ಕರ್ನಾಟಕ

ಕೋಟಿ ಲಾಭ ತೋರಿಸಿ ವ್ಯಕ್ತಿಗೆ ಚೆಂಬು ಕೊಟ್ಟ ಕಂಪನಿ!

Pinterest LinkedIn Tumblr


ಕಲಬುರಗಿ: ತಮ್ಮ ಬಳಿ ಹಳೆಯದಾದ, ವಿದೇಶದಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ವಿಚಕ್ಷಣ ಶಕ್ತಿಯುಳ್ಳ ತಾಮ್ರದ ಚೆಂಬು ಇದೆ ಎಂದು ವ್ಯಕ್ತಿಯೊಬ್ಬರನ್ನು ನಂಬಿಸಿ ಭಾರಿ ಪ್ರಮಾಣದಲ್ಲಿ ಹಣ ದೋಚಿದ್ದ ತಂಡವೊಂದು ಈಗ ಪತ್ತೆಯಾಗಿದೆ.

ತಾಮ್ರದ ಚೆಂಬ(ರೈಸ್‌ಪುಲ್ಲಿಂಗ್‌)ನ್ನು ವಿದೇಶಕ್ಕೆ ಕಳುಹಿಸಲು 30ರಿಂದ 40 ಲಕ್ಷ ರೂ. ತಗಲುತ್ತದೆ. 20 ಲಕ್ಷ ರೂ. ನೀಡಿದರೆ ಕೋಟಿ ರೂ. ನಿಮಗೆ ಬರುತ್ತದೆಂದು ನಂಬಿಸಿ ಲಕ್ಷಾಂತರ ರೂ. ದೋಚುತ್ತಿದ್ದ ಬೆಂಗಳೂರಿನ ಗೋರಿಂಜ್‌ಸ ಇಂಟರನ್ಯಾಷನಲ್‌ ಕಂಪನಿಯ ವಂಚನೆ ಈಗ ಬಯಲಾಗಿದೆ.

ಗಂಗಾವತಿಯ ವ್ಯಕ್ತಿಯೊಬ್ಬರಿಂದ 43 ಲಕ್ಷ ರೂ. ಪಡೆದು ವಂಚಿಸಲಾಗಿದೆ. ಇದಕ್ಕೆ ಮಧ್ಯವರ್ತಿಯಾಗಿದ್ದು ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದ ವ್ಯಕ್ತಿ. ಮಾತುಕತೆ ನಡೆದಿದ್ದು ನಗರದ ಅಥರ್ವ ಹೊಟೇಲ್‌ನಲ್ಲಿ. ಹಣದ ವ್ಯವಹಾರ ನಡೆದದ್ದು ನಗರದ ಹುಮನಾಬಾದ ರಸ್ತೆಯಲ್ಲಿ. ಇಜೇರಿಯ ಬಲರಾಮ ಬೆಂಗಳೂರಿನ ಗೋರಿಂಜ್‌ಸ ಇಂಟರ್‌ನ್ಯಾಷನಲ್‌ ಕಂಪನಿಯವರೆಂದು ಹೇಳಿಕೊಳ್ಳಲಾದ ರವೀಂದ್ರ ಶರ್ಮಾ, ಪೆರೇರಾ ಅಲಿಯಾಸ್‌ ಅಲೆಕ್ಸ್‌ ಹಾಗೂ ಚಾಲಕ ಖಾನ್‌ ಎಂಬ ನಾಲ್ವರ ವಿರುದ್ಧ ಚೌಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಹಾಗೂ ಹಣ ವಶಕ್ಕೆ ಮುಂದಾಗಿದ್ದಾರೆ.

