ಕರ್ನಾಟಕ

ಸರ್ಕಾರಗಳು ಸಾಚಾರ್ ವರದಿ ಜಾರಿಗೊಳಿಸಲಿ: ಮುಸ್ಲಿಂ ಸಬಲೀಕರಣ ಸಮಾವೇಶದಲ್ಲಿ ರಾಜಿಂದರ್‌ ಸಾಚಾರ್

Pinterest LinkedIn Tumblr

leagueಬೆಂಗಳೂರು: ಸಾಚಾರ್‌ ಸಮಿತಿ ವರದಿಯನ್ನು ಜಾತ್ಯತೀತ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಾದರೂ ಜಾರಿಗೆ ತರಲಿ ಎಂದು ನವದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಾಜಿಂದರ್‌ ಸಾಚಾರ್‌ ಸಲಹೆ ನೀಡಿದರು.

ನಗರದ ಪುರಭವನದಲ್ಲಿ ಭಾನುವಾರ ಕರ್ನಾಟಕ ಮುಸ್ಲಿಂ ಸಮನ್ವಯ ಸಮಿತಿ ಏರ್ಪಡಿಸಿದ್ದ ‘ಮುಸ್ಲಿಂ ಸಬಲೀಕರಣ ಸಮಾವೇಶ’ದಲ್ಲಿ ಅವರು ಮಾತನಾಡಿದರು.

ಸಾಚಾರ್‌ ಸಮಿತಿ ವರದಿಯು ಸಮಾನತೆಯ ಪರವಾಗಿದೆಯೇ ಹೊರತು ಮುಸ್ಲಿಂ ಸಮುದಾಯದ ಪರವಾಗಿಲ್ಲ. ವರದಿಯನ್ನು ಕೇಂದ್ರ ಸರ್ಕಾರವೇ ಜಾರಿಗೊಳಿಸಬೇಕಿಲ್ಲ. ರಾಜ್ಯ ಸರ್ಕಾರಗಳು ವರದಿಯಲ್ಲಿರುವ ಸಲಹೆಗಳನ್ನು ಜಾರಿಗೆ ತರಬಹುದು ಎಂದರು.

ಕೆಲ ರಾಜಕೀಯ ಪಕ್ಷಗಳು ಮುಸ್ಲಿಂ ಸಮುದಾಯವನ್ನು ಕೇವಲ ಮತ ಬ್ಯಾಂಕ್‌ಗಾಗಿ ಬಳಸಿಕೊಳ್ಳುತ್ತಿದೆ. ನಿಜವಾಗಿ ಕಾಳಜಿ ಇದ್ದರೆ ಸಾಚಾರ್‌ ವರದಿ ಜಾರಿಗೆ ತರಲಿ ಎಂದು ಅವರು ಸವಾಲು ಹಾಕಿದರು.

ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಿರುವ ಲೋಕಸಭಾ ಕ್ಷೇತ್ರಗಳನ್ನೆ ಮೀಸಲು ಕ್ಷೇತ್ರಗಳನ್ನಾಗಿ ಮಾಡಲಾಗಿದೆ. ಸಾಚಾರ್ ವರದಿ ಪ್ರಕಾರ ಅಂತ ಕ್ಷೇತ್ರಗಳನ್ನು ಮುಸ್ಲಿಂರಿಗೆ ಮೀಸಲುಗೊಳಿಸಿದರೆ ಲೋಕಸಭೆಗೆ 30–40 ಸಂಸದರು ಮುಸ್ಲಿಂ ಸಮುದಾಯದಿಂದ ಆಯ್ಕೆಯಾಗಲಿದ್ದಾರೆ ಎಂದು ಹೇಳಿದರು.
ಯಾವುದೇ ದೇಶದ ಸರ್ಕಾರದ ಮೇಲೆ ಅಲ್ಲಿನ ಅಲ್ಪಸಂಖ್ಯಾತರಿಗೆ ನಂಬಿಕೆ ಇಲ್ಲ ಎಂದಾದರೆ ಅದು ನ್ಯಾಯಬದ್ಧ ಸರ್ಕಾರ ಅಲ್ಲ. ವಿಶ್ವಾಸ ಗಳಿಸದಿದ್ದರೆ ಸರ್ಕಾರ ನ್ಯಾಯಯುತವಾಗಿ ನಡೆದುಕೊಳ್ಳುತ್ತಿಲ್ಲ ಎಂದೇ ಅರ್ಥ ಎಂದರು.

ಟಿಪ್ಪು ಸುಲ್ತಾನ್ 200 ವರ್ಷಗಳ ಹಿಂದೆ ಬ್ರಿಟಿಷರ ವಿರುದ್ಧ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿ ತನ್ನ ಪ್ರಾಣ ಮತ್ತು ಮಕ್ಕಳನ್ನೆ ಕಳೆದುಕೊಂಡ. ಆದರೆ ಈಗ ರಾಜಕೀಯಕ್ಕಾಗಿ ಟಿಪ್ಪು ವಿರುದ್ಧ ಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಮಾತನಾಡಿ, ಸಾಮಾಜಿಕ ನ್ಯಾಯ ಎಂದರೆ ಕೇವಲ ಮೀಸಲಾತಿ ಅಲ್ಲ. ಅದನ್ನೂ ಮೀರಿ ಧಾರ್ಮಿಕ ಸಮಾನತೆ ಮತ್ತು ದುಡಿಯುವ ಕೈಗಳಿಗೆ ಕೆಲಸ ಕೊಡಬೇಕಿದೆ ಎಂದರು.

ಸಾಮಾಜಿಕ ಭಯೋತ್ಪಾದನೆ ಇಂದು ಸವಾಲಾಗಿದೆ ಪರಿಣಮಿಸಿದೆ. ತಿನ್ನುವ ಆಹಾರದ ಮೇಲೂ ನಿರ್ಬಂಧ ಹೇರಲಾಗುತ್ತಿದೆ. ಇದರ ವಿರುದ್ಧ ಪ್ರಜಾಪ್ರಭುತ್ವ ನೆಲೆಯಲ್ಲಿ ಹೋರಾಟ ಗಟ್ಟಿಗೊಳ್ಳಬೇಕಿದೆ ಎಂದು ಹೇಳಿದರು.

Comments are closed.