ಬೆಂಗಳೂರು, ಡಿ. ೫- ಬಿಬಿಎಂಪಿ ಕೇಂದ್ರ ಕಛೇರಿ ಸಮೀಪದಲ್ಲೇ ಇರುವ ದಾಸಪ್ಪ ಆಸ್ಪತ್ರೆಯಲ್ಲಿ ಗೈರು ಹಾಜರಾದ ವೈದ್ಯರು ಮತ್ತು ನರ್ಸ್‌ಗಳ ವೇತನವನ್ನು ಕಡಿತಗೊಳಿಸಬೇಕು ಹಾಗೂ ಆಸ್ಪತ್ರೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡದ ಇಬ್ಬರು ಆರೋಗ್ಯಾಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಮೇಯರ್ ಪದ್ಮಾವತಿ ಆದೇಶಿಸಿದ್ದಾರೆ.
ಇಂದು ಮಧ್ಯಾಹ್ನ ದಾಸಪ್ಪ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಹಾಜರಾತಿ ಪುಸ್ತಕ ಪರಿಶೀಲಿಸಿದ ವೇಳೆ ಕೆಲ ವೈದ್ಯರು ಮತ್ತು ನರ್ಸ್‌ಗಳು ಕರ್ತವ್ಯಕ್ಕೆ ಗೈರು ಹಾಜರಾದದು ಕಂಡು ಬಂದಿತು. ಹಾಜರಾತಿ ಪುಸ್ತಕದಲ್ಲಿ ಮಾರ್ಕ್ ಮಾಡಿದ ಮೇಯರ್, ಗೈರು ಹಾಜರಾದವರಿಗೆ ಸಂಬಳವನ್ನು ಕಡಿತಗೊಳಿಸಬೇಕು ಎಂದು ಸೂಚಿಸಿದರು.
ದಾಸಪ್ಪ ಆಸ್ಪತ್ರೆ 24×7 ಸೇವೆಗೆ ಮೀಸಲಾಗಿದ್ದರೂ ಸಂಜೆವರೆಗೆ ಮಾತ್ರವೇ ಸೇವೆ ಸಲ್ಲಿಸುತ್ತಿರುವುದು ಮೇಯರ್ ಅವರ ಗಮನಕ್ಕೆ ಬಂದಿತು. ರಾತ್ರಿ ಪಾಳೆಯನ್ನು ರದ್ದುಪಡಿಸಿದ್ದಲ್ಲದೆ ಗರ್ಭೀಣಿಯರಿಗೆ ಮಡಿಲು ಹಾಗೂ ಜೆಎಸ್‌ಎಸ್ ಯೋಜನೆಗಳ ಬಗ್ಗೆ ಸೂಕ್ತ ಪ್ರಚಾರ ನೀಡದೆ ಇರುವುದು ಮೇಯರ್ ಅವರ ಗಮನಕ್ಕೆ ಬಂದಿತು.
ಗರ್ಭೀಣಿಯರಿಗೆ ಇರುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಮಡಿಲು ಸೇರಿದಂತೆ ಮತ್ತಿತರ ಕಾರ್ಯಕ್ರಮಗಳ ಬಗ್ಗೆ ಆಸ್ಪತ್ರೆಯಲ್ಲಿ ಬ್ಯಾನರ್ ಕಟ್ಟಬೇಕು ಹಾಗೂ ಕರಪತ್ರಗಳನ್ನು ಮುದ್ರಿಸಿ ಗರ್ಭೀಣಿಯರಿಗೆ ಹಂಚಬೇಕು ಎಂದು ಸೂಚನೆ ನೀಡಿದರು.
ದಾಸಪ್ಪ ಆಸ್ಪತ್ರೆಯ ಆವರಣದಲ್ಲಿರುವ ಆರೋಗ್ಯ ಕಛೇರಿಗಳಿಗೆ ಭೇಟಿ ನೀಡಿದಾಗ ಸ್ವಚ್ಛತೆ ಇಲ್ಲದಿರುವುದು ಹಾಗೂ ಶೌಚಾಲಯಗಳ ನಿರ್ವಹಣೆ ಸರಿ ಇಲ್ಲದಿರುವುದು ಕಂಡ ಮೇಯರ್, ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬಹುಪಯೋಗಿ ನಿರ್ವಹಣಾ ವಿಭಾಗದಿಂದ ಸ್ವಚ್ಛತೆ ಕಡೆಗೆ ಹೆಚ್ಚು ಗಮನ ನೀಡಬೇಕು. ಹಾಗೂ ಕಟ್ಟಡಗಳ ನಿರ್ವಹಣೆ ಕಾಪಾಡುವಂತೆ ಆರೋಗ್ಯಾಧಿಕಾರಿಗಳಿಗೆ ಆದೇಶಿಸಿದರು.
ಔಷಧ ಉಗ್ರಾಣಕ್ಕೂ ಭೇಟಿ ನೀಡಿ ಔಷಧಗಳ ಸಮರ್ಪಕ ವಿತರಣೆ ಬಗ್ಗೆ ಮೇಯರ್ ಪರಿಶೀಲಿಸಿದರು.
ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರಿಗೆ ಆರೋಗ್ಯ ಯೋಜನೆಯಡಿ ವಿಮೆ ಸೌಲಭ್ಯ ಮತ್ತಿತರರ ಯೋಜನೆಗಳು ನಿರೀಕ್ಷಿತ ಅವಧಿಯಲ್ಲಿ ಮುಟ್ಟಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.