ಬೆಂಗಳೂರು: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ಪ್ರಥಮ ವರ್ತಮಾನ ವರದಿ (ಎಫ್ಐಆರ್) ದಾಖಲಿಸಿಕೊಂಡಿರುವ ಸಿಬಿಐ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರನ್ನು ಒಂದನೇ ಆರೋಪಿ ಎಂದು ಹೆಸರಿಸಿದೆ.
ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಚೆನ್ನೈ ಸಿಬಿಐ ಕಚೇರಿಯ ಎಸ್‌ಪಿ ಎ. ಶರವಣನ್ ಎಫ್‌ಐಆರ್ ದಾಖಲಿಸಿದ್ದಾರೆ. ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ಕ್ರಮವಾಗಿ ಎರಡು ಮತ್ತು ಮೂರನೇ ಆರೋಪಿ ಎಂದು ಎಫ್‌ಐಆರ್ ಹೆಸರಿಸಿದೆ.
ಮಂಗಳೂರಿನಲ್ಲಿ ಡಿವೈಎಸ್ಪಿಯಾಗಿದ್ದ ಗಣಪತಿ 2016ರ ಜುಲೈ 7ರಂದು ಮಡಿಕೇರಿಯ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ‘ಗೃಹ ಸಚಿವ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ, ಎ.ಎಂ. ಪ್ರಸಾದ್ ನನ್ನ ಸಾವಿಗೆ ಕಾರಣ’ ಎಂದು ಗಣಪತಿ ಸಾವಿಗೆ ಮುನ್ನ ಹೇಳಿಕೆ ನೀಡಿದ್ದರು.
ಅದೇ ವೇಳೆ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದರಿಂದ ಗಣಪತಿ ಆತ್ಮಹತ್ಯೆ ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿತ್ತು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಉಭಯಸದನಗಳಲ್ಲೂ ಅಹೋರಾತ್ರಿ ಹೋರಾಟ ನಡೆಸಿದ್ದವು. ಇದರಿಂದಾಗಿ ಕಲಾಪ ನಡೆದಿರಲಿಲ್ಲ. ವಿರೋಧ ಪಕ್ಷಗಳ ಆಗ್ರಹಕ್ಕೆ ಮಣಿದ ಜಾರ್ಜ್ ರಾಜೀನಾಮೆ ನೀಡಿದ್ದರು.
ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿತ್ತು. 2016ರ ಸೆಪ್ಟೆಂಬರ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ಸಿಐಡಿ ಜಾರ್ಜ್, ಮೊಹಂತಿ, ಪ್ರಸಾದ್‌ಗೆ ಕ್ಲೀನ್ ಚಿಟ್ ನೀಡಿತ್ತು. ಆನಂತರ ಜಾರ್ಜ್ ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಯಾದರು.
ಗಣಪತಿ ಅವರ ಮೊಬೈಲ್, ಕಂಪ್ಯೂಟರ್‌ನಲ್ಲಿದ್ದ ದಾಖಲೆಗಳನ್ನು ನಾಶ ಮಾಡಲಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ ಎಸ್ಎಲ್) ವರದಿ ಹೇಳಿತ್ತು. ಈ ವರದಿ ಕೈಸೇರುವ ಮುನ್ನವೇ ಸಿಐಡಿ ತನಿಖೆ ಪೂರ್ಣಗೊಳಿಸಿದ್ದನ್ನು ಮಾಧ್ಯಮಗಳ ವರದಿ ಬಯಲುಗೊಳಿಸಿತ್ತು.
‘ಜಾರ್ಜ್ ಅವರನ್ನು ರಕ್ಷಿಸಲು ಸರ್ಕಾರ ಸಿಐಡಿಯನ್ನು ದುರ್ಬಳಕೆ ಮಾಡಿಕೊಂಡಿದೆ. ಇದೇ ಕಾರಣಕ್ಕಾಗಿ ಎಫ್ಎಸ್ಎಲ್ ವರದಿ ಬರುವ ಮುನ್ನವೇ ಸಿಐಡಿ ಬಿ ರಿಪೋರ್ಟ್ ಸಲ್ಲಿಸಿದೆ ಎಂದು ಗಣಪತಿ ಕುಟುಂಬ ಮತ್ತು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದರು.
ಸುಪ್ರೀಂಕೋರ್ಟ್ ಆದೇಶ: ಕ್ಲೀನ್ ಚಿಟ್ ನೀಡಿದ ಸಿಐಡಿ ಕ್ರಮ ಪ್ರಶ್ನಿಸಿ ಗಣಪತಿ ಪುತ್ರ ನೇಹಲ್ ಗಣಪತಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್ ಮೂರು ತಿಂಗಳ ಒಳಗೆ ವರದಿ ಸಲ್ಲಿಸುವಂತೆ ಇದೇ ವರ್ಷದ ಸೆ.5ರಂದು ಸೂಚಿಸಿತ್ತು.
