ಕರ್ನಾಟಕ

ಹೋಮ್‌ಗಾರ್ಡ್‌ ಜತೆ ಲಲ್ವಿಡವ್ವಿ: ಪ್ರತಿಭಾ ಕೊಲೆ ಆರೋಪಿ ಶಿಫ್ಟ್‌

Pinterest LinkedIn Tumblr


ಬೆಂಗಳೂರು: ಪರಪ್ಪನ ಅಗ್ರಹಾರ ಜೈಲನ್ನು ಲೋಪಮುಕ್ತವಾಗಿ ಮಾಡುವ ನಿಟ್ಟಿನಲ್ಲಿ ಎಡಿಜಿಪಿ ಮೇಘರಿಕ್‌ ಎರಡು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು , ಹೋಂಗಾರ್ಡ್‌ ಜತೆ ಫೋಟೋ ತೆಗೆಸಿಕೊಂಡು ಸುದ್ದಿಯಾಗಿರುವ ಟವರ್‌ ಶಿವಕುಮಾರ್‌ (ಕಾಲ್‌ಸೆಂಟರ್‌ ಉದ್ಯೋಗಿ ಪ್ರತಿಭಾ ಕೊಲೆ ಆರೋಪಿ) ನನ್ನು ಬೆಳಗಾವಿ ಜೈಲಿಗೆ ವರ್ಗಾಯಿಸುವಂತೆ ಆದೇಶಿಸಿದ್ದಾರೆ ಮತ್ತು ಗಾಂಜಾ ಸಾಗಾಟಕ್ಕೆ ನೆರವಾದ ಆರೋಪದಲ್ಲಿ ಜೈಲು ಶಿಕ್ಷಕ ಸಿದ್ದಪ್ಪರಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದ್ದಾರೆ.

ಜೈಲು ಅಧೀಕ್ಷಕರು ಮತ್ತು ಅಧಿಕಾರಿಗಳ ಜತೆ ಆತ್ಮೀಯ ಸಂಬಂಧ ಇಟ್ಟುಕೊಂಡಿದ್ದ ಶಿವಕುಮಾರ್‌ ಪಂಚಿ ಆಗಿ ನೇಮಕಗೊಂಡ್ದಿದ್ದನಲ್ಲದೆ, ಕೆಳಹಂತದ ಸಿಬ್ಬಂದಿ ಮತ್ತು ಬಂಧಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ. ಜೈಲಿನ ಒಳಗೆ ನಡೆಯುವ ಬಡ್ಡಿ ವ್ಯವಹಾರ ಮತ್ತು ಗಾಂಜಾ ದಂಧೆ ಕೂಡ ಶಿವಕುಮಾರನ ನಿಯಂತ್ರಣದಲ್ಲಿತ್ತು ಎನ್ನುವ ಬಗ್ಗೆ ಹತ್ತಾರು ಮೂಕರ್ಜಿಗಳು ಮೇಲಾಧಿಕಾರಿಗಳಿಗೆ ಹೋಗಿದ್ದರೂ ಅಧಿಕೃತವಾಗಿ ಯಾವುದೇ ಸಾಕ್ಷ್ಯಗಳು ಸಿಗದ ಹಿನ್ನೆಲೆಯಲ್ಲಿ ಇದುವರೆಗೆ ಕ್ರಮ ಜರುಗಿಸಿರಲಿಲ್ಲ.

