ಬೆಂಗಳೂರು: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ವಿರೋಧಿಸಿ ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಆರಂಭಿಸಿದ್ದ ಹೊರ ರೋಗಿಗಳ ಚಿಕಿತ್ಸಾ ಸೌಲಭ್ಯ (ಒಪಿಡಿ) ಸ್ಥಗಿತ ಹೋರಾಟವನ್ನು ಕೈಬಿಡಲು ಖಾಸಗಿ ಆಸ್ಪತ್ರೆಗಳ ವೈದ್ಯರು ನಿರ್ಧರಿಸಿದ್ದಾರೆ.
ಆದರೆ, ರಾಜ್ಯದಾದ್ಯಂತ ಶುಕ್ರವಾರದಿಂದ ಒಪಿಡಿ ತೆರೆಯುವ ಬಗ್ಗೆ ವೈದ್ಯರ ವಿವಿಧ ಸಂಘಟನೆಗಳು ಒಮ್ಮತಕ್ಕೆ ಬಂದಿಲ್ಲ. ಬೆಂಗಳೂರಿನಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಆರಂಭಿಸಲು ಬೆಂಗಳೂರು ಖಾಸಗಿ ಆಸ್ಪತ್ರೆಗಳ ಸಂಘ ನಿರ್ಧರಿಸಿದೆ. ಉಳಿದ ಜಿಲ್ಲೆಗಳಲ್ಲಿ ಒಪಿಡಿ ತೆರೆಯುವ ನಿರ್ಧಾರದ ವಿವೇಚನೆ ಆಯಾ ಆಸ್ಪತ್ರೆಗಳೇ ತೆಗೆದುಕೊಳ್ಳಲಿವೆ ಎಂದು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ ಪದಾಧಿಕಾರಿಗಳು ತಿಳಿಸಿದ್ದಾರೆ.
‘ರಾಜ್ಯ ಹೈಕೋರ್ಟ್ ಪ್ರತಿಭಟನೆ ಕೈಬಿಡುವಂತೆ ಮಾಡಿರುವ ಮನವಿಯನ್ನು ಪುರಸ್ಕರಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಪದಾಧಿಕಾರಿಗಳ ಸಂಜೆ ಸಭೆ ಸೇರಿ ಶುಕ್ರವಾರದಿಂದ ಒಪಿಡಿ ಸೌಲಭ್ಯ ಪುನರಾರಂಭ ಮಾಡಲು ತೀರ್ಮಾನಿಸಲಾಯಿತು. ಪ್ರತಿಭಟನೆ ಹಿಂದಕ್ಕೆ ಪಡೆದಿದ್ದೇವೆ’ ಎಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಸಂಘದ ಅಧ್ಯಕ್ಷ ಡಾ.ಜಯಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಂಘದ ಪದಾಧಿಕಾರಿಗಳು ಶುಕ್ರವಾರ ಬೆಳಗಾವಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನ ಕರೆದಿರುವ ಸಭೆಯಲ್ಲಿ ಭಾಗವಹಿಸುತ್ತೇವೆ’ ಎಂದರು.
‘ಇತರ ಜಿಲ್ಲೆಗಳಲ್ಲಿರುವ ಖಾಸಗಿ ಆಸ್ಪತ್ರೆಗಳ ಒಪಿಡಿ ತೆರೆಯಬೇಕೆ ಅಥವಾ ಬಿಡಬೇಕೆ ಎಂಬ ಬಗ್ಗೆ ಆಯಾಯ ಆಸ್ಪತ್ರೆಗಳ ವಿವೇಚನೆಗೆ ಬಿಡಲಾಗಿದೆ. ಪದಾಧಿಕಾರಿಗಳು ಬೆಳಗಾವಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ’ ಎಂದು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ ಗೌರವ ಕಾರ್ಯದರ್ಶಿ ಡಾ.ಬಿ.ವೀರಣ್ಣ ತಿಳಿಸಿದರು.
ಪ್ರತಿಭಟನೆ ಕೈಬಿಡಿ: ವೈದ್ಯರಿಗೆ ಹೈಕೋರ್ಟ್ ಮನವಿ
ಬೆಂಗಳೂರು: ‘ಸಾರ್ವಜನಿಕರ ಹಿತದೃಷ್ಟಿಯಿಂದ ಖಾಸಗಿ ಆಸ್ಪತ್ರೆ ವೈದ್ಯರು ಕೂಡಲೇ ಪ್ರತಿಭಟನೆ ಹಿಂಪಡೆಯಬೇಕು. ಸರ್ಕಾರದ ಜೊತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು’ ಎಂದು ವೈದ್ಯರ ಸಂಘಗಳಿಗೆ ಹೈಕೋರ್ಟ್ ಕಳಕಳಿಯ ಮನವಿ ಮಾಡಿದೆ.
ನೆಲಮಂಗಲದ ಡಿ.ವಿ.ಆದಿನಾರಾಯಣ ಶೆಟ್ಟಿ, ವಕೀಲ ಎನ್.ಪಿ.ಅಮೃತೇಶ್ ಹಾಗೂ ನಗರದ ಸರಸ್ವತಿಪುರಂ ನಿವಾಸಿ ಮಾಯಿಗೆ ಗೌಡ ಸಲ್ಲಿಸಿರುವ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ರಾಜ್ಯದಾದ್ಯಂತ 11 ಸಾವು
ಬೆಂಗಳೂರು: ಖಾಸಗಿ ಆಸ್ಪತ್ರೆಗಳ ವೈದ್ಯರ ಪ್ರತಿಭಟನೆಯಿಂದಾಗಿ ಚಿಕಿತ್ಸೆ ದೊರಕದೆ ರಾಜ್ಯದ ವಿವಿಧೆಡೆ ಗುರುವಾರ 11 ಮಂದಿ ಮೃತಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಇಬ್ಬರು ಮಹಿಳೆಯರು, ವಿಜಯಪುರ ಜಿಲ್ಲೆಯ ಹೊರ್ತಿ ಹಾಗೂ ದೇವರಹಿಪ್ಪರಗಿ, ಧಾರವಾಡದ ಅಣ್ಣಿಗೇರಿ, ಗದಗ, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ಹೊಸಪೇಟೆಯ ಗೊಲ್ಲರಹಳ್ಳಿ ಮತ್ತು ಶ್ರೀರಂಗಪಟ್ಟಣ, ಬೆಂಗಳೂರು ಮತ್ತು ರಾಮನಗರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಪ್ರತಿಭಟನೆ ಬಗ್ಗೆ ಅಪಪ್ರಚಾರ:
‘ಪ್ರತಿಭಟನೆ ನಡೆಸುತ್ತಿರುವ ವೈದ್ಯರ ವಿರುದ್ಧ ಕೆಲವು ಕ್ರಿಮಿಗಳು ಅಪಪ್ರಚಾರ ಮಾಡುತ್ತಿವೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ’ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ. ಎಚ್.ಎನ್. ರವೀಂದ್ರ ಹೇಳಿದ್ದಾರೆ.
ಉ.ಕದಲ್ಲಿ ಮುಂದುವರಿದ ಪ್ರತಿಭಟನೆ:
ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ, ಬಳ್ಳಾರಿ ಜಿಲ್ಲೆಗಳಲ್ಲಿ ವೈದ್ಯರ ಪ್ರತಿಭಟನೆ ಮುಂದುವರಿದಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವೈದ್ಯರು ಪಾಲ್ಗೊಂಡಿರುವುದನ್ನು ಖಂಡಿಸಿ ಜೆಡಿಯು ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.