ಕರ್ನಾಟಕ

ಬೆಂಗಳೂರು: ಚಿತ್ರೋದ್ಯಮದ ಪ್ರಮುಖ ಕೇಂದ್ರ ‘ಬಾದಾಮಿ ಹೌಸ್’ ಇನ್ನು ನೆನಪು ಮಾತ್ರ!

Pinterest LinkedIn Tumblr


ಬೆಂಗಳೂರು: ನಗರಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಯ ಎದುರು ಇರುವ ಕಲ್ಲಿನ ಕಟ್ಟಡ ಬಾದಾಮಿ ಹೌಸ್ ಅಥವಾ ಜಾರ್ಜ್ ಓಕ್ಸ್ ಕಟ್ಟಡ ಎಂದು ಜನರಿಗೆ ಚಿರಪರಿಚಿತ. ಕಳೆದ ಹಲವು ದಶಕಗಳವರೆಗೆ ಇದು ಕನ್ನಡ ಚಲನಚಿತ್ರ ಉದ್ಯಮ ಚಟುವಟಿಕೆಗಳಿಗೆ ಕೇಂದ್ರ ಭಾಗವಾಗಿತ್ತು. ಇದು ಖಾಸಗಿ ಆಸ್ತಿಯಾಗಿರುವುದರಿಂದ ಸದ್ಯದಲ್ಲಿಯೇ ಇದನ್ನು ಕೆಡವಲಾಗುತ್ತಿದೆ.

ಆದರೆ ಬೆಂಗಳೂರಿಗರು ಮತ್ತು ಚಿತ್ರೋದ್ಯಮಿಗಳ ಹೃದಯದಲ್ಲಿ ಬಾದಾಮಿ ಹೌಸ್ ಬಗ್ಗೆ ಯಾವತ್ತಿಗೂ ವಿಶೇಷ ಸ್ಥಾನವಿದೆ. ಸ್ಯಾಂಡಲ್ ವುಡ್ ನ ಪ್ರಮುಖ ಕಲಾವಿದರಿಗೆ ಈ ಬಾದಾಮಿ ಹೌಸ್ ಪ್ರಮುಖ ತಾಣವಾಗಿತ್ತು. ಅನೇಕ ಚಿತ್ರಗಳ ಚರ್ಚೆ, ಪ್ರದರ್ಶನಕ್ಕೆ ಇದು ವೇದಿಕೆಯಾಗಿತ್ತು.

ಇತಿಹಾಸ ಪುಸ್ತಕದಲ್ಲಿ ಆಂಗ್ಲೋ-ಮೈಸೂರು ಯುದ್ಧ ಪ್ರಸ್ತಾಪ: ಶತಮಾನ ಹಳೆಯ ಈ ಕಟ್ಟಡದ ಬಗ್ಗೆ ನಗರದ ಇತಿಹಾಸ ತಜ್ಞ ಅರುಣ್ ಪ್ರಸಾದ್ ಹೇಳುವುದು ಹೀಗೆ: ಮೂರನೇ ಆಂಗ್ಲ-ಮೈಸೂರು ಯುದ್ಧ ಈ ಸ್ಥಳದಲ್ಲಿ ನಡೆಯಿತು ಎಂದು ಹೇಳಲಾಗುತ್ತದೆಯಾದರೂ ವಾಸ್ತವಾಂಶ ಬೇರೆಯಾಗಿದೆ. ಅವೆನ್ಯೂ ರಸ್ತೆ ಪ್ರವೇಶದ್ವಾರದ ಹತ್ತಿರ ಯುದ್ಧ ನಡೆಯಿತು ಎಂದು ಹೇಳುತ್ತದೆ. ಕೆಂಪೇಗೌಡ ನಿರ್ಮಿಸಿದ ಬೆಂಗಳೂರು ಕೋಟೆ, ಅಲಸೂರು ಗೇಟ್ ಮೂಲಕ ಲಾರ್ಡ್ ಕಾರ್ನಿವಾಲ ನೇತೃತ್ವದ ಬ್ರಿಟಿಷ್ ಸೇನೆ ಟಿಪ್ಪು ಸುಲ್ತಾನ್ ವಿರುದ್ಧ ಹೋರಾಡಿತು ಎಂದು ಇತಿಹಾಸದ ಪುಸ್ತಕಗಳು ಹೇಳುತ್ತವೆ. ಕೋಟೆ ದ್ವಾರ ಬಹಳ ಮುಖ್ಯವಾಗಿದ್ದು ಇದನ್ನು 1980ರಲ್ಲಿ ಕೆಡವಿ ಹಾಕಲಾಯಿತು.

