ಕರ್ನಾಟಕ

ಲೈಂಗಿಕ ಕಿರುಕುಳ: ಯಶವಂತಪುರ ಎಸಿಪಿ ವಿರುದ್ಧ ಪೊಲೀಸ್ ಆಯುಕ್ತರಿಗೆ ಮಹಿಳೆ ದೂರು

Pinterest LinkedIn Tumblr


ಬೆಂಗಳೂರು: ಯಶವಂತಪುರ ಉಪ ವಿಭಾಗ ಎಸಿಪಿ ರವಿ ಪ್ರಸಾದ್ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಆದರೆ ಎಸಿಪಿ ರವಿ ಪ್ರಸಾದ್ ಈ ಆರೋಪವನ್ನು ನಿರಾಕರಿಸಿದ್ದು, ವಿವಾದದಲ್ಲಿ ತಮ್ಮ ಪರವಾಗಿ ನಿಲ್ಲಲು ಮಹಿಳೆ ಪೊಲೀಸರ ಮೇಲೆ ಒತ್ತಡ ಹೇರುವ ತಂತ್ರವಿದು ಎಂದು ಆಪಾದಿಸಿದ್ದಾರೆ.

ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಕಳೆದ ಶನಿವಾರ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರಿಗೆ ಎಸಿಪಿ ರವಿ ಪ್ರಸಾದ್ ವಿರುದ್ಧ ದೂರು ನೀಡಿದ್ದಾರೆ. ಅವರು ಈ ಹಿಂದೆ ಯಶವಂತಪುರ ಠಾಣೆಯಲ್ಲಿ ತಮ್ಮ ಮೇಲೆ ಇಬ್ಬರು ಪುರುಷರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರು ನೀಡಿದ್ದರು.

ನಗರ ಪೊಲೀಸ್ ಆಯುಕ್ತರಿಗೆ ನೀಡಿದ ತಮ್ಮ 4 ಪುಟಗಳ ದೂರಿನಲ್ಲಿ ಮಹಿಳೆ, ತಾವು ಈ ಹಿಂದೆ ನೀಡಿದ್ದ ದೂರಿನ ಸಂಬಂಧ ಏನಾಯಿತೆಂದು ವಿಚಾರಿಸಲೆಂದು ಯಶವಂತಪುರ ಪೊಲೀಸ್ ಠಾಣೆಯ ಎಸಿಪಿಯವರ ಬಳಿಗೆ ನವೆಂಬರ್ 18ರಂದು ಹೋಗಿದ್ದೆ. ತಮ್ಮ ಹೇಳಿಕೆ ತೆಗೆದುಕೊಳ್ಳುವಾಗ ಎಸಿಪಿಯವರು ದೇಹದ ಖಾಸಗಿ ಅಂಗಗಳನ್ನು ತೋರಿಸುವಂತೆ ಕೇಳಿದರು. ಅದಕ್ಕೆ ತಾವು ಆಕ್ಷೇಪ ವ್ಯಕ್ತಪಡಿಸಿದಾಗ ಅಲ್ಲಿದ್ದ ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವೆಂಕಟೇಶ್ ಗೌಡ, ಹಿರಿಯ ಪೊಲೀಸ್ ಅಧಿಕಾರಿಯವರು, ಅವರು ಹೇಳಿದ್ದನ್ನು ನೀವು ಕೇಳಬೇಕು ಎಂದು ಕಿರುಚಾಡಿದರು ಎಂದಿದ್ದಾರೆ.

ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರನ್ನು ಸಂಪರ್ಕಿಸಿ ಎಸಿಪಿ ರವಿ ಪ್ರಸಾದ್ ವಿರುದ್ಧ ದೂರು ನೀಡಲು ಮುಂದಾದಾಗ ಅವರು ನಗರ ಪೊಲೀಸ್ ಆಯುಕ್ತರನ್ನು ಸಂಪರ್ಕಿಸುವಂತೆ ಸೂಚಿಸಿದರು ಎಂದಿದ್ದಾರೆ.

ಮಹಿಳೆಯ ಆರೋಪವನ್ನು ಸಂಪೂರ್ಣ ನಿರಾಕರಿಸಿರುವ ಎಸಿಪಿ ರವಿ ಪ್ರಸಾದ್, ಮಹಿಳೆ ದೂರು ನೀಡಲು ಪೊಲೀಸ್ ಠಾಣೆಗೆ ಬಂದಾಗ ನಾನು ಆಕೆಯಲ್ಲಿ ಏನಾಯಿತೆಂದು ಕೇಳಿದೆ. ಅಷ್ಟೆ, ಬೇರೆಲ್ಲಾ ವಿಷಯ ಆಕೆ ಹೇಳುತ್ತಿರುವುದು ಸುಳ್ಳು. ಆಕೆ ಆರೋಪ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳದ ಕಾರಣ, ನಮ್ಮ ಮೇಲೆ ಒತ್ತಡ ಹೇರಲು ಹೀಗೆ ನನ್ನ ಮೇಲೆ ಆಪಾದನೆ ಮಾಡುತ್ತಿದ್ದಾರೆ ಎಂದಿದ್ದಾರೆ.

ಹನುಮಂತರಾಯಪ್ಪ ಎಂಬುವವರು ಸ್ಥಾಪಿಸಿದ ಟ್ರಸ್ಟ್ ಮತ್ತು ಮಹಿಳೆ ಭಾಗಿಯಾಗಿರುವ ಇನ್ನೊಂದು ಟ್ರಸ್ಟ್ ನ ಮಧ್ಯೆ ಎರಡು ತಿಂಗಳ ಹಿಂದೆ ವಿವಾದ ನಡೆದಿತ್ತು. ಕಳೆದ 17ರಂದು ಮಹಿಳೆ ಹನುಮಂತರಾಯಪ್ಪ ವಿರುದ್ಧ ಸೋಲದೇವನಹಳ್ಳಿ ಇನ್ಸ್ ಪೆಕ್ಟರ್ ವೆಂಕಟೇಶ್ ಗೌಡ ಅವರಿಗೆ ಲೈಂಗಿಕ ಕಿರುಕುಳ ದೂರು ನೀಡಿದ್ದರು. ಅವರು ಯಶವಂತಪುರ ಎಸಿಪಿಯವರಲ್ಲಿಗೆ ಹೋಗುವಂತೆ ಸೂಚಿಸಿದರು.

ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಇಬ್ಬರು ಮಹಿಳಾ ಪೊಲೀಸರ ಎದುರು ನಾನು ವಿಚಾರಣೆ ನಡೆಸಿದ್ದೇ ಹೊರತು ನನ್ನ ಕಚೇರಿಯಲ್ಲಲ್ಲ. ಪ್ರಕರಣಕ್ಕೆ ಸಂಬಂಧಪಟ್ಟ ವಿಷಯಗಳನ್ನು ಎಷ್ಟು ಅಗತ್ಯವಿದೆಯೊ ಅಷ್ಟು ಮಾತ್ರವೇ ಕೇಳಿದ್ದು ಎಂದು ರವಿ ಪ್ರಸಾದ್ ತಿಳಿಸಿದ್ದಾರೆ.

Comments are closed.