ರಾಷ್ಟ್ರೀಯ

ಫೇಸ್‌ಬುಕ್‌ಕೂ ಆಧಾರ್ ವಿವರ ನೀಡಬೇಕಂತೆ!

Pinterest LinkedIn Tumblr


ಹೊಸದಿಲ್ಲಿ: ಸರಕಾರದ ವಿವಿಧ ಸೇವೆಗಳನ್ನು ದೊರಕಲು ಆಧಾರ್ ನಂಬರ್ ಜೋಡಣೆಯನ್ನು ಕಡ್ಡಾಯ ಮಾಡಲಾಗಿದೆ. ಇದೀಗ ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್ ಇಂಡಿಯಾ ಸಹ, ದೇಶದಲ್ಲಿ ಹೊಸದಾಗಿ ಖಾತೆ ತೆರೆಯುವ ನಿರ್ದಿಷ್ಟ ಬಳಕೆದಾರರಲ್ಲೂ ಆಧಾರ್ ವಿವರಗಳನ್ನು ನೀಡುವಂತೆ ಕೇಳಿಕೊಳ್ಳುತ್ತಿದೆ.

ಈ ಸಂಬಂಧ ಆಧಾರ್ ವಿವರಗಳನ್ನು ಕೇಳಿದ ಸ್ಕ್ರೀನ್‌ಶಾಟ್ ಅನ್ನು ಬಳಕೆದಾರನೊಬ್ಬ ಮಗದೊಂದು ಜಾಲತಾಣ ರೆಡ್ಡಿಟ್‌ನಲ್ಲಿ ಪ್ರಕಟಗೊಳಿಸಿದ್ದರು. ಆಧಾರ್‌ನಲ್ಲಿರುವಂತೆಯೇ ಮೊದಲ ಹಾಗೂ ಕೊನೆಯ ಸಮಾನ ಹೆಸರು ನಮೂದಿಸುವಂತೆಯೇ ಬಳಕೆದಾರನಲ್ಲಿ ಕೇಳಿಕೊಳ್ಳಲಾಗಿತ್ತು.

ಈ ಸಂಬಂಧ ಸ್ಪಷ್ಟನೆ ನೀಡಿರುವ ಫೇಸ್‌ಬುಕ್ ಸಂಸ್ಥಾಪಕ, ಮಾರ್ಕ್ ಝುಕೆರ್‌ಬರ್ಗ್, ಪರೀಕ್ಷೆಯ ಭಾಗವಾಗಿ ಕೆಲವೇ ಕೆಲವು ನಿರ್ದಿಷ್ಟ ಬಳಕೆದಾರರಲ್ಲಿ ಆಧಾರ್ ವಿವರಗಳನ್ನು ಪಡೆಯಲಾಗುತ್ತಿದೆ ಎಂದಿದ್ದಾರೆ.

ಹೊಸತಾಗಿ ಖಾತೆ ತೆರೆಯುವ ಎಲ್ಲರಿಗೂ ಇದು ಅನ್ವಯವಾಗುವುದಿಲ್ಲ. ಹಾಗಿದ್ದರೂ ಆಧಾರ್ ವಿವರ ನೀಡುವುದು ಕಡ್ಡಾಯವೇನಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಜನಪ್ರಿಯವಾಗಿರುವ ಹೆಸರನ್ನು ಬಳಕೆದಾರರು ಬಳಕೆ ಮಾಡುವುದು ನಮ್ಮ ಗುರಿಯಾಗಿದೆ. ಈ ಮೂಲಕ ಸುಲಭವಾಗಿ ಸ್ನೇಹಿತರು ಹಾಗೂ ಕುಟುಂಬದ ಜತೆ ಸಂಪರ್ಕ ಹೊಂದಬಹುದಾಗಿದೆ. ಆಧಾರ್ ಕಾರ್ಡ್ ಹೆಸರು ನೀಡುವ ಮೂಲಕ ಸ್ನೇಹಿತರು ಬೇಗನೇ ಗುರುತಿಸಬಹುದಾಗಿದೆ. ಈ ಸಂಬಂಧ ಪರೀಕ್ಷೆ ನಡೆಯುತ್ತಿದೆ. ಇದು ಕೇವಲ ಐಚ್ಛಿಕ ಆಯ್ಕೆ ಎಂದು ಫೇಸ್‌ಬುಕ್ ವಕ್ತಾರ ತಿಳಿಸಿದ್ದಾರೆ.

ಸದ್ಯಕ್ಕೆ ಆಧಾರ್‌ನಲ್ಲಿರುವ ಹೆಸರನ್ನು ಮಾತ್ರ ಕೇಳಿಕೊಂಡಿದೆ. ಈ ಹಿನ್ನಲೆಯಲ್ಲಿ ಮುಂದಕ್ಕೆ ಫೇಸ್‌ಬುಕ್ ಯೋಜನೆ ಏನಾಗಿರಬಹುದೆಂಬುದು ಕುತೂಹಲವೆನಿಸಿದೆ.

Comments are closed.