ಹುಬ್ಬಳ್ಳಿ(ಡಿ.19): ಜೆಡಿಎಸ್ ಪಕ್ಷದಲ್ಲಿ ಒಂದಿಷ್ಟು ಬದಲಾವಣೆಗಳಾಗಿದ್ರು ಸಹ ಮನಸ್ಥಾಪ ಮಾತ್ರ ಶಮನವಾಗಿಲ್ಲ. ಅಮಾನತುಗೊಂಡಿರುವ ಶಾಸಕ ಜಮೀರ್ ಅಹ್ಮದ್ ಹೆಚ್ ಡಿ ಕುಮಾರಸ್ವಾಮಿಗೆ ಟಾಂಗ್ ನೀಡಲು ಮುಂದಾಗಿದ್ದಾರೆ. ಜನವರಿ ಮೊದಲ ವಾರದಲ್ಲಿ ಅಲ್ಪಸಂಖ್ಯಾತ ಜಾಗೃತಿ ಸಮಾವೇಶ ನಡೆಸಲು ಹುಬ್ಬಳ್ಳಿಯನ್ನ ಆಯ್ಕೆ ಮಾಡಿದ್ದಾರೆ.
ಸದ್ಯದ ಮಟ್ಟಿಗಿನ ಕಾಂಗ್ರೆಸ್ ಆಡಳಿತ ರಾಜ್ಯದ ಜನತೆಗೆ ಹೇಸಿಗೆ ಹುಟ್ಟಿಸಿದೆ. ಇನ್ನೂ ಕೇಂದ್ರದಲ್ಲಿ ಮೋದಿ ಆಡಳಿತ ಜನ ಪ್ರೀತಿಗೆ ಪಾತ್ರವಾಗಿದ್ದರೂ ರಾಜ್ಯದಲ್ಲಿ ಹಿಂದಿನ ಬಿಜೆಪಿ ಆಡಳಿತವನ್ನ ಜನರೇ ತಿರಸ್ಕರಿಸಿದ್ದಾರೆ. ಇದೇ ಒಳ್ಳೆ ಸಮಯ ಎಂದುಕೊಂಡ ಜೆಡಿಎಸ್ ಮುಂಬರುವ ವಿಧಾನಸಭಾ ಚುನಾವಣೆ ಗೆಲುವಿಗೆ ಈಗಾಗಲೇ ಸಿದ್ಧತೆ ನಡೆಸಿದೆ. ಅದರಲ್ಲೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ಉತ್ತರ ಕರ್ನಾಟಕದತ್ತ ಚಿತ್ತಹರಿಸಿ, ಅಲ್ಲಿಯೇ ವಾಸ್ತವ್ಯಕ್ಕೆ ಹೊಸ ಮನೆಯನ್ನೇ ಮಾಡಿಕೊಂಡಿದ್ದಾರೆ. ಆದರೆ ಈಗ ಶಾಸಕ ಜಮೀರ್ ಅಂಡ್ ಟೀಂ ಉತ್ತರ ಕರ್ನಾಟಕದಲ್ಲಿ ಎಚ್’ಡಿಕೆಯವರಿಗೆ ಟಾಂಗ್ ನೀಡಲು ಮುಂದಾಗಿದೆ. ಹುಬ್ಬಳ್ಳಿಯಲ್ಲಿ ಅಲ್ಪಸಂಖ್ಯಾತ ಜಾಗ್ರತಿ ಸಮಾವೇಶ ನಡೆಸಿ ಟಾಂಗ್ ಕೊಡಲು ಹೊರಟಿದೆ. ಇದಕ್ಕೆ ಕಾರಣ ಏನು ಗೊತ್ತಾ?
ಅವತ್ತು ಜೆಡಿಎಸ್ನಿಂದ ಅಮಾನತಾದ 8 ಮಂದಿಯಲ್ಲಿ ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ಮೇಲೆ ಮಾತ್ರ ಎಚ್ಡಿಕೆ ಅವ್ರಿಗೆ ಮೃದು ಧೋರಣೆ ಯಾಕೆ. ನಾವೆಲ್ಲ ಏನ್ಮಾಡಿದ್ದೇವೆ. ನಮ್ಮನ್ನ ಆಗ ಬಳಸಿಕೊಂಡು ಈಗ ಕೈಬಿಡ್ತಾರೆ. ನಮ್ಮ ಅಲ್ಪಸಂಖ್ಯಾತರಲ್ಲಿ ಅರಿವು ಮೂಡಿಸಲು. ನಮ್ಮಲ್ಲಿ ಒಗ್ಗಟ್ಟು ಮೂಡಿಸಲೆಂದೇ ಈ ಸಮಾವೇಶ ಎನ್ನುತ್ತಿದ್ದಾರೆ ಶಾಸಕ ಜಮೀರ್ ಅಹಮದ್
ಜನವರಿ ಮೊದಲ ವಾರದಲ್ಲಿ ಸಮಾವೇಶಕ್ಕೆ ನಿರ್ಧರಿಸಿದ್ದು, ಹುಬ್ಬಳ್ಳಿಗೆ ತೆರಳಿ ಪರಿಶೀಲನೆ ನಡೆಸಿದ್ದೂ ಆಗಿದೆ. ಜನವರಿ 5 ರಂದು ಈ ಕುರಿತು ಅಂತಿಮ ಸಭೆ ನಡೆಯಲಿದೆ. ಇನ್ನೂ ಸಮಾವೇಶದಲ್ಲಿ ಚಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ ಸೇರಿದಂತೆ 7 ಶಾಸಕರು ಭಾಗಿಯಾಗ್ತಿದ್ದಾರೆ.. ಅಲ್ಲಿಗೆ ಉತ್ತರ ಕರ್ನಾಟಕದಲ್ಲಿ ಭದ್ರ ಕೋಟೆ ತೆರೆಯಲು ಹೊರಟ ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ಸರಿಯಾಗೇ ಟಾಂಗ್ ಕೊಡಲು ಪ್ಲಾನ್ ಮಾಡಿದ್ದಾರೆ ಎನ್ನುವುದು ಖಚಿತ. ಇದಕ್ಕೆ ಎಚ್ಡಿಕೆ ನಿರ್ಧಾರವೇನು ಎನ್ನುವುದು ಕುತೂಹಲ ಮೂಡಿಸಿದೆ.