ರಾಷ್ಟ್ರೀಯ

ಪ್ರಧಾನಿ ಮೋದಿಯನ್ನು ರಾಜಕೀಯದಿಂದಲೇ ಕಿತ್ತೆಸೆಯುತ್ತೇನೆ: ಮಮತಾ ಬ್ಯಾನರ್ಜಿ

Pinterest LinkedIn Tumblr

Mamata_PTIaಕೋಲ್ಕತಾ(ನ. 28): ನೋಟು ಅಮಾನ್ಯ ಮಾಡಿದ ಪ್ರಧಾನಿ ಮೋದಿ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಇಲ್ಲಿ ನಡೆದ ಬೃಹತ್ ಜನಾಕ್ರೋಶ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಕೇಂದ್ರ ಸರಕಾರದ ಕ್ರಮದಿಂದ ಬಡವರಿಗೆ ಹಲವು ರೀತಿಯಲ್ಲಿ ತೊಂದರೆಗಳಾಗಿವೆ ಎಂದು ವಿಷಾದಿಸಿದ್ದಾರೆ. ಬಡವರಿಗೆ ತೊಂದರೆ ಮಾಡುತ್ತಿರುವ ಈ ಕ್ರಮವನ್ನು ಕೂಡಲೇ ಹಿಂಪಡೆಯಬೇಕೆಂದು ದೀದಿ ಆಗ್ರಹಿಸಿದ್ದಾರೆ.
“ಮಾರುಕಟ್ಟೆ, ಸಿನಿಮಾ, ನಾಟಕ – ಇತ್ಯಾದಿ ಎಲ್ಲದರ ಮೇಲೆ ಪರಿಣಾಮ ಬೀರುತ್ತಿದೆ. ಆದರೂ ಪ್ರಧಾನಿಯವರು ಸಾಮಾನ್ಯ ಜನತೆಯ ನೋವಿನ ಬಗ್ಗೆ ತಲೆಯೇ ಕೆಡಿಸಿಕೊಳ್ಳುತ್ತಿಲ್ಲ” ಎಂದವರು ಟೀಕಿಸಿದ್ದಾರೆ.
“ಪ್ರಧಾನಿ ಮೋದಿಯನ್ನು ರಾಜಕೀಯದಿಂದಲೇ ಕಿತ್ತೆಸೆಯುತ್ತೇನೆ” ಎಂದು ಮಮತಾ ಬ್ಯಾನರ್ಜಿ ಹೇಳುತ್ತಿದ್ದಂತೆಯೇ ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಜನರು ಸಿಳ್ಳೆ ಹಾಕಿ ಕರತಾಡನ ಮಾಡಿದರು. ಸಮಾವೇಶದಲ್ಲಿ “ಮೋದಿ ಸರಕಾರ್ ಹೈ ಹೈ”, “ಸರ್ವಾಧಿಕಾರ್ ನಹೀ ಚಲೇಗಾ” ಎಂಬಂತಹ ಪ್ರತಿಭಟನಾ ಘೋಷಣೆಗಳು ಮೊಳಗಿದವು.
ಎಡಪಕ್ಷಗಳ ವಿಭಿನ್ನ ನಿಲುವು:
ಇದೇ ವೇಳೆ, ಮಮತಾ ಬ್ಯಾನರ್ಜಿಯವರ ಕಡುವಿರೋಧಿಯಾಗಿರುವ ಎಡಪಕ್ಷಗಳು ಕೂಡ “ಜನ್ ಆಕ್ರೋಶ್” ದಿನದ ಪ್ರತಿಭಟನೆ ನಡೆಸಿದವು. ಆದರೆ, ಟಿಎಂಸಿಯಂತೆ ಕಪ್ಪುಹಣದ ಶೇಖರಣೆ ಮಾಡಬೇಕೆನ್ನುವ ನಿಲುವು ತಮ್ಮದಲ್ಲ. ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ಮಾತ್ರ ತಾವು ವಿರೋಧಿಸುತ್ತಿರುವುದಾಗಿ ಎಡರಂಗದ ಅಧ್ಯಕ್ಷ ಬಿಮಾನ್ ಬೋಸ್ ತಿಳಿಸಿದ್ದಾರೆ. ಬಂಗಾಳದ ರಾಜಧಾನಿಯಲ್ಲಿ ಸಿಪಿಐ ಮತ್ತು ಸಿಪಿಎಂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

Comments are closed.