ಬ್ರಿಟಿಷರು ಮತ್ತು ಮೈಸೂರು ಸೇನೆ 5ದಿನಗಳ ಕಾಲ ತೀವ್ರ ಯುದ್ಧ ಮಾಡಿದವು. ಇಲ್ಲಿ ಕೆಂಪೇಗೌಡ ಕೋಟೆ ಅವಶೇಷಗಳು ಇಲ್ಲದಿದ್ದರೂ ಕೂಡ ಇದನ್ನು ನಾಶಪಡಿಸಿರುವ ಸಾಧ್ಯತೆಯೂ ಇದೆ. ಈಗ ಬಾದಾಮಿ ಹೌಸ್ ಇರುವ ಕಟ್ಟಡದ ಮಾಲಿಕರು ಉದ್ಯಮಿ ಜಾರ್ಜ್ ಓಕ್ಸ್ ಆಗಿದ್ದರು. ಆಟೊಮೊಬೈಲ್ ಉದ್ಯಮ ನೆಡೆಸುತ್ತಿದ್ದ ಇವರು 1950ರಲ್ಲಿ ಇಲ್ಲಿ ಉದ್ಯಮ ಬಿಟ್ಟು ಹೋಗಿದ್ದರು. ಆ ಸಮಯದಲ್ಲಿ ಇಲ್ಲಿ ಯುನೈಟೆಡ್ ಸ್ಟೇಟ್ಸ್ ಇನ್ಫಾರ್ಮೇಶನ್ ಸರ್ವಿಸ್ ನ ಗ್ರಂಥಾಲಯವಿದ್ದಿತು. ಪತ್ರಿಕೆ, ಸಾಹಿತ್ಯಗಳಿಗೆ ಸಂಬಂಧಪಟ್ಟ ಚರ್ಚೆ, ಕಾರ್ಯಕ್ರಮಗಳು ನಡೆಯುತ್ತಿದ್ದವು.

ನಂತರ ಈ ಕಟ್ಟಡದ ಮಾಲಿಕತ್ವ ಸರ್ವೋತ್ತಮ ಬಾದಾಮಿ ಅವರ ಪಾಲಾಯಿತು. ಇವರು ಭಾರತೀಯ ಚಿತ್ರೋದ್ಯಮದಲ್ಲಿ ಹೆಸರು ಮಾಡಿದವರು. ಸೌಂಡ್ ರೆಕಾರ್ಡಿಸ್ಟ್ ಆಗಿದ್ದ ಇವರು ನಂತರ ನಿರ್ಮಾಪಕರಾಗಿ, ನಿರ್ದೇಶಕರಾಗಿಯೂ ಹೆಸರು ಮಾಡಿದ್ದರು. ಚಿತ್ರೋದ್ಯಮದಿಂದ 1952ರಲ್ಲಿ ನಿವೃತ್ತರಾದರು.
ನಂತರ ಬಾದಾಮಿಯವರು ಈ ಕಟ್ಟಡವನ್ನು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಾರಾಟ ಮಾಡಿದರು. ನಂತರ ಇಲ್ಲಿ ಸಿನಿಮಾಗಳಿಗೆ ಸಂಬಂಧಪಟ್ಟ ಚಟುವಟಿಕೆಗಳು ನಡೆಯುತ್ತಿದ್ದವು. ಕಟ್ಟಡದ ಮಾಲಿಕರು ಮತ್ತು ಕರ್ನಾಟಕ ಸರ್ಕಾರದ ನಡುವೆ ತೀವ್ರ ಕಾನೂನಿನ ಹೋರಾಟದ ನಂತರ ಇದೀಗ ಮಾಲಿಕರ ಪರವಾಗಿ ಹೈಕೋರ್ಟ್ ತೀರ್ಪು ನೀಡಿದೆ.

