ಕರ್ನಾಟಕ

ಖಾಲಿ ಜೋಳಿಗೆ ಹಿಡಿದು ಬಂದವಳು ನಾನು

Pinterest LinkedIn Tumblr


ಬೆಂಗಳೂರು: ಖಾಲಿ ಜೋಳಿಗೆ ಹಿಡಿದು ಸಾಹಿತ್ಯ ಕ್ಷೇತ್ರ ಬಂದ ನಾನು ಅನೇಕ ಸಾಹಿತಿಗಳು, ಲೇಖಕರಿಂದ ಜ್ಞಾನದ ಬಿಕ್ಷೆಯನ್ನು ಪಡೆದು ಬೆಳೆದಿದ್ದೇನೆ ಎಂದು ಲೇಖಕಿ ಉಷಾ ನರಸಿಂಹನ್‌ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕರ್ನಾಟಕ ಲೇಖಕಿಯರ ಸಂಘದಿಂದ ನೀಡುವ ಎಚ್‌.ವಿ. ಸಾವಿತ್ರಮ್ಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಖಾಲಿ ಜೋಳಿಗೆ ಹಿಡಿದು ಬಂದ ನನಗೆ ಸಾರಸ್ವತ ಲೋಕ ಜ್ಞಾನದ ಬುತ್ತಿ ನೀಡಿತು.

ಸಾಹಿತಿಗಳು, ಲೇಖಕರಿಂದ ಜ್ಞಾನದ ಭಿಕ್ಷೆ ಪಡೆದು, ನನ್ನ ಖಾಲಿ ಇದ್ದ ಸಾಹಿತ್ಯದ ಜೋಳಿಗೆಯನ್ನು ತುಂಬಿಸಿಕೊಂಡೆ ಎಂದು ತಮ್ಮ ಸಾಹಿತ್ಯ ಲೋಕದ ಪಯಣದ ಬಗ್ಗೆ ವಿವರಿಸಿ, ಲೇಖಕಿಯರ ಸಂಘದ ಪ್ರಶಸ್ತಿ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು ಮಾತನಾಡಿ, ಇಂದು ಸಮಾಜಮುಖೀ ಸಾಹಿತ್ಯದ ಕೊರತೆ ಎದ್ದು ಕಾಣುತ್ತಿದೆ. ಈ ಕೊರತೆ ನೀಗಿಸುವ ಸಾಹಿತ್ಯ ರಚನೆಗೆ ಒತ್ತು ಕೊಡಬೇಕಾಗಿದೆ. ಓದುಗರನ್ನು ಪ್ರೇರೇಪಿಸುವ ಬರವಣಿಗೆ ನಮ್ಮದಾಗಬೇಕು. ಓದುಗರನ್ನು ಹೆಚ್ಚಾಗಿ ಆಕರ್ಷಿಸುವ ಆಧುನಿಕ ವಿಷಯಗಳನ್ನು ಆಯ್ಕೆ ಮಾಡಿಕೊಂಡಾಗ ಓದುವ ಅಭಿರುಚಿ ಹೆಚ್ಚಿಸುವಲ್ಲಿ ಬರಹಗಾರ ಯಶಸ್ಸು ಕಾಣುತ್ತಾನೆ ಎಂದರು.

ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್‌ ಮಾತನಾಡಿ, “ಆಧುನಿಕ ಯುಗದ ಕೆಲ ಬರಹಗಾರರ ಕಾದಂಬರಿ ಓದುವುದೇ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಉಷಾ ನರಸಿಂಹನ್‌ ಮುಸ್ಲಿಂ ಸಮಾಜದ ಒಳಹೊಕ್ಕು “ಪರ್ಷಿಯ ಪರಿಮಳ’ ಕಾದಂಬರಿ ಬರೆದಿರುವುದು ಉತ್ತಮ ಸಂಗತಿಯಾಗಿದೆ’.

ಇಸ್ಲಾಂ ಧರ್ಮದ ಸಂಪ್ರದಾಯಗಳನ್ನು ಬಹಳ ವಿಸ್ತಾರವಾಗಿ ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಕಾರ್ಯದರ್ಶಿ ಆಶಾ ಹೆಗಡೆ, ಸಹ ಕಾರ್ಯದರ್ಶಿ ಡಾ. ಶಾಕಿರ ಖಾನಂ ಮತ್ತಿತರರು ಉಪಸ್ಥಿತರಿದ್ದರು.

-ಉದಯವಾಣಿ

Comments are closed.