ಜೈಲು ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಮಹಿಳಾ ಹೋಂಗಾರ್ಡ್‌ ಹೆಗಲ ಮೇಲೆ ಕೈಹಾಕಿಕೊಂಡು ಅವರ ಜತೆ ಜೈಲಿನ ಹೊರಗೆ ಶಿವಕುಮಾರ್‌ ತೆಗೆಸಿಕೊಂಡಿದ್ದ ಫೋಟೋವೊಂದನ್ನು ಜೈಲಿನ ಸಿಬ್ಬಂದಿಯೇ ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದು, ರಾಷ್ಟ್ರಮಟ್ಟದ ಸುದ್ದಿಯಾಗಿತ್ತು. ಆ ಕ್ಷಣವೇ ತನಿಖೆಗೆ ಆದೇಶ ನೀಡಿದ್ದ ಅಧಿಕಾರಿಗಳು ಈತನ ಸ್ಥಿತಿಯನ್ನು ಸಾಮಾನ್ಯ ಕೈದಿಯ ಮಟ್ಟಕ್ಕೆ ಇಳಿಸಿದ್ದರು. ಜೈಲಿನ ಒಳಗೆ ಬಡ್ಡಿ ವ್ಯವಹಾರ ಮಾಡುತ್ತಾ ಮಹಿಳಾ ಹೋಂಗಾರ್ಡ್‌ಗೂ ಈತ ಬಡ್ಡಿಗೆ ಹಣ ಕೊಟ್ಟಿದ್ದು ಆ ಮುಲಾಜಿನಲ್ಲೇ ಅತಿ ಸಲುಗೆಯಿಂದ ಅವರ ಜತೆ ಫೋಟೋ ತೆಗೆಸಿಕೊಂಡಿದ್ದ ಎನ್ನುವ ಮಾಹಿತಿ ತನಿಖೆ ವೇಳೆ ಬಹಿರಂಗಗೊಂಡಿತ್ತು. ಇವೆಲ್ಲದರ ಒಟ್ಟು ಪರಿಣಾಮವಾಗಿ ಶಿವಕುಮಾರ್‌ನನ್ನು ಎತ್ತಂಗಡಿ ಮಾಡಲಾಗಿದೆ.

ಸಿದ್ದಪ್ಪನಿಗೆ ಶೋಕಾಸ್‌ ನೋಟಿಸ್‌:
ಜೈಲಿನ ಒಳಗೆ ಗಾಂಜಾ ಸರಬರಾಜಾಗುವ ಒಂದೊಂದೇ ದಾರಿಗಳನ್ನು ಮೇಘರಿಕ್‌ ಅವರು ಬಂದ್‌ ಮಾಡುತ್ತಾ ಬಂದಿದ್ದರು. ಜೈಲಿಗೆ ಬರುವ ಪುಸ್ತಕಗಳ ಮೂಲಕ ಗಾಂಜಾ ಒಳಗೆ ಪ್ರವೇಶಿಸುತ್ತಿದೆ ಎಂಬ ದೂರೊಂದು ಬಂದಿತ್ತು. ಈ ಹಿನ್ನೆಲೆಯಲ್ಲಿ ಜೈಲಿನ ಶಿಕ್ಷಕ, ಲೈಬ್ರೆರಿಯನ್‌ ಸಿದ್ದಪ್ಪ ವಿರುದ್ಧ ತನಿಖೆಗೆ ಶೋಕಾಸ್‌ ನೋಟಿಸ್‌ ನೀಡಲಾಗಿದೆ.

ನಾನಾ ಪರೀಕ್ಷೆ ತೆಗೆದುಕೊಳ್ಳುವ ಬಂದಿಗಳಿಗೆ ಜೈಲಿನ ಒಳಗೆ ಕಲಿಸುವ ಸಲುವಾಗಿ ಶಿಕ್ಷಣ ಇಲಾಖೆಯಿಂದ ಸಿದ್ದಪ್ಪ ಶಿಕ್ಷಕರಾಗಿ ನೇಮಕಗೊಂಡಿದ್ದಾರೆ. ಪುಸ್ತಕಗಳ ಒಳಗೆ ಗಾಂಜಾ ಇತ್ತು. ಅದನ್ನು ಟವರ್‌ ಶಿವಕುಮಾರ್‌ ಮೂಲಕ ಬ್ಯಾರಕ್‌ಗಳಲ್ಲಿ ಮಾರಾಟ ಮಾಡಿಸುತ್ತಾರೆ ಎನ್ನುವ ಬಗ್ಗೆ ದೂರಲಾಗಿತ್ತು. ಈ ದೂರನ್ನು ಗಂಭೀರವಾಗಿ ಪರಿಗಣಿಸಿ ಸತ್ಯಾಸತ್ಯತೆ ತಿಳಿಯಲು ಸಿದ್ದಪ್ಪರಿಗೆ ಶೋಕಾಸ್‌ ನೋಟಿಸ್‌ ನೀಡಿ ತನಿಖೆ ಆರಂಭಿಸಲಾಗಿದೆ.