80ರ ದಶಕದಲ್ಲಿ ಬಾದಾಮಿ ಹೌಸ್ ನೊಳಗಿದ್ದ ಪ್ರಿಯದರ್ಶಿನಿ ಪ್ರಿವ್ಯು ಥಿಯೇಟರ್ ಸಿನಿಮಾಗಳ ಪ್ರದರ್ಶನದ ಸೌಲಭ್ಯ ಹೊಂದಿತ್ತು. ಕೇಂದ್ರ ಚಲನಚಿತ್ರ ಪ್ರಮಾಣ ಮಂಡಳಿಯ ಸದಸ್ಯರು ಇಲ್ಲಿ ಸಿನಿಮಾಗಳ ಪೂರ್ವ ವೀಕ್ಷಣೆ ಮಾಡುತ್ತಿದ್ದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿನಿಮಾ ಘಟಕ ಪ್ರಸ್ತುತ ಇರುವುದು ಇದೇ ಬಾದಾಮಿ ಹೌಸ್ ನಲ್ಲಿ. ಇದೀಗ ಈ ಕಟ್ಟಡವನ್ನು ಕೆಡವಲು ಮುಂದಾಗಿರುವುದರಿಂದ ಈ ಇಲಾಖೆಗಳು ನಂದಿನಿ ಲೇ ಔಟ್ ನಲ್ಲಿರುವ ಹೊಸ ಕಚೇರಿಗೆ ವರ್ಗಾವಣೆಯಾಗಲು ಮುಂದಾಗಿವೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿದ ಕರ್ನಾಟಕ ಚಿತ್ರಕಲಾ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು, ಕಳೆದ ಕೆಲ ವರ್ಷಗಳಿಂದ ಥಿಯೇಟರ್ ನ್ನು ಉಪಯೋಗಿಸುತ್ತಿರಲಿಲ್ಲ. ಡಿಜಿಟಲೀಕರಣವಾದ ನಂತರ ಚಿತ್ರದ ಪ್ರಿಂಟ್ಸ್ ಗಳನ್ನು ನೋಡುತ್ತಿದ್ದುದೆ ಇದೇ ಬಾದಾಮಿ ಹೌಸ್ ನಲ್ಲಿ. ಕನ್ನಡ ಚಲನಚಿತ್ರದ ಸಂಸ್ಕೃತಿಯೊಂದನ್ನು ಖಂಡಿತಾ ಕಳೆದುಕೊಳ್ಳುತ್ತೇವೆ. ಬಾದಾಮಿ ಹೌಸ್ ನೊಂದಿಗೆ ಭಾವನಾತ್ಮಕ ಸಂಬಂಧ ಇರಿಸಿಕೊಂಡಿದ್ದೇವೆ ಎನ್ನುತ್ತಾರೆ.

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಈ ಕಟ್ಟಡ ಚಿತ್ರ ಪ್ರದರ್ಶನಕ್ಕೆ ಮಾತ್ರವಲ್ಲದೆ ಚಿತ್ರಗಳಿಗೆ ಸಂಬಂಧಪಟ್ಟ ಕಾರ್ಯಾಗಾರಗಳು, ಸೆಮಿನಾರುಗಳಿಗೆ ಕೂಡ ಜಾಗವಾಗಿತ್ತು. ಇದು ಕಲೆಗೆ ಸೇತುವೆಯಾಗಿತ್ತು. ಅಲ್ಲದೆ ಕಡಿಮೆ ಬಜೆಟ್ ನ ಚಿತ್ರ ತಯಾರಕರ ಚಿತ್ರಗಳ ಪ್ರದರ್ಶನಗಳಿಗೆ ವೇದಿಕೆ ಕೂಡ ಆಗಿತ್ತು ಎನ್ನುತ್ತಾರೆ.

Comments are closed.