ಏನಿದು ಘಟನೆ?: ಇಜೇರಿಯ ಬಲರಾಮ, ಬೆಂಗಳೂರು ಕಂಪನಿಯ ರವೀಂದ್ರ ಶರ್ಮಾ ಸೇರಿ ನಾಲ್ವರು ಆರೋಪಿಗಳು ಗಂಗಾವತಿ ಮೂಲಕ ಚಂದ್ರಶೇಖರ ಪಲ್ಲೇದ ಎನ್ನುವರಿಗೆ ವಿದೇಶದಲ್ಲಿ ಬಹು ಬೇಡಿಕೆ ಇರುವ ಗುರುತ್ವಾಕರ್ಷಣೆಯ ಚೆ‌ಂಬಿದೆ ಎಂದು ತೋರಿಸಿ, ಈಗ 8 ಲಕ್ಷ ರೂ. ನೀಡಿದರೆ ಮೂರ್‍ನಾಲ್ಕು ಪಟ್ಟು ಹಣ ಬರುತ್ತದೆ ಎಂದು ುದಾಗಿ ನಂಬಿಸಿದ್ದರು. ಮೊದಲ ಹಂತವಾಗಿ 8 ಲಕ್ಷ ರೂ. ಪಡೆದಿದ್ದಲ್ಲದೇ ಕೆಲವು ದಿನಗಳ ನಂತರ ಚಂಬು ಇಕ್ಕಟ್ಟಿನಲ್ಲಿ ಸಿಲುಕಿದೆ. ಈಗ ಅದಕ್ಕೆ ಕೋಟ್ಯಂತರ ಬೆಲೆ ದೊರೆಯುತ್ತಿದೆ. ಹೀಗಾಗಿ ಈಗ ಕೋಟಿ ರೂ. ಸಮೀಪ ಹಣ ನೀಡಬೇಕಾಗಿದೆ ಎಂಬುದಾಗಿ ಹೇಳಿ ಚಂದ್ರಶೇಖರ ಹತ್ತಿರ ಮತ್ತೆ 35 ಲಕ್ಷ ರೂ. ಪಡೆಯಲಾಗಿತ್ತು.ಆದರೆ ಹಣ ಪಡೆದವರು ನಂತರ ನಾಪತ್ತೆಯಾಗಿದ್ದರು.

ಮೊಬೈಲ್‌ ಕರೆ ಮಾಡಿದರೆ ಸ್ವೀಕರಿಸಲಿಲ್ಲ. ಕೊನೆಗೆ ಚಂದ್ರಶೇಖರ ಅವರು ಹಿರಿಯ ಪೊಲೀಸ್‌ ಅಧಿಕಾರಿಗಳ ಬಳಿ ನ್ಯಾಯಕ್ಕಾಗಿ ಮೊರೆ ಹೋಗಿದ್ದರು. ಆದರೆ ಹಿರಿಯ ಅಧಿಕಾರಿಗಳು ಯಾವುದೇ ಪ್ರಕರಣ ದಾಖಲಿಸಿಕೊಳ್ಳದೆ ವಂಚನೆ ಮಾಡಿರುವ ತಂಡದವರನ್ನು ವಿಚಾರಿಸಿ ಕೊಟ್ಟಿರುವ ಹಣದಲ್ಲಿ ಸ್ವಲ್ಪ ಹಣವನ್ನು ಅನ್ಯಾಯಕ್ಕೊಳಗಾದ ವ್ಯಕ್ತಿಗೆ ಕೊಡಿಸಿದ್ದರು. ಆದರೆ 43 ಲಕ್ಷ ರೂ. ಕಳೆದುಕೊಂಡು ಬೀದಿಗೆ ಬಂದ ಚಂದ್ರಶೇಖರ ತನಗೆ ಕೊಟ್ಟಷ್ಟು ಹಣ ಬಂದಿಲ್ಲ. ಇದರಲ್ಲಿ ಪೊಲೀಸರೇ ತಪ್ಪೆಸಗಿದ್ದಾರೆಂದು ಅವರಿವರ ಬಳಿ ಅವಲತ್ತುಕೊಂಡಿದ್ದರು. ಈ ವಿಷಯ ಐಜಿಪಿ ಅಲೋಕಕುಮಾರ ಅವರಿಗೂ ತಲುಪಿತ್ತು. ಅವರು ತಕ್ಷಣವೇ ಪ್ರಕರಣ ದಾಖಲಿಸಲು ಸೂಚಿಸಿದ್ದರು. ಅವರ ಸೂಚನೆ ಮೇರೆಗೆ ನಗರ ಚೌಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಸ ತಿರುವು!: ಈ ಪ್ರಕರಣ ಹಲವು ತಿಂಗಳ ಹಿಂದೆ ನಡೆದಿದೆಯಾದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಹಣ ಕಳೆದುಕೊಂಡ ವ್ಯಕ್ತಿಗೆ ವಂಚನೆ ಮಾಡಿದ ಅರ್ಧ ಹಣ ಮಾತ್ರ ಕೊಡಿಸಿ, ಇನ್ನರ್ಧ ಹಣಕ್ಕೆ ಲೆಕ್ಕ ಇಲ್ಲದಂತೆ ಮಾಡಿರುವುದು ಇಕ್ಕಟ್ಟಿಗೆ ಸಿಲುಕಿಸಿದೆ. ಪೊಲೀಸರೇ ಈಗ ಹಣ ತೆರಬೇಕಾದ ಪ್ರಸಂಗ ಎದುರಾಗಿದೆ.

– ಹಣಮಂತರಾವ ಭೈರಾಮಡಗಿ

-ಉದಯವಾಣಿ

Comments are closed.