ಕರ್ನಾಟಕ

ಕಾಲೇಜು ಬಿಟ್ಟು ಕೋಟ್ಯಧಿಪತಿಗಳಾದ 7 ಭಾರತೀಯರು

Pinterest LinkedIn Tumblr


ಬೆಂಗಳೂರು(ಜ. 18): ರ್ಯಾಂಕ್ ಬರದೇ ಇದ್ದರೆ, ಡಿಗ್ರಿಗಳನ್ನು ಪಡೆಯದೇ ಇದ್ದರೆ ಲೈಫೇ ಹೋಯ್ತು ಎಂದು ವಿದ್ಯಾರ್ಥಿಗಳ ಮೇಲೆ ಅಪರಿಮಿತ ಒತ್ತಡ ಹೇರುವ ಪೋಷಕರು ಬಹಳಷ್ಟು ನಮ್ಮ ನಡುವಿದ್ದಾರೆ. ಆದರೆ, ಡಿಗ್ರಿಗಳು, ಅಂಕಗಳಷ್ಟೇ ಜೀವನ ಅಲ್ಲ. ಅವುಗಳಿಂದಷ್ಟೇ ವೃತ್ತಿಯಲ್ಲಿ ಮುಂದುವರಿಯಲು ಸಾಧ್ಯ ಎಂಬಂತೇನಲ್ಲ. ಸ್ಕೂಲು, ಕಾಲೇಜಿಗೆ ಗುಡ್’ಬೈ ಹೇಳಿದ ಸಾಕಷ್ಟು ಜನರು ಜೀವನದಲ್ಲಿ ಬಹಳ ಯಶಸ್ಸು ಪಡೆದಿದ್ದಾರೆ. ಐನ್’ಸ್ಟೀನ್, ನ್ಯೂಟನ್, ಫ್ಯಾರಡೇಯಂತಹ ವಿಜ್ಞಾನಿಗಳು ಶಾಲಾ ಶಿಕ್ಷಣವಿಲ್ಲದೇ ಉನ್ನತ ಸಾಧನೆ ಮಾಡಿದ್ದಾರೆ. ಭಾರತದಲ್ಲೂ ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಕೆಲ ಸ್ಯಾಂಪಲ್’ಗಳು ಇಲ್ಲಿವೆ.
1) ಮುಖೇಶ್ ಅಂಬಾನಿ: ಕ್ಯಾಲಿಫೋರ್ನಿಯಾದ ಪ್ರತಿಷ್ಠಿತ ಸ್ಟ್ಯಾನ್’ಫೋರ್ಡ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದ ಮುಕೇಶ್ ಅಂಬಾನಿ ಅದೇಕೋ ಶಿಕ್ಷಣ ಪೂರ್ಣ ಮಾಡಲಿಲ್ಲ. ಅಪ್ಪ ಧೀರೂಭಾಯಿ ಅಂಬಾನಿಯವರ ಬೃಹತ್ ವ್ಯವಹಾರಗಳನ್ನು ನೋಡಿಕೊಳ್ಳಲು ಕಾಲೇಜ್’ಗೆ ಗುಡ್’ಬೈ ಹೇಳಿದರೆನ್ನಲಾಗಿದೆ. ಈಗ ಇವರು ಭಾರತದ ನಂಬರ್ ಒನ್ ಶ್ರೀಮಂತರೆನಿಸಿದ್ದಾರೆ.
2) ಅಜೀಮ್ ಪ್ರೇಮ್’ಜೀ: ಮುಖೇಶ್ ಅಂಬಾನಿಯಂತೆ ಅಜೀಮ್ ಪ್ರೇಮ್’ಜೀ ಕೂಡ ಸ್ಟ್ಯಾನ್’ಫೋರ್ಡ್ ವಿವಿಯಲ್ಲಿ ಅರ್ಧಕ್ಕೇ ಕಾಲೇಜು ಬಿಟ್ಟು ಹೋಗಿದ್ದರು. 1996ರಲ್ಲಿ ಅವರ ತಂದೆಯ ಅಕಾಲಿಕ ಮರಣದಿಂದ ಅವರು ಹಾಗೆ ಮಾಡಿದ್ದರು. ಆಗ ಅವರಿಗೆ ವಯಸ್ಸು ಕೇವಲ 21. ಅಪ್ಪ ನಡೆಸುತ್ತಿದ್ದ ವಿಪ್ರೋ ಸಂಸ್ಥೆಯ ಛೇರ್ಮನ್ ಹುದ್ದೆಯನ್ನು ಆ ವಯಸ್ಸಿನಲ್ಲೇ ವಹಿಸಿಕೊಂಡರು. ಹೊಸ ಐಟಿ ಕಂಪನಿ ಕಟ್ಟಿ ಸೈ ಎನಿಸಿದರು. ಆ ಬಳಿಕ, 1999ರಲ್ಲಿ ಮತ್ತೆ ಸ್ಟಾನ್’ಫೋರ್ಡ್ ವಿವಿಗೆ ಹೋಗಿ ಶಿಕ್ಷಣ ಪೂರೈಸಿದರು.
3) ಡಾ. ಸುಭಾಷ್ ಚಂದ್ರ: ಇವರು 10ನೇ ತರಗತಿಯಿಂದಲೇ ಡ್ರಾಪೌಟ್ ಆದವರು. ಅಕ್ಕಿ ವ್ಯಾಪಾರದಲ್ಲಿ ತೊಡಗಿಸಿಕೊಂಡ ಇವರು ಮುಂದೆ ಝೀ ಎಂಬ ದೊಡ್ಡ ಮೀಡಿಯಾ ಸಂಸ್ಥೆ ಕಟ್ಟಿದರು. 2016ರಲ್ಲಿ ರಾಜ್ಯಸಭೆ ಮೂಲಕ ಸಂಸತ್ ಪ್ರವೇಶಿಸಿದರು.
