ಕರಾವಳಿ

ಕೊಂಕಣಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪುರಸ್ಕೃತರ ಪಟ್ಟಿ ಪ್ರಕಟ

Pinterest LinkedIn Tumblr

ಮಂಗಳೂರು, ಜನವರಿ.18: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ 2016ನೆ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪುರಸ್ಕೃತರ ಪಟ್ಟಿ ಬುಧವಾರ ಪ್ರಕಟಗೊಂಡಿತ್ತು. ಬುಧವಾರ ನಗರದ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ಅವರು ಪುರಸ್ಕೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಬಳಿಕ ಸುದ್ಧಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಗೌರವ ಪ್ರಶಸ್ತಿಗೆ ಮಂಗಳೂರಿನ ಸಿರಿಲ್ ಜಿ. ಸಿಕ್ವೇರಾ (ಸಾಹಿತ್ಯ), ಶಿರಸಿಯ ವಾಸುದೇವ ಬಾಲಕೃಷ್ಣ ಶಾನಭಾಗ್ (ಕಲೆ), ಯಲ್ಲಾಪುರದ ಕ್ಲಾರಾ ಅಂತೋನ್ ಸಿದ್ದಿ (ಜಾನಪದ) ಆಯ್ಕೆಯಾಗಿದ್ದಾರೆ. ಪುಸ್ತಕ ಬಹುಮಾನಕ್ಕೆ ಕಾಸರಗೋಡು ಚಿನ್ನಾ (ಭಾಷಾಂತರ ವಿಭಾಗ- ತೀಸ್ ಕಾಣಿಯೊ), ಉಮೇಶ್ ನಾಯಕ್ ಕೆ. (ಕವನ ವಿಭಾಗ- ಶ್ರೀನಿವಾಸ ಕಲ್ಯಾಣ), ಆಗ್ನೇಸಿಯಾ ಫ್ರೇಂಕ್ ಬಿ.ಎಸ್. (ಅಧ್ಯಯನ ವಿಭಾಗ- ಅಮೃತ್ ತುಜ್ಯಾ ಹಾತಿಂ) ಆಯ್ಕೆಯಾಗಿದ್ದಾರೆ. ಗೌರವ ಪ್ರಶಸ್ತಿಗೆ ತಲಾ 50 ಸಾವಿರ ರೂ.ಮತ್ತು ಪುಸ್ತಕ ಬಹುಮಾನಕ್ಕೆ ತಲಾ 25 ಸಾವಿರ ರೂ.ವನ್ನು ನೀಡಲಾಗುತ್ತದೆ.ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಫೆ.12ರಂದು ಸಂಜೆ 6 ಗಂಟೆಗೆ ನಗರದ ಪುರಭವನದಲ್ಲಿ ನಡೆಯಲಿದೆ. ಮುಖ್ಯಯಂತ್ರಿ ಸಿದ್ದರಾಮಯ್ಯ ಗೌರವ ಪ್ರಶಸ್ತಿಯನ್ನೂ, ಸಚಿವೆ ಉಮಾಶ್ರೀ ಪುಸ್ತಕ ಪುರಸ್ಕಾರವನ್ನೂ ಪ್ರದಾನ ಮಾಡಲಿದ್ದಾರೆ. ಅತಿಥಿಗಳಾಗಿ ಮಂಗಳೂರು ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ, ನಾಗಲ್ಯಾಂಡ್ ಮತ್ತು ತ್ರಿಪುರಾ ರಾಜ್ಯಪಾಲ ಪಿ.ಬಿ. ಆಚಾರ್ಯ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಕಾಡಮಿಯ ರಿಜಿಸ್ಟ್ರಾರ್ ಡಾ.ಬಿ.ದೇವದಾಸ ಪೈ, ಪಧಾಧಿಕಾರಿಗಳಾದ ಬಸ್ತಿ ವಾಮನ್ ಶೆಣೈ, ಗೀತಾ ಕಿಣಿ, ವಿಕ್ಟರ್ ಮಥಾಯಸ್ ಮುಂತಾದವರು ಉಪಸ್ಥಿತರಿದ್ದರು.

Comments are closed.