ಕರ್ನಾಟಕ

ಹೂವಿನಿಂದ ಅರಳಿದ ಗೋಲ್ ಗುಂಬಜ್: ಗಣರಾಜ್ಯೋತ್ಸವದ ಅಂಗವಾಗಿ 20 ರಿಂದ 29 ರವರೆಗೆ ಫಲಪುಷ್ಪ ಪ್ರದರ್ಶನ

Pinterest LinkedIn Tumblr


ಬೆಂಗಳೂರು, ಜ. ೧೮- “ಜಗತ್ಪ್ರಸಿದ್ಧ ಬಿಜಾಪುರದ ಗೋಲ್‌ಗುಂಬಜ್, ಹೂವಿನಿಂದ ಅರಳುವ ತರೆವಾರಿ ಪಾತರಗಿತ್ತಿಗಳು, 35 ಸಾವಿರಕ್ಕೂ ಅಧಿಕ ಹೂಗಳಿಂದ ಅರಳುವ ಬೃಹತ್ ಮನೆ, ರಂಗುರಂಗಿನ ಸೇವಂತಿ ಹೂಗಳ ಕಾರುಬಾರು, ಹೂವಿನ ಪಿರಮಿಡ್‌ಗಳು, ತೂಗುವ ಹೂಗಳ ಬಾಗುವ ಚೆಲುವು”
ಗಣರಾಜ್ಯೋತ್ಸವದ ಅಂಗವಾಗಿ ನಗರದ ಲಾಲ್‌ಬಾಗ್‌ನಲ್ಲಿ ಇದೇ 20 ರಿಂದ 29 ರವರೆಗೆ ಹಮ್ಮಿಕೊಂಡಿರುವ 205ನೇ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳು.
ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ತೋಟಗಾರಿಕಾ ಇಲಾಖೆಯ ಆಯುಕ್ತ ಪ್ರಭಾಶ್ ಚಂದ್ರರೇ, ತೋಟಗಾರಿಕಾ ಪಿತಾಮಹ ಡಾ. ಎಂ.ಎಚ್. ಮರಿಗೌಡರ ಜನ್ಮ ಶತಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಹಲವು ವೈಶಿಷ್ಟ್ಯಗಳು ಈ ಬಾರಿ ಗಮನ ಸೆಳೆಯಲಿವೆ. ಸಿಕ್ಕಿಂ ರಾಜ್ಯದ ಸಿಡಿಡಿಎಂ ಆರ್ಕಿಡ್ ಪುಷ್ಪಗಳ ಸಂಭ್ರಮ, ಶೀತವಲಯದ ಹೂಗಳ ಪ್ರದರ್ಶನ, ಸೀಸನ್‌ಗಳಲ್ಲಿ ಬರುವ ಹೂಗಳು ಸೇರಿದಂತೆ ಹೊಸ ಹೊಸ ಸ್ಥಳೀಯ ಹೂಗಳ ಅಲಂಕಾರ ಫಲಪುಷ್ಪ ಪ್ರದರ್ಶನದಲ್ಲಿ ಸಾರ್ವಜನಿಕರ ಆಕರ್ಷಣೆಗೆ ಕೇಂದ್ರವಾಗಲಿದೆ ಎಂದು ಹೇಳಿದರು.
ಗಾಜಿನ ಮನೆಯ ಹೊರಾಂಗಣದ ಹುಲ್ಲುಹಾಸಿನ ಮೇಲೆ ನಿರ್ಮಿಸಲಾಗಿರುವ ಹೂವಿನಿಂದ ರೂಪಗೊಂಡ ಬೃಹತ್ ಜಲಪಾತ, ಹೂವಿನ ನವಿಲು, ತೂಗುವ ಪುಷ್ಪಗಳು, ಫಲಭರಿತ ತರಕಾರಿಗಳು, ಸಸ್ಯ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸಲಿವೆ. ಇದಕ್ಕಾಗಿ ತೋಟಗಾರಿಕಾ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಹೇಳಿದರು.
ಜ. 21 ರಿಂದ 29 ರ ವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಸಾರ್ಜವಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ 21, 22,26, 28 ಮತ್ತು 29 ರಂದು ಹೊರತುಪಡಿಸಿ ಖಾಸಗಿ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ಪ್ರದರ್ಶನಕ್ಕೆ ಉಚಿತ ಅವಕಾಶ ಕಲ್ಪಿಸಲಾಗಿದೆ ಎಂದರು.
ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 50, ರಜಾ ದಿನಗಳಲ್ಲಿ 60 ರೂ., 12 ವರ್ಷದೊಳಗಿನ ಮಕ್ಕಳಿಗೆ 20 ರೂ. ಟಿಕೆಟ್ ದರ ನಿಗದಿ ಮಾಡಿದ್ದು, ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡುವ ನಿರೀಕ್ಷೆಗಳಿವೆ ಎಂದು ಹೇಳಿದರು.
ಫಲಪುಷ್ಪ ಪ್ರದರ್ಶನಕ್ಕೆ ಪ್ರವಾಸಿಗರು, ಸ್ಥಳೀಯರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. 35 ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಆಂಬುಲೆನ್ಸ್ ಸೇವೆ, ಅಗ್ನಿಶಾಮಕ ಸೇವೆ, ನಾಯಿ, ಜೇನುನೊಣ ಹಾವಳಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಫಲಪುಷ್ಪ ಪ್ರದರ್ಶನದ ವೇಳೆ ಯಾವುದೇ ತೊಂದರೆ, ಅವಘಡಗಳು ಸಂಭವಿಸದಂತೆ ನೋಡಿಕೊಳ್ಳಲು ಲಾಲ್‌ಬಾಗ್‌ನ ನಾಲ್ಕು ಪ್ರವೇಶ ದ್ವಾರಗಳಲ್ಲಿ, ಗಾಜಿನ ಮನೆಯಲ್ಲಿ ಹಾಗೂ ಆಯ್ದ ಪ್ರದೇಶಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ಇದರ ಜತೆಗೆ ಪೊಲೀಸರು ಎಲ್ಲೆಡೆ ಅಗತ್ಯ ಭದ್ರತೆ ಒದಗಿಸಲಿದ್ದಾರೆ ಎಂದು ಹೇಳಿದರು.
ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಈ ಫಲಪುಷ್ಪ ಪ್ರದರ್ಶನದ ವೀಕ್ಷಣೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜ.20 ರಂದು ಬೆಳಗ್ಗೆ 11 ಗಂಟೆಗೆ ತೋಟಗಾರಿಕೆ ಮತ್ತು ಕೃಷಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸುವರು. ಹಲವು ಗಣ್ಯರು ಈ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪ್ರದರ್ಶದ ಅಂಗವಾಗಿ ಹೂ ತೋಟಗಳು, ಇಕೆಬನ, ತರಕಾರಿ ಕೆತ್ತನೆ, ತಾರಸಿ ತೋಟ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ವಿಜೇತರಾದವರಿಗೆ 25 ರಂದು ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಕಲಾ ಉದ್ಯಾನಕಲಾ ಸಂಘದ ಉಪಾಧ್ಯಕ್ಷ ಶ್ರೀಕಂಠಯ್ಯ, ಡಿಸಿಪಿ ಶರಣಪ್ಪ ಸೇರಿದಂತೆ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

