ್ಚರಿಕೆ ವಹಿಸಿ ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ
ಕೆರೆಯ ಪಕ್ಕದಲ್ಲಿ ಹಲ್ಲುಗಾವಲು ಪ್ರದೇಶವಿದೆ. ಹೀಗಾಗಿ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿತ್ತು. ಈ ರೀತಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕಾಣಿಸಿಕೊಂಡಿತ್ತು ಎಂದು ಹೇಳಿದ್ದಾರೆ.
ಬೆಂಕಿ ನಂದಿಸುವ ವೇಳೆ ಒಬ್ಬರಿಗೆ ಹಾವು ಕಚ್ಚಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆರೆಯಲ್ಲಿ ಮಲಿನ ಹಾಗೂ ರಸಾಯನಿಕ ಮಿಶ್ರಣದಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಹೇಳಲಾಗಿದೆ. ಬೆಂಕಿ ವಿಚಾರವಾಗಿ ಸರ್ಕಾರ ನಮ್ಮ ಜತೆ ಮಾತುಕತೆ ನಡೆಸಿಲ್ಲ ಎಂದು ಹೇಳಿದ್ದಾರೆ.
Comments are closed.