ರಾಷ್ಟ್ರೀಯ

64 ಸಾವಿರ ಜನರಿಂದ 65,250 ಕೋಟಿ ರೂ. ಕಪ್ಪುಹಣ ಘೋಷಣೆ

Pinterest LinkedIn Tumblr

noteನವದೆಹಲಿ(ನ. 28): ನೋಟ್ ಬ್ಯಾನ್ ಮಾಡಿ ಕಾಳಧನಿಕರನ್ನು ಇಕ್ಕಟ್ಟಿಗೆ ತಳ್ಳಿರುವ ಕೇಂದ್ರ ಸರಕಾರ ಈಗ ಅವರಿಗೆ ಸರಿ ದಾರಿಗೆ ಬರಲು ಇನ್ನೊಂದು ಅವಕಾಶದ ಬಾಗಿಲು ತೆರೆದಿದೆ. ಈ ಸಂಬಂಧ ಆದಾಯ ತೆರಿಗೆ ಕಾನೂನಿಗೆ ಎರಡನೇ ತಿದ್ದುಪಡಿ ತರುವ ಹೊಸ ಮಸೂದೆಯನ್ನು ಮಂಡನೆಯ ಮಾಡಲಾಗಿದೆ. ತೆರಿಗೆ ವಂಚನೆ ಮಾಡಿ ಇರಿಸಿದ ಕಪ್ಪು ಹಣವನ್ನು ತಾವಾಗೇ ಆಚೆ ತಂದರೆ ಶೇ.50ರಷ್ಟು ಮಾತ್ರ ತೆರಿಗೆ ಪಾವತಿಸಬೇಕು. ಒಂದು ವೇಳೆ, ಸರಕಾರದ ಕೈಗೆ ಸಿಕ್ಕಿಬಿದ್ದರೆ 85% ದಂಡ ಪಾವತಿಸಬೇಕಾಗುತ್ತದೆ. ಕೇಂದ್ರ ಸರಕಾರ ನೀಡಿರುವ ಹೊಸ ಆಫರ್ ಪ್ರಕಾರ, ಕಪ್ಪು ಹಣ ಘೋಷಣೆ ಮಾಡಿದರೆ, ಆ ಹಣಕ್ಕೆ 30% ತೆರಿಗೆ ಮತ್ತು 10% ದಂಡ ಪಾವತಿಸಬೇಕು. ಜೊತೆಗೆ, 30% ತೆರಿಗೆ ಮೊತ್ತದ ಮೇಲೆ ಹೆಚ್ಚುವರಿ 33% ಮೇಲ್ ತೆರಿಗೆ(ಸರ್’ಚಾರ್ಜ್) ಪಾವತಿಸಬೇಕು. ಅಲ್ಲಿಗೆ, ಕಪ್ಪುಹಣದ ಶೇ.50 ಭಾಗವನ್ನು ದಂಡವಾಗಿ ಪಾವತಿಸಬೇಕಾಗುತ್ತದೆ. ಜೊತೆಗೆ, ಶೇ. 25 ಭಾಗವನ್ನು ಪ್ರಧಾನ ಮಂತ್ರಿ ಗರೀಬಿ ಕಲ್ಯಾಣ್ ಯೋಜನೆಗೆ 4 ವರ್ಷದ ಅವಧಿಯವರೆಗೆ ಠೇವಣಿ ಇಡಬೇಕು. ಅಧಿಕಾರಿಗಳು ಇದಕ್ಕೂ ಹೆಚ್ಚುವರಿಯಾಗಿ 10% ತೆರಿಗೆ ವಿಧಿಸುವ ವಿವೇಚನಾ ಅಧಿಕಾರ ಹೊಂದಿರುತ್ತಾರೆ.
ನಿಷೇಧಿತ ಹಳೆಯ 500 ಮತ್ತು 1000 ಮುಖಬೆಲೆಯ ನೋಟುಗಳಿರುವ ಕಪ್ಪುಹಣವನ್ನು ಘೋಷಣೆ ಮಾಡಿದರೆ 25% ತೆರಿಗೆ ಪಾವತಿಸಬೇಕೆಂದು ಹೊಸ ತಿದ್ದುಪಡಿಯಲ್ಲಿ ಸೇರಿಸಲಾಗಿದೆ.
ಇದೇ ವೇಳೆ, ಕಪ್ಪುಹಣ ಘೋಷಣೆ ಮಾಡದೇ ಸುಮ್ಮನಿರುವ ಕಾಳಧನಿಕರು ಸಿಕ್ಕಿಬಿದ್ದರೆ ಭಾರೀ ದಂಡ ತೆರಬೇಕಾಗುತ್ತದೆ. 85% ಹಣವನ್ನು ದಂಡವಾಗಿ ಪಾವತಿಸಬೇಕಾಗುತ್ತದೆ. ಕಪ್ಪುಹಣದ ಪ್ರಮಾಣವನ್ನು ಕಡಿಮೆ ತೋರಿಸಿದರೆ 50% ತೆರಿಗೆ ವಿಧಿಸುವುದು ಹಾಗೂ ತಪ್ಪು ಲೆಕ್ಕವನ್ನು ತೋರಿಸಿದರೆ 200% ತೆರಿಗೆ ವಿಧಿಸುವ ಕ್ರಮವನ್ನು ಮುಂದುವರಿಸಲಾಗುವುದು. ಪ್ರಧಾನಮಂತ್ರಿ ಗರೀಬಿ ಕಲ್ಯಾಣ್ ಯೋಜನೆಗೆ ಠೇವಣಿ ಇಡಲಾಗುವ ಹಣವನ್ನು ನೀರಾವರಿ, ಗೃಹ ನಿರ್ಮಾಣ, ಶೌಚಾಲಯ, ಮೂಲಭೂತ ಸೌಕರ್ಯ, ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ ಇತ್ಯಾದಿ ಯೋಜನೆಗಳಿಗೆ ವಿನಿಯೋಗಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಸರಕಾರ ನೀಡಿರುವ ಮಾಹಿತಿ ಪ್ರಕಾರ, ಆದಾಯ ಘೋಷಣೆ ಯೋಜನೆ (ಐಡಿಎಸ್) ಅಡಿಯಲ್ಲಿ 64 ಸಾವಿರ ಜನರು ಒಟ್ಟು 65,250 ಕೋಟಿ ರೂ. ಮೊತ್ತದ ಕಪ್ಪುಹಣವನ್ನು ಘೋಷಿಸಿದ್ದಾರೆನ್ನಲಾಗಿದೆ.
“ತೆರಿಗೆ ವಂಚನೆಯಿಂದ ರಾಷ್ಟ್ರದ ಆದಾಯಕ್ಕೆ ತೀವ್ರ ಧಕ್ಕೆ ಉಂಟಾಗುತ್ತದೆ. ಬಡತನ ನಿಗ್ರಹ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಸರಕಾರದ ಬಳಿ ಅವಶ್ಯಕ ಸಂಪನ್ಮೂಲ ಇಲ್ಲದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾರೂ ಕೂಡ ತೆರಿಗೆ ವಂಚನೆಯ ಕೆಲಸ ಮಾಡಬಾರದು” ಎಂದು ಈ ವೇಳೆ ಜೇಟ್ಲಿ ಮನವಿ ಮಾಡಿಕೊಂಡಿದ್ದಾರೆ.

Comments are closed.