ಸಿದ್ದಪ್ಪ 15 ವರ್ಷಗಳ ಹಿಂದೆ ಬೆಂಗಳೂರು ಜೈಲಿಗೆ ಶಿಕ್ಷಕರಾಗಿ ಬಂದವರು ಇದುವರೆಗೂ ವರ್ಗಾವಣೆಯನ್ನೇ ಕೇಳದೇ ಇಲ್ಲೇ ಇದ್ದಾರೆ. ಶಿಕ್ಷಕಿ ಆಗಿರುವ ತಮ್ಮ ಪತ್ನಿಯನ್ನೂ ಜೈಲಿಗೇ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎನ್ನುವ ಆರೋಪವೂ ಇದೆ.ಅಂದಿನ ಜೈಲು ಅಧೀಕ್ಷಕರಾಗಿದ್ದ ಕೃಷ್ಣ ಕುಮಾರ್‌ ಅವರೇ ಸಿದ್ದಪ್ಪರನ್ನು ‘ಆಡಳಿತ ಕಾರಣಕ್ಕೆ’ ಇಲ್ಲಿಂದ ವರ್ಗಾವಣೆ ಮಾಡಿ ಎಂದು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರಾದರೂ ಸಿದ್ದಪ್ಪರ ಪ್ರಭಾವದ ಮುಂದೆ ಅಧೀಕ್ಷಕರ ಪತ್ರ ಕೆಲಸ ಮಾಡಲಿಲ್ಲ.

ಬೆಂಗಳೂರು ಕಾರಾಗೃಹದ ಶಿಕ್ಷಕ ಸಿದ್ದಪ್ಪ ಅವರಿಗೆ ನೋಟಿಸ್‌ ನೀಡಲಾಗಿದೆ. ತನಿಖೆ ಕೂಡ ನಡೆದಿದೆ.
-ಸೋಮಶೇಖರ್‌, ಮುಖ್ಯ ಅಧೀಕ್ಷಕರು, ಪರಪ್ಪನ ಅಗ್ರಹಾರ

ಟವರ್‌ ಹೆಸರು ಬಂದಿದ್ದೇಕೆ ?
ಶಿವಕುಮಾರ್‌ ಜೈಲಿಗೆ ಬಂದಾಗ ಈತನಿಗೆ ಕಾಲ್‌ಸೆಂಟರ್‌ ಪ್ರತಿಭಾ ಶಿವಕುಮಾರ್‌ ಎನ್ನುವ ಹೆಸರೇ ಇತ್ತು. ಆದರೆ ಅಧಿಕಾರಿಗಳ ಸಖ್ಯ ಸಾಧಿಸಿದ ಈತ 2014 ರಲ್ಲಿ ಚುನಾವಣೆಯೇ ಇಲ್ಲದೆ ಜೈಲಿನ ಪಂಚಿ ಆಗಿ ನೇಮಕಗೊಂಡ. ಆಗ ಈತನಿಗೆ ಟವರ್‌ ಡ್ಯೂಟಿ ಸಿಕ್ಕಿತ್ತು. ಸಿಬ್ಬಂದಿ ಕೊರತೆ ಇದ್ದಲ್ಲಿ ಜೈಲಿನ ಸಜಾಬಂಧಿಗಳನ್ನು ಕರ್ತವ್ಯಕ್ಕೆ ನಿಯೋಜಿಸಿಕೊಳ್ಳುವ ಅವಕಾಶ ಜೈಲು ಮ್ಯಾನುಯೆಲ್‌ನಲ್ಲೇ ಇದೆ. ಆ ರೀತಿ ಸಜಾಬಂಧಿಗಳಿಗೆ ಡ್ಯೂಟಿ ನೀಡುವುದು ಟವರ್‌ ಸಿಬ್ಬಂದಿಯ ಕರ್ತವ್ಯ. ಪಂಚಿಯಾಗಿ ನೇಮಕಗೊಂಡ ಈತ ಜೈಲಿನ ನಡುವೆ ಇರುವ ಟವರ್‌ನಲ್ಲಿ ಕುಳಿತು ಡ್ಯೂಟಿ ಹಂಚುತ್ತಿದ್ದ ಕಾರಣದಿಂದ ಟವರ್‌ ಶಿವಕುಮಾರ್‌ ಎಂದು ಹೆಸರಾಗಿದ್ದ.

Comments are closed.