‘ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವ ಮುನ್ನವೇ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಹಾಗಾಗಿ ಪ್ರಕರಣದ ತನಿಖೆಯ ಅಗತ್ಯವಿದೆ’ ಎಂದು ಕೋರ್ಟ್ ಪ್ರತಿಪಾದಿಸಿತ್ತು.
ಸಿಬಿಐಗೆ ದಾಖಲೆ ಹಸ್ತಾಂತರಿಸಿದ ಸಿಐಡಿ
ಗಣಪತಿ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಡಿವೈಎಸ್ಪಿ ಶ್ರೀಧರ್ ಗುರುವಾರ ಚೆನ್ನೈಗೆ ತೆರಳಿ ಸಿಬಿಐ ಅಧಿಕಾರಿಗಳಿಗೆ ದಾಖಲೆಗಳನ್ನು ಹಸ್ತಾಂತರಿಸಿದರು.
ತನಿಖಾ ವರದಿ, ವೈದ್ಯಕೀಯ ದಾಖಲೆಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ದೋಷಾರೋಪ ಪಟ್ಟಿಯ ಪ್ರತಿ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಪೂರ್ತಿ ದಾಖಲೆಗಳನ್ನು ಸಿಬಿಐ ಸುಪರ್ದಿಗೆ ಒಪ್ಪಿಸಿದ್ದಾರೆ.
ಈ ಪ್ರಕರಣದ ಸಮಗ್ರ ದಾಖಲೆಗಳನ್ನು ಸಲ್ಲಿಸುವಂತೆ ಸಿಬಿಐ ಇದೇ 16ರಂದು ಸಿಐಡಿಗೆ ಪತ್ರ ಬರೆದಿತ್ತು.
* ಜಾರ್ಜ್ ಸಚಿವರಾಗಿ ಮುಂದುವರಿದರೆ ಸಾಕ್ಷ್ಯಗಳನ್ನು ನಾಶ ಪಡಿಸುವ ಸಾಧ್ಯತೆ ಇದೆ. ಜಾರ್ಜ್ ರಾಜೀನಾಮೆ ನೀಡದಿದ್ದರೆ, ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು
–ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
* ಎಫ್‌ಐಆರ್ ಪರಿಶೀಲಿಸಿದ ಬಳಿಕ ಪ್ರತಿಕ್ರಿಯೆ ನೀಡುವೆ. ಬಿಜೆಪಿ ಪ್ರತಿಭಟನೆಗೆ ಹೆದರುವುದಿಲ್ಲ
–ಸಿದ್ದರಾಮಯ್ಯ, ಮುಖ್ಯಮಂತ್ರಿ
* ಎಫ್‌ಐಆರ್ ದಾಖಲಾದ ಮಾತ್ರಕ್ಕೆ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಸಿಬಿಐ ತನಿಖೆ ಮುಗಿಯಲಿ ನೋಡೋಣ
–ಕೆ.ಜೆ. ಜಾರ್ಜ್, ಬೆಂಗಳೂರು ಅಭಿವೃದ್ಧಿ ಸಚಿವ
ಪ್ರಕರಣದ ಹಿನ್ನೆಲೆ:
2016ರ ಜುಲೈ 7ರಂದು ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿ ಮಡಿಕೇರಿಯ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಚಿವ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ, ಎ.ಎಂ. ಪ್ರಸಾದ್ ಅವರು ನನ್ನ ಸಾವಿಗೆ ಕಾರಣ ಎಂದು ಗಣಪತಿ ಅವರು ಸಾವಿಗೆ ಮುನ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಸೋಮವಾರಪೇಟೆ ತಾಲ್ಲೂಕಿನ ರಂಗಸಮುದ್ರದ ಗಣಪತಿ ಅವರು ಮಂಗಳೂರು ಐಜಿ ಕಚೇರಿಗೆ ವರ್ಗವಾಗಿದ್ದರು. ಅದಕ್ಕೂ ಮುನ್ನ ಬೆಂಗಳೂರಿನ ನಗರ ಅಪರಾಧ ದಾಖಲಾತಿ ಘಟಕದಲ್ಲಿ (ಸಿಸಿಆರ್‌ಬಿ) ಕೆಲಸ ಮಾಡುತ್ತಿದ್ದರು.