* ಗಣರಾಜ್ಯೋತ್ಸವದ ಅಂಗವಾಗಿ 20 ರಿಂದ 29 ರವರೆಗೆ ಫಲಪುಷ್ಪ ಪ್ರದರ್ಶನ.
* ಲಾಲ್‌ಬಾಗ್‌ನಲ್ಲಿ 10 ದಿನಗಳ ಪುಷ್ಪ ಹಬ್ಬಕ್ಕೆ ಸಕಲ ಸಿದ್ಧತೆ.
* ಈ ಬಾರಿ ಗೋಲ್‌ಗುಂಬಸ್, ಅರಳುವ ಬೃಹತ್ ಮನೆ, ಹೂವಿನ ಪಿರಮಿಡ್, ಪ್ರಮುಖ ಆಕರ್ಷಣೆ.
* ಬೆಳಗ್ಗೆ 9ರಿಂದ ಸಂಜೆ 6 ಗಂಟವರೆಗೆ ಪ್ರದರ್ಶನಕ್ಕೆ ಅವಕಾಶ.
* ಪ್ರದರ್ಶನ ವೀಕ್ಷಣೆಗೆ ಬರುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ.
* ಈ ಬಾರಿ ತೋಟಗಾರಿಕಾ ಸ್ಪರ್ಧೆಯಲ್ಲಿ 822, ಇಕೆಬನ ತರಕಾರಿ ಸ್ಪರ್ಧೆಯಲ್ಲಿ 203, ಗಾಜಿನ ಮನೆಯಲ್ಲಿ 755 ಮಂದಿ ಪ್ರದರ್ಶನದಲ್ಲಿ ಭಾಗಿ.
* ಐದು ದಿನಗಳ ಕಾಲ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ.
* ಭದ್ರತೆಗಾಗಿ ಸಿಸಿ ಟಿವಿ ಅಳವಡಿಕೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ.

Comments are closed.