4) ಗೌತಮ್ ಅದಾನಿ: ಎರಡನೇ ವರ್ಷದ ಬಿಕಾಂ ಓದುತ್ತಿದ್ದಾಗ ಅದಾನಿ ಕಾಲೇಜಿಗೆ ಬೈಬೈ ಹೇಳಿದರು. ಅಹ್ಮದಾಬಾದ್’ನಲ್ಲಿದ್ದ ಅಪ್ಪನ ಜವಳಿ ವ್ಯಾಪಾರವನ್ನು ನೋಡಿಕೊಳ್ಳುವುದು ಬಿಟ್ಟು ಮುಂಬೈ ಹೋಗಿ ಮಹೀಂದ್ರ ಬ್ರೋಸ್ ಎಂಬ ವಜ್ರ ವ್ಯಾಪಾರ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಬಳಿಕ, ತಮ್ಮದೇ ಡೈಮಂಡ್ ಬ್ರೋಕರೇಜ್ ಕಂಪನಿ ಸ್ಥಾಪಿಸಿದರು. ಈಗ ಇವರ ವ್ಯಾಪಾರ ಸಾಮ್ರಾಜ್ಯ ಸಾಕಷ್ಟು ವಿಸ್ತರಣೆಯಾಗಿ ಭಾರತದ ಅತ್ಯಂತ ಶಕ್ತಿಶಾಲಿ ಉದ್ಯಮಿಗಳಲ್ಲೊಬ್ಬರೆನಿಸಿದ್ದಾರೆ.
5) ಮುಕೇಶ್ ಜಗತಿಯಾನಿ: ಲಂಡನ್’ನ ಪ್ರತಿಷ್ಠಿತ ಬ್ಯುಸಿನೆಸ್ ಸ್ಕೂಲ್’ನಲ್ಲಿ ಎಕನಾಮಿಕ್ಸ್ ಕಲಿಯಲು ಹೋದ ಜಗ್ತಿಯಾನಿ, ತಮ್ಮ ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟು ಸ್ವಂತ ವ್ಯಾಪಾರದ ದಾರಿ ಹಿಡಿದರು. ರೀಟೇಲ್ ವ್ಯಾಪಾರದ “ಲ್ಯಾಂಡ್ಮಾರ್ಕ್ ಗ್ರೂಪ್” ಅನ್ನು ದುಬೈನಲ್ಲಿ ಸ್ಥಾಪನೆ ಮಾಡಿದರು. ಇವರ 600ಕ್ಕೂ ಹೆಚ್ಚು ಲ್ಯಾಂಡ್’ಮಾರ್ಕ್ ರೀಟೇಲ್ ಮಳಿಗೆಗಳು ಭಾರತ, ಚೀನಾ, ಪಾಕಿಸ್ತಾನ ಮತ್ತು ಸ್ಪೇನ್ ದೇಶಗಳಲ್ಲಿ ಇವೆ.
6) ಪಿಎನ್’ಸಿ ಮೆನನ್: ಇವರು ಹತ್ತನೇ ವಯಸ್ಸಿನಲ್ಲಿದ್ದಾಗ ಅಪ್ಪ ತೀರಿಕೊಂಡರು. ಕಷ್ಟಪಟ್ಟು ಓದಿದ ಇವರು ಕೇರಳದ ತ್ರಿಶೂರ್’ನಲ್ಲಿ ಶ್ರೀ ಕೇರಳ ವರ್ಮಾ ಕಾಲೇಜನ್ನು ಬಿಟ್ಟು ಇಂಟೀರಿಯರ್ ಡೆಕೋರೇಶನ್ ಉದ್ಯಮಕ್ಕೆ ಅಡಿ ಇಟ್ಟರು. ಈಗ ಬೆಂಗಳೂರಿನಲ್ಲಿ ಖ್ಯಾತವಾಗಿರುವ ಶೋಭಾ ಡೆವಲಪರ್ಸ್ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಯ ಮಾಲೀಕ ಇವರೆಯೇ.
7) ವಿನೋದ್ ಗೋಯೆಂಕಾ: ಇವರೂ ಕೂಡ ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಸ್ವಂತ ಬ್ಯುಸಿನೆಸ್ ಹಾದಿ ಹಿಡಿದರು. ಡಿಬಿ ರಿಯಾಲ್ಟಿ ಎಂಬ ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಯನ್ನು ಇವರು ಕಟ್ಟಿ ಬೆಳೆಸಿದ್ದಾರೆ.

Comments are closed.